ದೇಶಾದ್ಯಂತ ಸನ್ನಿಯಂತೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಕಾಮಪಿಪಾಸುಗಳಿಂದ ನಡೆಯುತ್ತಿರುವ ಈ ಒಂದೊಂದು ಘಟನಾವಳಿಗಳೂ ಕೂಡಾ ಮನುಷ್ಯ ಸಂಕುಲವನ್ನೇ ನಾಚಿಕೆಗೀಡು ಮಾಡುತ್ತಿವೆ. ಇಂಥಾದ್ದು ನಡೆದಾಗೆಲ್ಲ ಕೆಲ ಮಂದಿ ಮುಠ್ಠಾಳರು ಹೆಣ್ಣು ಮಕ್ಕಳು ಹಾಕಿಕೊಳ್ಳುವ ಬಟ್ಟೆಯತ್ತ, ಅವರ ನಡತೆಯತ್ತ ಬೊಟ್ಟು ಮಾಡಿ ತೋರಿಸೋದಿದೆ. ಆದರೆ ಅದರ ಹಿಂದಿರೋದೊಂದು ಪೈಶಾಚಿಕ, ಕೊಳಕು ಮನಸ್ಥಿತಿ ಮಾತ್ರ ಎಂಬುದು ಅಂತಿಮ ಸತ್ಯ. ಈ ವಾದಕ್ಕೆ ಪುರಾವೆವೆಂಬಂಥಾ ಅನೇಕಾರು ಹೇಸಿಗೆಯ ಕೃತ್ಯಗಳು ಈಗಾಗಲೇ ನಡೆದಿವೆ. ಮುಂಬೈನಲ್ಲಿ ನಡೆದಿರುವ ಭೀಕರ ಘಟನೆ ಅದರ ಮುಂದುವರೆದ ಭಾಗದಂತೆ ಕಾಣಿಸುತ್ತಿದೆ.
ಮುಂಬೈನ ಶಾಲೆಯೊಂದರಲ್ಲಿ ಕೇವಲ ಐದು ವರ್ಷಗಳ ಪುಟ್ಟ ಹೆಣ್ಣು ಕೂಸಿನ ಮೇಲೆ ಶಾಲಾ ಸಹಾಯಕನೋರ್ವ ಅತ್ಯಾಚಾರವೆಸಗಲು ನೋಡಿದ್ದಾನೆ. ಶಾಲೆಯಲ್ಲಿ ಸಹಾಯಕರಾಗಿರುವವರ ಮೇಲೆ ಮಕ್ಕಳಿಗೆ ಶಿಕ್ಷಕರಿಗಿಂತಲೂ ಹೆಚ್ಚೇ ಸಲುಗೆಯಿರುತ್ತದೆ. ಅದರಲ್ಲಿಯೂ ಇನ್ನೂ ಲೋಕವರಿಯದ ಐದು ವರ್ಷದ ಕಂದಮ್ಮನಿಗೆ ಇಂಥಾ ವಿಕೃತಿಗಳೆಲ್ಲ ಹೇಗೆ ಗೊತ್ತಾಗಲು ಸಾಧ್ಯ? ಆ ಸಹಾಯಕ ಅದನ್ನೇ ಬಂಡವಾಳವಾಗಿಸಿಕೊಂಡು ಆ ಮಗುವಿನ ಮೇಲೆ ನಾನಾ ಥರದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಇದೇ ಸೋಮವಾರ ಈ ಕೂಸು ಶಾಲಾ ಮೈದಾನದಲ್ಲಿ ಆಡಟವಾಡಲು ಬಂದಾಗ ಇಂಥಾದ್ದೊಂದು ಘಟನೆ ನಡೆದಿದೆ. ಕೇಡಿ ಸಹಾಯಕ ಆ ಕೂಸಿಗೆ ಚಾಕೋಲೇಟಿನ ಆಸೆ ತೋರಿಸಿ ಮರೆಗೆ ಕರೆದೊಯ್ದು ಹಿಂಸೆ ನೀಡಿದ್ದಾನೆ. ಸಹನೀಯ ಸಂಗತಿಯೆಂದರೆ ಆ ಕೂಸು ತನ್ನ ಮೇಲೆ ಸಹಾಯಕ ನಡೆಸಿದ ದೌರ್ಜನ್ಯವನ್ನು ಹೆತ್ತವರಿಗೆ ಅರ್ಥವಾಗುವಂತೆ ತಿಳಿಸಿದೆ. ಹೆತ್ತವರು ಈ ಬಗ್ಗೆ ದೂರು ಸಲ್ಲಿಸುತ್ತಲೇ ಆಡಳಿತ ಮಂಡಳಿ ಅಲರ್ಟ್ ಆಗಿ ದುಷ್ಟ ಸಹಾಯಕನನ್ನು ಪೊಲೀಸರಿಗೊಪ್ಪಿಸಿದೆ. ದುರಂತವೆಂದರೆ ಇಂಥಾ ಕೃತ್ಯ ನಡೆಸಿದ ಕಾಮ ಪಿಪಾಸುವಿಗೆ ಐವತ್ತೊಂದು ವರ್ಷ ವಯಸ್ಸು. ಆತ ಮಾಡಿರೋ ತಪ್ಪಿಗೆ ಮರಣದಂಡನೆಯೂ ಕಡಿಮೆಯೇ!