ಅದ್ಯಾವ ದೇಶ, ಭಾಷೆಗಳ ಮಂದಿಯೇ ಇರಲಿ; ತಾಯ್ತನ, ತಂದೆಯಾಗೋ ಸಂಭ್ರಮವೆಲ್ಲ ಒಂದೇ ಆಗಿರುತ್ತೆ. ಮದುವೆ ಮುಂತಾದ ಸಂಪ್ರದಾಯಗಳಲ್ಲಿ ವ್ಯತ್ಯಾಸವಿದ್ದರೂ ಅದರ ಪುಳಕಗಳಲ್ಲಿ ಸಾಮ್ಯತೆ ಇದ್ದೇ ಇದೆ. ಹಾಗಿದ್ದ ಮೇಲೆ ನಮ್ಮಲ್ಲಿರೋ ಒಂದಷ್ಟು ನಂಬಿಕೆಗಳೂ ಕೂಡಾ ಪರಸ್ಪರ ಮ್ಯಾಚ್ ಆಗೋದ್ರಲ್ಲಿ ಅಚ್ಚರಿಯೇನಿಲ್ಲ. ನಮ್ಮದು ಹೇಳಿ ಕೇಳಿ ಸಂಪ್ರದಾಯ, ನಂಬಿಕೆಗಳಿಂದ ತುಂಬಿಕೊಂಡಿರೋ ನೆಲ. ಇಲ್ಲಿ ಅದಕ್ಕೆ ತಕ್ಕುದಾದ ಅನೇಕಾನೇಕ ಆಚರಣೆಗಳಿವೆ, ನಂಬಿಕೆಗಳಿವೆ. ಆದ್ರೆ ನಮ್ಮತನದ ಬಗ್ಗೆ ನಮಗೆ ತಾತ್ಸಾರ ಹೆಚ್ಚು. ಆದ್ದರಿಂದಲೇ ಅದೆಲ್ಲವನ್ನೂ ಒಂದೇ ದೃಷ್ಟಿಕೋನದಿಂದ ನೋಡಿ ಮೂಢನಂಬಿಕೆಯೆಂಬ ಲೇಬಲ್ಲು ಅಂಟಿಸಿ ಕಡೆಗಣಿಸಿ ಬಿಡುತ್ತೇವೆ. ನಂಬಲೇ ಬೇಕಾದ ವಿಚಾರ ಅಂದ್ರೆ, ಕೆಲವಾರು ನಂಬಿಕೆಗಳು ನಮಗೆ ಮಾತ್ರವೇ ಸೀಮಿತವಲ್ಲ. ಕೆಲ ಮೂಢ ನಂಬಿಕೆಗಳಂಥವು ಬೇರೆ ದೇಶಗಳಲ್ಲಿಯೂ ಇವೆ.
ಈ ಮಾತಿಗೆ ಉದಾಹರಣೆಯಾಗಿ ನಿಲ್ಲೋದು ಚೀನಾ. ಕೊರೋನಾ ವೈರಸ್ಸಿನ ಮೂಲಕ ಚೀನಾ ಇಡೀ ವಿಶ್ವದಲ್ಲಿ ವಿಲನ್ ಸ್ಥಾನ ಪಡೆದುಕೊಂಡಿದೆ. ಸದಾ ಒಂದಿಲ್ಲೊಂದು ಕಿತಾಪತಿಗೆ ಹೆಸರಾಗಿರೋ ಈ ದೇಶ ಹೆಚ್ಚಿನ ಜನಸಂಖ್ಯೆಗೂ ಫೇಮಸ್ಸು. ಬೇರೆಲ್ಲವನ್ನೂ ಬದಿಗಿಟ್ಟು ನೋಡಿದರೆ ಆ ದೇಶದೊಳಗೆ ಬೆರಗಾಗಿಸೋ ನಾನಾ ವಿಚಾರಗಳಿರೋದು ಸುಳ್ಳಲ್ಲ. ಅದ್ರಲ್ಲೂ ಅಲ್ಲಿನ ಜನರ ಬದುಕಿನಲ್ಲಿ ನಮ್ಮಲ್ಲಿರುವಂಥಾದ್ದೇ ನಂಬಿಕೆಗಳು ಹಾಸುಹೊಕ್ಕಾಗಿವೆ. ಅಂಥಾದ್ದೇ ಒಂದು ನಂಬಿಕೆ ಅಲ್ಲಿನ ಪ್ರಾಂತ್ಯ ಒಂದರಲ್ಲಿ ಈವತ್ತಿಗೂ ಜೀವಂತವಾಗಿದೆ. ಅದೊಂಥರಾ ಗಂಡು ಜನುಮಕ್ಕೆ ಅಪ್ಪನಾಗೋ ಸಂಭ್ರವೂ ಬೆಚ್ಚಿ ಬೀಳುವಂಥಾ ಸಂಪ್ರದಾಯ.
