ಕೆಲ ನಟ ನಟಿಯರು ಒಂದೆರಡು ಸಿನಿಮಾಗಳಲ್ಲಿ ನಟಿಸಿ, ಒಂದಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಲೇ ಸ್ಟಾರ್ಗಿರಿಯ ಗತ್ತು ಪ್ರದರ್ಶಿಸಲಾರಂಭಿಸುತ್ತಾರೆ. ಇನ್ನೂ ಕೆಲ ಮಂದಿ ನೆಟ್ಟಗೆ ಒಂದು ಸಿನಿಮಾದಲ್ಲಿ ನಟಿಸಿ ಸಾವರಿಸಿಕೊಳ್ಳೋ ಮುನ್ನವೇ, ತಮಗೆ ತಾವೇ ಬಿರುದು ಕೊಟ್ಟುಕೊಂಡು, ಪೇಯ್ಡ್ ಅಭಿಮಾನಿಗಳನ್ನು ಸುತ್ತ ಬಿಟ್ಟುಕೊಂಡು ಮೆರೆಯಲಾರಂಭಿಸುತ್ತಾರೆ. ಇಂಥಾ ಜಗತ್ತಿನಲ್ಲಿ ಸಿಕ್ಕ ಖ್ಯಾತಿ, ದಂಡಿ ದಂಡಿ ಅಭಿಮಾನವನ್ನೆಲ್ಲ ವಿನಮ್ರವಾಗಿ ಸ್ವೀಕರಿಸಿ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕೋ ಸ್ಟಾರುಗಳನ್ನು ನೋಡಿದರೆ ನಿಜಕ್ಕೂ ಗೌರವ ಮೂಡಿಕೊಳ್ಳುತ್ತೆ. ಹಾಗೊಂದು ಗೌರವಕ್ಕೆ ಪಾತ್ರರಾಗಿರುವವರಲ್ಲಿ ನಮ್ಮ ರಾಜಣ್ಣ ಪ್ರಮುಖರಾದರೆ, ಈವತ್ತಿಗೆ ಆ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಇನ್ನುಳಿದಂತೆ, ಪಕ್ಕದ ತಮಿಳು ಚಿತ್ರರಂಗದ ವಿಚಾರಕ್ಕೆ ಬರೋದಾದರೆ, ತನ್ನ ಸಿಂಪ್ಲಿಸಿಟಿಯ ಮೂಲಕವೇ ಭಿನ್ನವಾಗಿ ನಿಲ್ಲುವವರು ಚಿಯಾನ್ ವಿಕ್ರಂ!
ಅಭಿಮಾನಿಗಳು ಎದುರು ಬಂದು ನಿಂತರೂ, ಆಸುಪಾಸಲ್ಲಿ ಯಾರೇ ಇದ್ದರೂ ಅತ್ಯಂತ ಆತ್ಮೀಯವಾಗಿ ವರ್ತಿಸೋದು ವಿಕ್ರಂ ಸ್ಪೆಷಾಲಿಟಿ. ಅವರೊಂದಿಗೆ ಯಾರೇ ಸಿನಿಮಾಗಳಲ್ಲಿ ಕೆಲಸ ಮಾಡಿದರೂ ವಿಕ್ರಂ ಬಗೆಗೊಂದು ವಿಶೇಷ ಗೌರವ ಮೂಡಿಕೊಳ್ಳುತ್ತಿದೆ. ಅದರಲ್ಲಿಯೂ ತನ್ನ ಮನೆಯ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವವರನ್ನೆಲ್ಲ ವಿಕ್ರಂ ತನ್ನ ಕುಟುಂಬದ ಸದಸ್ಯರೆಂದೇ ಪರಿಭಾವಿಸುತ್ತಾರೆ. ಇತ್ತೀಚೆಗೆ ಅವರ ಮನೆಯ ಪರಿಚಾರಕನ ಮಗನ ಮದುವೆಯಿತ್ತು. ಆ ಮದುವೆಗೆ ಸಾಮಾನ್ಯರಂತೆಯೇ ಆಗಮಿಸಿ, ವಧೂವರರನ್ನು ಆಶೀರ್ವದಿಸುವ ಮೂಲಕ ವಿಕ್ರಂ ತಮ್ಮ ಮೇಲಿನ ಅಭಿಮಶಾನ ಇಮ್ಮಡಿಗೊಳ್ಳುವಂತೆ ಮಾಡಿದ್ದಾರೆ.
ಯಾವುದೇ ತಟವಟಗಳಿಲ್ಲದೆ ತಾನಾಯಿತು ತನ್ನ ಸಿನಿಮಾ ಕೆಲಸವಾಯಿತು ಎಂಬಂತೆ ಬದುಕೋದು ವಿಕ್ರಂ ವಿಶೇಷತೆ. ಈವರೆಗೂ ಅನ್ನಿಯನ್, ಐ ಸೇರಿದಂತೆ ಒಂದಕ್ಕಿಂತ ಒಂದು ಭಿನ್ನ ಚಿತ್ರಗಳಲ್ಲಿ, ಥರ ಥರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವಿಕ್ರಂ, ಅಭಿಮಾನದಾಚೆಗೂ ಪ್ರೀತಿ ಸಂಪಾದಿಸಿಕೊಂಡಿರುವ ನಟ. ಈಗಂತೂ ಎಲ್ಲ ಚಿತ್ರರಂಗದಲ್ಲಿಯೂ ಸ್ಟಾರ್ ವಾರ್ಗಳು ಮಾಮೂಲು. ವಿಕ್ರಂ ಅದರ ಸುಳಿಗೂ ತಮ್ಮ ಹೆಸರು ಸಿಲುಕದಂತೆ ಎಚ್ಚರ ವಹಿಸಿದ್ದಾರೆ. ತಾನೂ ಸಾಮಾನ್ಯ ಎಂಬ ಮನಃಸ್ಥಿತಿ ಹೊಂದಿರುವ ವಿಕ್ರಂ ಅಭಿಮಾನಿಗಳನ್ನೂ ಕೂಡಾ ಅಂಥಾದ್ದೇ ಪ್ರೀತ್ಯಾಧರಗಳಿಂದ ಗೌರವಿಸುತ್ತಾರೆ. ಒಟ್ಟಾರೆಯಾಗಿ, ಈ ದಿನಮಾನದಲ್ಲಿ ವಿಕ್ರಂ ಅತ್ಯಂತ ಅಪರೂಪದ ವ್ಯಕ್ತಿತ್ವವಾಗಿಯೇ ಕಾಣಿಸುತ್ತಾರೆ; ಆ ಮೂಲಕ ಅವರ ಸಹಜ ಸುಂದರ ಛಾರ್ಮ್ ಮತ್ತಷ್ಟು ಕಳೆಗಟ್ಟಿಕೊಂಡಿದೆ.