ಪ್ರಪಂಚದ ಉದ್ದಗಲಕ್ಕೂ ಮನುಷ್ಯನ ಕ್ರೌರ್ಯ, ಸ್ವಾರ್ಥ, ಲಾಲಸೆಗಳು ಹಬ್ಬಿಕೊಂಡಿವೆ. ಕಾಡು ಮೇಡುಗಳನ್ನು ಆವರಿಸಿಕೊಂಡು ಮುನ್ನುಗ್ಗುತ್ತಿರೋ ನಮಗೆಲ್ಲ ಪ್ರಾಣಿ ಪಕ್ಷಿಗಳ ಬಗ್ಗೆ, ಜೀವ ಸಂಕುಲದ ಬಗ್ಗೆ ಕಿಂಚಿತ್ತು ಕಾಳಜಿಯೂ ಇಲ್ಲ. ನಾವು ಹಾಗೆ ಆಕ್ರಮಿಸಿಕೊಂಡು ಉಳಿದ ಕಾಡಿನಿಂದ ಆನೆಗಳು ಆಹಾರ ಅರಸಿ ನುಗ್ಗಿ ಬಂದರೆ ಹುಯಿಲೆಬ್ಬಿಸುತ್ತೇವೆ. ಮನೆಯ ಆಸುಪಾಸಲ್ಲಿ ಹುಲಿ, ಚಿರತೆಗಳು ಕಂಡರೆ ಜೀವ ಭಯದಿಂದ ಹೌಹಾರುತ್ತೇವೆ. ಆದರೆ ನಮ್ಮ ಆಕ್ರಮಣ ಅವುಗಳಿಗೆ ಅದೆಂಥಾ ಜೀವ ಭಯ ತಂದಿರಬಹುದೆಂಬುದನ್ನ ಮಾತ್ರ ಅಪ್ಪಿತಪ್ಪಿಯೂ ಆಲೋಚಿಸೋದಿಲ್ಲ. ಇಂಥಾ ದುರಂತಗಳಾಚೆಗೂ ಜಗತ್ತಿನ ಕೆಲ ಪ್ರದೇಶಗಳಲ್ಲಿ ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ಬದುಕುತ್ತಿವೆ.
ಅಂಥಾ ಪ್ರದೇಶಗಳಿಗೊಂದು ಉದಾಹರಣೆ ಕೊಡಬೇಕೆಂದರೆ ಕ್ರಿಸ್ಮಸ್ ಐಲ್ಯಾಂಡಿಗಿಂತಲೂ ಸೂಕ್ತವಾದದ್ದು ಬೇರೊಂದಿಲ್ಲ. ಪ್ರಾಕೃತಿಕ ಸೌಂದರ್ಯದ ಗಣಿಯಂತಿರೋ ಈ ಪ್ರದೇಶದಲ್ಲಿ ನಜ ವಸತಿ ಇದೆ. ಆದರೆ ಜನರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಅಲ್ಲಿರೋದು ಏಡಿಗಳು. ಅವು ಆ ಪ್ರದೇಶದಲ್ಲಿ ಅದೆಷ್ಟೋ ವರ್ಷಗಳಿಂದ ಜೀವಿಸುತ್ತಿದ್ದಾವೆ. ಅವುಗಳ ಸಂಖ್ಯೆಯೇನು ಸಾಮಾನ್ಯ ಮಟ್ಟದ್ದಲ್ಲ. ಸರಿಸುಮಾರು ಐದು ಕೋಟಿಗೂ ಹೆಚ್ಚು ಏಡಿಗಳು ಆ ದ್ವೀಪದಲ್ಲಿವೆ. ಅಚ್ಚರಿಯೆಂದರೆ, ಅವೆಲ್ಲವೂ ಮನುಷ್ಯರಷ್ಟೇ ನಿರ್ಭೀತಿಯಿಂದ ಎಲ್ಲೆಂದರಲ್ಲಿ ಓಡಾಡಿಕೊಂಡಿರುತ್ತವೆ.
ಅವು ಅಷ್ಟಾಗಿ ಮನುಷ್ಯರ ತಂಟೆಗೆ ಹೋಗೋದಿಲ್ಲ. ಅಲ್ಲಿ ವಾಸಿಸುವವರೂ ಕೂಡಾ ಅವುಗಳನ್ನು ಜೊತೆಗಾರರಂತೆಯೇ ಪೊರೆಯುತ್ತಾರೆ. ವಾಹನ, ಕಾಲ್ತುಳಿತ ಸೇರಿದಂತೆ ಎಲ್ಲ ಅಪಾಯಗಳಿಂದಲೂ ತಾವೇ ಸಂರಕ್ಷಿಸುತ್ತಾ ಬಂದಿದ್ದಾರೆ. ಪ್ರತೀ ವರ್ಷವೂ ಒಂದು ಸೀಜನ್ನಿನಲ್ಲಿ ಅವು ಸಂತಾನೋತ್ಪತ್ತೆಗೆಂದು ಸಮುದ್ರ ತೀರಕ್ಕಿಳಿಯುತ್ತವೆ. ಆ ಸಂದರ್ಭದಲ್ಲಿ ಅವುಗಳ ಹಿಂಡನ್ನು ನೋಡೋದೇ ಹಬ್ಬ. ಅಂಥಾ ಸಂದರ್ಭದಲ್ಲಿ ಅವುಗಳಿಗೆ ಅನುಕೂಲವಾಗುವಂತೆ ರಸ್ತೆ ದಾಟಲು ಅನುವಾಗುವಂತೆ ಅಲ್ಲಲ್ಲಿ ವಿಭಿನ್ನವಾದ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಏಡಿಗಳನ್ನು ಕಣ್ತುಂಬಿಕೊಳ್ಳಲೆಂದೇ ಆ ಪ್ರದೇಶಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತೆ.