ಕನ್ನಡ ಚಿತ್ರರಂಗವೀಗ ಗೆಲುವಿನ ನಾಗಾಲೋಟದಲ್ಲಿದೆ. ಎಲ್ಲರ ಚಿತ್ರವೂ ಸ್ಟಾರ್ಗಳ ಸಿನಿಮಾಗಳತ್ತ ನೆಟ್ಟುಕೊಂಡು, ಪ್ಯಾನಿಂಡಿಯಾ ಕನವರಿಕೆಯಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಅದರ ನಡುವಲ್ಲಿಯೇ ಸೀಮಿತ ಚೌಕಟ್ಟಿನಲ್ಲಿಯೂ ಪ್ರೇಕ್ಷಕರ ಅಭಿರುಚಿಯನ್ನು ಕಾಪಿಟ್ಟುಕೊಳ್ಳುವಂಥಾ ಭಿನ್ನ ಪ್ರಯತ್ನಗಳು ಒಂದರ ಹಿಂದೊಂದರಂತೆ ನಡೆಯುತ್ತಿವೆ. ಹೀಗೆ ಪಕ್ಕಾ ಕಮರ್ಶಿಯಲ್ ಸಿನಿಮಾಗಳ ಶಕೆಯೊಂದು ಆರಂಭವಾಗಿರುವ ಈ ಹೊತ್ತಿನಲ್ಲಿ, ಒಂದಷ್ಟು ಸಿನಿಮಾ ಪ್ರೇಮಿಗಳು ಕಾದಂಬರಿ ಆಧಾರಿತ ಸೂಕ್ಷ್ಮ ಕಥಾನಕಗಳನ್ನು ಕನವರಿಸುತ್ತಿದ್ದಾರೆ. ಅಂಥ ಸದಬಿರುಚಿಯ ಪ್ರೇಕ್ಷಕರೆಲ್ಲ ಖುಷಿಗೊಳ್ಳುವಂತೆ `ಚೌಕಬಾರ’ ಎಂಬ ಸಿನಿಮಾವೊಂದು ರೂಪುಗೊಂಡು, ಬಿಡುಗಡೆಗೆ ತಯಾರಾಗಿ ನಿಂತಿದೆ!
ಅಂದಹಾಗೆ, ಚೌಕಬಾರ ಚಿತ್ರ ಹಂತ ಹಂತವಾಗಿ ಸುದ್ದಿ ಮಾಡುತ್ತಾ, ಈಗಾಗಲೇ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ವಿಶೇಷವೆಂದರೆ, ತೊಂಭತ್ತರ ದಶಕದ ಆರಂಭ ಕಾಲದಿಂದಲೂ ಕಿರುತೆರೆಯಲ್ಲಿ ಸ್ಟಾರ್ಗಿರಿ ಪಡೆದುಕೊಂಡಿದ್ದ ವಿಕ್ರಮ್ ಸೂರಿ ಈ ಸಿನಿಮಾವನ್ನು ನಿರ್ದೇಶಕನ ಮಾಡಿದ್ದಾರೆ. ಅವರ ಮಡದಿ ನಮಿತಾ ರಾವ್ ನಿರ್ಮಾಣದೊಂದಿಗೆ, ನಾಯಕಿಯಾಗಿಯೂ ನಟಿಸಿದ್ದಾರೆ. ಕಿರುತೆರೆಯಲ್ಲಿ ಸ್ಟಾರ್ ಜೋಡಿ ಅಂತಲೇ ಹೆಸರಾಗಿರುವ ಈ ದಂಪತಿ ಚೌಕಬಾರದೊಂದಿಗೆ ಸಿನಿಮಾ ನಿರ್ಮಾಣ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಬದುಕಿನ ಸೂಕ್ಷ್ಮ ಪದರುಗಳನ್ನು ತೆರೆದಿಡುವ, ಭಾವನಾತ್ಮಕ ಅಂಶಗಳನ್ನೊಳಗೊಂಡಿರುವ ಚೆಂದದ ಸಿನಿಮಾವೊಂದನ್ನು ರೂಪಿಸಿದ ತುಂಬು ಖುಷಿ ಈ ದಂಪತಿಯ ಕಣ್ಣುಗಳಲ್ಲಿ ಕುಣಿದಾಡುತ್ತಿದೆ.
