ಭೂಮಿಯನ್ನು ಅಗೆದು ಉತ್ಖನನ ಮಾಡಿದಾಗೆಲ್ಲ ನೂರಾರು, ಸಾವಿರಾರು ವರ್ಷಗಳ ಇತಿಹಾಸ ತೆರೆದುಕೊಳ್ಳುತ್ತಲೇ ಇರುತ್ತೆ. ಆದ್ದರಿಂದಲೇ ವಿಶ್ವದ ನಾನಾ ದೇಶಗಳಲ್ಲಿರುವ ಪುರಾತತ್ವ ಇಲಾಖೆಯ ಮಂದಿ ಅವ್ಯಾಹತವಾಗಿ ಉತ್ಖನನ ನಡೆಸುತ್ತಲೇ ಇದ್ದಾರೆ. ಈ ಭೂಮಿಯ ಮೇಲೆ ಮನುಷ್ಯ ಜೀವಿಯ ಅಟಾಟೋಪ ಶುರುವಾಗಿ ಸಾವಿರಾರು ವರ್ಷಗಳೇ ಕಳೆದಿವೆ. ಅಲ್ಲಿಂದೀಚೆಗಿನ ಆತನ ಹೆಜ್ಜೆ ಗುರುತುಗಳು ಇಂಥ ಉತ್ಖನನದ ಸಂದರ್ಭದಲ್ಲೆಲ್ಲ ಹೊಸಾ ಬಗೆಯಲ್ಲಿ ಹೊಳಪು ಪಡೆಯುತ್ತಿವೆ. ಇಂಥಾ ತಲಾಶಿನ ಸಂದರ್ಭದಲ್ಲಿ ಇದುವರೆಗೂ ನಾನಾ ವಸ್ತುಗಳು ಸಿಕ್ಕಿವೆ. ಆದರೆ ಚೀನಾದ ಸಮಾಧಿಯೊಂದರಲ್ಲಿ ಸಿಕ್ಕಿರೋದು ಕೊಂಚ ಡಿಫರೆಂಟಾಗಿರೋ ಐಟಮ್ಮು!
ಇಂಥಾದ್ದೊಂದು ಅಚ್ಚರಿದಾಯಕ ವಸ್ತು ಪತ್ತೆಯಾಗಿರೋದು ಚೀನಾದ ಕ್ಸಿಯಾನಾಂಗ್ ಪ್ರದೇಶದಲ್ಲಿ. ಅಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದನೇ ಹಂತದ ಕಾಮಗಾರಿ ಪೂರ್ಣಗೊಂಡಿತ್ತು. 2010ರ ಸುಮಾರಿಗೆ ಎರಡನೇ ಹಂತದ ಕಾಮಗಾರಿಗೆಂದು ನಿಗಧಿತ ಪ್ರದೇಶದ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಭೂಮಿಯನ್ನು ಅಗೆಯುವಾಗ ಪುರಾತನ ಕಾಲದ ಸಮಾಧಿಯೊಂದು ಪತ್ತೆಯಾಗಿತ್ತು. ತಕ್ಷಣವೇ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಹೋಗಿ ಅವರ ಸಮ್ಮುಖದಲ್ಲಿಯೇ ಮತ್ತೊಂದಷ್ಟು ಅಗೆತ ನಡೆದಿತ್ತು. ಆಗ ಆ ಸಮಾಧಿಯ ಮಗ್ಗುಲಲ್ಲಿ ಸಿಕ್ಕಿದ್ದು ವಿಶಿಷ್ಟ ಆಕಾರದ ಕಂಚಿನ ಮಡಕೆ!
ಆ ಮಡಕೆಯನ್ನು ತೆರೆದು ನೋಡಿದಾಗ ಅದರಲ್ಲಿ ವಾಸನೆಯೇ ಇಲ್ಲದ ದ್ರವ ತುಂಬಿಕೊಂಡಿತ್ತು. ಅದರಾಳದಲ್ಲಿ ಮೂಳೆಗಳೂ ಇದ್ದವು. ಆದ್ದರಿಂದಲೇ ಹಲವಾರು ಪರೀಕ್ಷೆಗಳ ನಂತರ ಅದು ಸೂಪ್ ಅನ್ನೋ ನಿರ್ಧಾರಕ್ಕೆ ಬರಲಾಗಿದೆಯಂತೆ. ಅಂದಹಾಗೆ ಈ ರೀತಿಯ ಸೂಪ್ ಪತ್ತೆಯಾಗಿದ್ದು ಚೀನಾದಲ್ಲಿ ಅದೆ ಮೊದಲಂತೆ. ಚೀನಾದ ಮಂದಿ ಆಹಾರ ಪ್ರಿಯರು. ಸೂಪ್ಗಳೆಂದರೆ ಅವರಿಗೆಲ್ಲ ಪ್ರಾಣ. ಆದ್ದರಿಂದಲೇ ಹಲ್ಲಿ, ಹಾವು, ಹುಳ ಹುಪ್ಪಟೆಗಳನ್ನೆಲ್ಲ ಬೇಯಿಸಿ ಸೂಪ್ ಮಾಡಿಕೊಂಡು ಕುಡಿಯುತ್ತಾರೆ. ಅಲ್ಲಿನ ಮಂದಿ ಸತ್ತಾಗ ಸಮಾಧಿಯಲ್ಲಿ ಅವರಿಷ್ಟದ ಸೂಪ್ ಇಡೋ ಪದ್ಧತಿ ಒಂದು ಕಾಲದಲ್ಲಿ ಇದ್ದಿರಬಹುದು. ಅದು ಕಂಚಿನ ಪಾತ್ರೆಯಾದ್ದರಿಂದ 2400 ವರ್ಷಗಳಷ್ಟು ದೀರ್ಘ ಕಾಲ ಬಾಳಿಕೆ ಬಂದಿರಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.