ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋದು ನಮ್ಮ ನಡುವೆ ಚಾಲ್ತಿಯಲ್ಲಿರುವ ಪುರಾತನ ನುಡಿಗಟ್ಟು. ಆದರೆ ಕೆಲ ಮಂದಿಗೆ ಮಾತ್ರ ಪೂರ್ತಿ ಕೆಟ್ಟ ನಂತರವೂ ಬುದ್ಧಿ ನೆಟ್ಟಗಾಗುವುದಿಲ್ಲ. ಈ ಮಾತಿಗೆ ತಾಜಾ ಉದಾಹರಣೆಯಂತಿರೋದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತಲುಪಿಕೊಂಡಿರುವ ಶೋಚನೀಯ ಸ್ಥಿತಿ. ಎರಡೆರಡು ಸಾರಿ ಹೀನಾಯವಾಗಿ ಸೋತರೂ ಕೂಡಾ ಇದರ ಮುಖ್ಯ ನಾಯಕರಿಗೆ ಸತ್ಯದರ್ಶನವಾಗಲೇ ಇಲ್ಲ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಯಾಕೆ ಈ ಪರಿಯಾಗಿ ಅದಃಪಾತಾಳ ಕಂಡಿತೆಂಬ ಪ್ರಶ್ನೆಯನ್ನು ಅದರ ನಾಯಕರು ತಮಗೆ ತಾವೇ ಕೇಳಿಕೊಳ್ಳಲಿಲ್ಲ. ಅದರ ಫಲವಾಗಿ ಇಡೀ ಪಕ್ಷವೇ ಹಳ್ಳ ಹಿಡಿದು ಹೋಗಿದೆ. ಹೀಗೆ ಕಾಂಗ್ರೆಸ್ ಅಳಿವಿನ ಅಂಚಿನಲ್ಲಿರುವಾಗ ಅಧಿನಾಯಕಿ ಸೋನಿಯಾ ಗಾಂಧಿಗೆ ಮೆಲ್ಲಗೆ ಜ್ಞಾನೋದಯವಾದಂತಾಗಿದೆ.
ಅತೀ ಹೆಚ್ಚು ಕಾಲ ಅಧಿಕಾರದಲ್ಲಿದ್ದುದರಿಂದಾಗಿ ಬರ ಬರುತ್ತಾ ಕಾಂಗ್ರೆಸ್ನದ್ದು ಆನೆ ನಡೆದದ್ದೇ ದಾರಿ ಎಂಬಂತಾಗಿತ್ತು. ನೋಡ ನೋಡುತ್ತಲೇ ಎಲ್ಲ ಆಶಯಗಳನ್ನೂ ಮೀರಿ ಕುಟುಂಬ ರಾಜಕಾರಣ ಮೇರೆ ಮೀರಿಕೊಂಡಿತ್ತು. ನಾನಾ ಡೌಲು ಮಾಡುತ್ತಾ ಅಧಿಕಾರಕ್ಕೆ ಬಂದ ನಾಯಕರೆಲ್ಲ ತಮ್ಮ ಮಕ್ಕಳು ಸಂಬಂಧಿಗಳನ್ನೇ ಅಧಿಕಾರ ರಾಜಕಾರಣದ ಮುಂಚೂಣಿಯಲ್ಲಿ ನಿಲ್ಲಿಸಲಾರಂಭಿಸಿದ್ದರು. ಕಾರ್ಯಕರ್ತರೆಲ್ಲ ಕಾರ್ಯಕರ್ತರಾಗಿಯೇ ಉಳಿಯುವಂಥಾ ದುಃಸ್ಥಿತಿ ಮತ್ತು ಅದರ ವಿರುದ್ಧ ಒಳಗೊಳಗೇ ಹರಳುಗಟ್ಟಿಕೊಂಡಿದ್ದ ಮನಸ್ಥಿತಿಗಳನ್ನು ಅರಿಯುವಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಎಲ್ಲ ನಾಯಕರೂ ವಿಫಲರಾಗಿದ್ದರು.
ಇದೀಗ ಕುಟುಂಬ ರಾಜಕಾರಣದಿಂದ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಕೊಚ್ಚಿಕೊಂಡು ಹೋಗುತ್ತಿರುವ ಹೊತ್ತಿನಲ್ಲಿ, ಸೋನಿಯಾ ಗಾಂಧಿ ಕಡೆಯಿಂದ ಮಹತ್ವದ ನಿರ್ಧಾರವೊಂದು ಹೊರ ಬಿದ್ದಿದೆ. ಒಂದು ಕುಟುಂಬ ಒಂದೇ ಟಿಕೆಟ್ ಎಂಬಂಥಾ ಮಹತ್ವದ ನಿರ್ಧಾರವೂ ಸೇರಿದಂತೆ ಇದೀಗ ಒಂದಷ್ಟು ಸುಧಾರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೋರಲು ಬಿದ್ದರೂ ಅಧಿಕಾರ ದಾಹದಿಂದ ಕಂಗಾಲಾಗಿರುವ ಕೆಲ ಕಾಂಗ್ರೆಸ್ ನಾಯಕರಿಗೆ ಇದು ಹಿಡಿಸದಿದ್ದರೂ ಕೂಡಾ ಇದೊಂದು ಸರಿಯಾದ ಕ್ರಮ ಎಂಬ ಅಭಿಪ್ರಾಯಗಳೇ ಎಲ್ಲೆಡೆಯಿಂದ ಕೇಳಿ ಬರಲಾರಂಭಿಸಿವೆ.
ಹಾಗೆ ನೋಡಿದರೆ, ಇಂಥಾ ಸುಧಾರಣೆಯ ಕ್ರಮಗಳನ್ನು ಕಾಂಗ್ರೆಸ್ ನಾಯಕರು ಈ ಹಿಂದೆಂದೂ ತರಲೇ ಇಲ್ಲ. ಅಷ್ಟೊಂದು ಸೂಕ್ಷ್ಮತೆಯಿಂದ ಮುಂದುವರೆದಿದ್ದರೆ ಖಂಡಿತವಾಗಿಯೂ ಇಂಥಾ ಸ್ಥಿತಿಗೆ ಪಕ್ಷ ಇಳಿಯುತ್ತಲೂ ಇರಲಿಲ್ಲ. ವಿಶೇಷವೆಂದರೆ ಅಧಿಕಾರದ ಹತ್ತಿರ ಬರಲೂ ತಿಣುಕಾಡುತ್ತಿದ್ದ ಬಿಜೆಪಿ ಈಗ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಅದಕ್ಕೆ ಕಾರಣ ಹತ್ತಾರಿರಬಹುದು. ಆದರೆ ಪ್ರಧಾನ ಕಾರಣವಾಗಿರೋದು ಕಾಂಗ್ರೆಸ್ನ ಆಂತರಿಕ ವೈಫಲ್ಯಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಇದೆಲ್ಲದರ ನಡುವೆ ಇದೀಗ ಸುಧಾರಿತ ಕ್ರಮಗಳು ಬಂದಿವೆ. ಅದು ಕಾಂಗ್ರೆಸ್ ಪಾಲಿಗೆ ವರವಾಗ ಬಹುದಾ ಎಂಬುದನ್ನು ಕಾದು ನೋಡ ಬೇಕಿದೆ.