ಮಣಿ ಆರ್ ರಾವ್ ಬರೆದಿರುವ ಭಾವನಾ ಎಂಬ ಕಾದಂಬರಿ ಸಾಹಿತ್ಯ ಲೋಕದ ಗಮನ ಸೆಳೆದಿತ್ತು. ಅದನ್ನು ಬಹುವಾಗಿ ಮೆಚ್ಚಿಕೊಂಡ ವಿಕ್ರಮ್ ಸೂರಿ ಅದಕ್ಕೆ ದೃಷ್ಯ ರೂಪ ಕೊಡಲು ಮುಂದಾಗಿದ್ದರು. ಮಡದಿ ನಮಿತಾರ ಒತ್ತಾಸೆಯ ಮೇರೆಗೆ ತಾವೇ ಹೋಂ ಬ್ಯಾನರ್ ತೆರೆದು, ಆ ಮೂಲಕವೇ ನಿರ್ಮಾಣದ ಸಾಹಸಕ್ಕೂ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಭಾವನಾತ್ಮಕ ಅಂಶಗಳನ್ನು ಒಳಗೊಂಡಿರುವ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತೆ ಮೂಡಿ ಬಂದಿದೆಯಂತೆ. ಈ ಮೂಲಕ ಕಿರುತೆರೆಯ ಸ್ಟಾರ್ ಜೋಡಿ ಮತ್ತೆ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದೆ. ಖುದ್ದ ಡಾ.ರಾಜ್ಕುಮಾರ್ ಅವರಿಂದಲೇ ಮೆಚ್ಚುಗೆ ಪಡೆದುಕೊಂಡಿದ್ದ ಪ್ರತಿಭೆ ನಮಿತಾ ಇಲ್ಲಿ ಚೆಂದದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಚೌಕಬಾರ ಫೆಬ್ರವರಿ ತಿಂಗಳಲ್ಲಿ ತೆರೆಗಾಣಲಿದೆ. ವಿಶೇಷವೆಂದರೆ, ಈ ಚಿತ್ರದ ಆಡಿಯೋ ಲಾಂಚ್ ಅನ್ನು ಪುನೀತ್ ರಾಜ್ಕುಮಾರ್ ಮಾಡಿದ್ದರು. ಸಿನಿಮಾದ ಬಗ್ಗೆ ಭರವಸೆಯ ಮಾತುಗಳನ್ನಾಡಿ ಶುಭ ಹಾರೈಸಿದ್ದರು.
ಕಾದಂಬರಿ ಆಧಾರಿತ ಚಿತ್ರಗಳೆಂದರೇನೇ ಪ್ರೇಕ್ಷಕರ ಮನಸಲ್ಲೊಂದು ಆಹ್ಲಾದದ ಛಳುಕು ಮೂಡಿಕೊಳ್ಳುತ್ತೆ. ಅದ್ಯಾವ ಬಗೆಯ ಸಿನಿಮಾಗಳ ಭರಾಟೆಯಿದ್ದರೂ ಕಾದಂಬರಿ ಆಧಾರಿತ ಚಿತ್ರಗಳ ಫ್ಲೇವರ್ ಮಾತ್ರ ಈವತ್ತಿಗೂ ತಗಾಜಾ ಅನುಭೂತಿಯನ್ನು ಕಾಪಿಟ್ಟುಕೊಂಡಿದೆ. ಅಂಥಾ ಪ್ರೇಕ್ಷಕ ವರ್ಗವನ್ನು ಸಂತೃಪ್ತಗೊಳಿಸುವ ಗುಣಗಳೊಂದಿಗೆ ರೂಪುಗೊಂಡಿರುವ ಚಿತ್ರ ಚೌಕಬಾರ. ನಟನಾಗಿ ಈಗಾಗಲೇ ಬಲು ಪ್ರಸಿದ್ಧಿ ಪಡೆದುಕೊಂಡಿರುವ ವಿಕ್ರಮ್ ಸೂರಿ ನಿರ್ದೇಶಕನಾಗಿ ಈ ಮೂಲಕ ಎರಡನೇ ಬಾರಿ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ. ಸಾಕಷ್ಟು ತಯಾರಿ ಮಾಡಿಕೊಂಡೇ ಈ ಚಿತ್ರವನ್ನು ರೂಪಿಸಿರುವ ಅವರಿಗೆ, ಚೌಕಬಾರ ಜನಮನ ಸೆಳೆಯುತ್ತದೆಂಬಂಥಾ ತುಂಬು ನಂಬಿಕೆ ಇದೆ. ಇದರ ಕಂಟೆಂಟು, ತಯಾರುಗೊಂಡಿರುವ ರೀತಿಯನ್ನೆಲ್ಲ ಗಮನಿಸಿದರೆ ಅದು ನಿಜವಾಗೋ ಲಕ್ಷಣಗಳೇ ಮಿರುಗಿದಂತೆ ಭಾಸವಾಗುತ್ತಿದೆ.