ಚೀನಾದ ಆ ಪ್ರಾಂತ್ಯದಲ್ಲಿ ಓರ್ವ ಗಂಡ ತನ್ನ ಹೆಂಡತಿ ಗರ್ಭಿಣಿಯಾದಾಕ್ಷಣವೇ ಬೆವರಾಡಲು ಶುರುವಿಡುತ್ತಾನೆ. ಯಾಕಂದ್ರೆ, ಆತನಿಗೆ ಅಪ್ಪನಾಗೋ ಸಂಭ್ರಮಕ್ಕೆ ಗರ್ಭೀಣಿ ಮಡದಿಯನ್ನೆತ್ತಿಕೊಂಡು ನಿಗಿನಿಗಿಸೋ ಕೆಂಡದ ಮೇಲೆ ನಡೆಯೋ ಕಂಟಕವೆದುರಾಗುತ್ತೆ. ನಮ್ಮಲ್ಲಿ ನಾನಾ ಹರಕೆ ಹೊತ್ತು ಕೆಂಡ ಹಾಯೋ ಸಂಪ್ರದಾಯವಿದೆಯಲ್ಲಾ? ಅದೂ ಕೂಡಾ ಹೆಚ್ಚೂ ಕಮ್ಮಿ ಹಾಗೆಯೇ.
ನಮ್ಮಲ್ಲಿಯಾದರೆ ಕೆಂಡ ಹಾಯೋವಲ್ಲಿ ಹೆಚ್ಚು ಜನ ಇದ್ದರೆ ಮೊದಲು ಹಾಯುವವರಿಗೆ ಮಾತ್ರ ಬಿಸಿ ತಾಗುತ್ತೆ. ಕಡೇಗೆ ನಡೆಯುವವರ ಪಾದದಡಿ ಉಳಿಯೋದು ಇದ್ದಿಲ ಮಸಿ ಮಾತ್ರ. ಆದರೆ ಚೀನಾದಲ್ಲಿ ಗರ್ಭೀಣಿ ಮಡದಿಯನ್ನು ಎತ್ತಿಕೊಂಡು ಕೆಂಡ ಹಾಯೋ ಬಡಪಾಯಿ ಗಂಡನಿಗೆ ಮಸಿಯ ಭಾಗ್ಯವಿಲ್ಲ. ಯಾಕಂದ್ರೆ ಅಪ್ಪ ಆದದ್ದು ಅವನೊಬ್ಬನೇ ಆದ್ದರಿಂದ ನಿಗಿನಿಗಿ ಕೆಂಡವನ್ನ ಆತನೇ ಹಾಯಬೇಕು. ಅದೂ ಬರಿಗಾಲಿನಲ್ಲಿ. ಅದೇನೇ ದೈವಶಕ್ತಿ, ಭ್ರಮೆಗಳಿದ್ದರೂ ಗಂಡನ ಪಾದಗಳಲ್ಲಿ ಬಿಸಿಗೆ ಬಿರಿದ ಬೊಬ್ಬೆಗಳು ಖಾಯಂ. ಒಂದಷ್ಟು ದಿನ ಆ ಉರಿ ಗಾಯದಲ್ಲಿ ನರಳೋ ಶಿಕ್ಷೆಯೂ ಆತನಿಗೆ ಕಟ್ಟಿಟ್ಟ ಬುತ್ತಿ. ಅಂದಹಾಗೆ, ಈ ರೀತಿ ಕೆಂಡ ಹಾಯೋದರಿಂದ ಮಗು ಸಲೀಸಾಗಿ ಈ ಜಗತ್ತಿಗೆ ಕಣ್ತೆರೆಯುತ್ತೆ, ನೋವಿಲ್ಲದೆ ಪ್ರಸವವಾಗುತ್ತೆ ಅನ್ನೋ ನಂಬಿಕೆ ಅಲ್ಲಿನ ಜನರಲ್ಲಿದೆಯಂತೆ.