ಅಲ್ಲಿ ಚಿತ್ರೀಕರಣ ನಡೆಸಿದ್ದೇ ಒಂದು ಅದ್ಭುತ ಅನುಭವ!
ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಇಂದು ತೆರೆಗಂಡಿದೆ. ಪ್ರೀಮಿಯರ್ ಶೋಗಳಲ್ಲಿ ಭರಪೂರ ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರ ರಾಜ್ಯಾದ್ಯಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈವತ್ತಿನ ಸನ್ನಿವೇಶದಲ್ಲಿ ಯಾವುದೇ ಚಿತ್ರಗಳು ಒಂದಷ್ಟು ಡಿಲೇ ಆದರೂ ಅದರಿಂದ ಪ್ರೇಕ್ಷಕರು ವಿಮುಖರಾಗುತ್ತಾರೆ. ಅಂಥಾ ವಾತಾವರಣದಲ್ಲಿ ಎರಡ್ಮೂರು ವರ್ಷಗಳ ಕಾಲ ಕುತೂಹಲವನ್ನು ಯಥಾ ಪ್ರಕಾರವಾಗಿ ಕಾಯ್ದಿಟ್ಟುಕೊಂಡು ಬಂದಿರುವ ಚಿತ್ರ ಚೇಸ್. ವಿಲೋಕ್ ಶೆಟ್ಟಿ ಸೇರಿದಂತೆ ಒಂದಿಡೀ ಚಿತ್ರತಂಡ ಶ್ರಮ ವಹಿಸಿ, ಚೇಸ್ ಅನ್ನು ಪ್ರೇಕ್ಷಕರ ಕುತೂಹಲದ ಕೇಂದ್ರದಲ್ಲಿ ಕಾಪಿಟ್ಟುಕೊಂಡು ಬಂದಿತ್ತು. ಅದೆಲ್ಲವೂ ಸಾರ್ಥಕಗೊಳ್ಳುವ ಕ್ಷಣಗಳು ಇಂದು ಎದುರಾಗಿವೆ.
ಒಡಲ ತುಂಬಾ ವಿಶೇಷತೆಗಳನ್ನು ಬಚ್ಚಿಟ್ಟುಕೊಂಡಿರುವ ಈ ಸಿನಿಮಾವನ್ನು ಸಿಂಪ್ಲಿ ಫನ್ ಮೀಡಿಯಾ ನೆಟ್ವರ್ಕ್ ಬ್ಯಾನರಿನಡಿಯಲ್ಲಿ ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ವಿಲೋಕ್ ಶೆಟ್ಟಿಯ ಕಲ್ಪನೆಯಂತೆಯೇ ಇಡೀ ಚಿತ್ರ ಮೂಡಿ ಬರಲು ಒತ್ತಾಸೆಯಾಗಿ ನಿಂತಿದ್ದಾರೆ. ಈ ಕಾರಣದಿಂದಲೇ ಬಾಲಿವುಡ್ಡಿನ ಮಂದಿಯೂ ಕಾಲಿಡಲಾಗಂಥಾ ಅಪರೂಪದ ಪ್ರದೇಶಗಳಲ್ಲಿ ಚೇಸ್ನ ದೃಷ್ಯಾವಳಿಗಳು ಕಳೆಗಟ್ಟಿಕೊಂಡಿವೆ. ಅಂಥಾ ದೃಷ್ಯ ವೈಭವಗಳೂ ಕೂಡಾ ಈ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿವೆ.
ಸಾಮಾನ್ಯವಾಗಿ ಕಥೆಯೊಂದು ಸಿನಿಮಾ ರೂಪ ಧರಿಸುತ್ತಲೇ ಅದರ ಚಿತ್ರೀಕರಣ ಇಂತಿಂಥಾದ್ದೇ ಲೊಕೇಶನ್ನುಗಳಲ್ಲಿ ನೆರವೇರಬೇಕೆಂಬ ಸ್ಪಷ್ಟ ಅಂದಾಜಿರುತ್ತದೆ. ಅದೇ ರೀತಿಯಲ್ಲಿ ನಿರ್ದೇಶಕ ವಿಲೋಕ್ ಶೆಟ್ಟಿಗೂ ಆ ಥರದ್ದೊಂದು ಕನಸಿತ್ತು. ಇದರ ಪ್ರಧಾನ ಭಾಗದ ಚಿತ್ರೀಕರಣವನ್ನು ಹಿಮಾಚಲ ಪ್ರದೇಶದಲ್ಲಿ ನೆರವೇರಿಸಬೇಕೆಂಬುದು ಅವರ ಇರಾದೆಯಾಗಿತ್ತು. ಆದರೆ ಅದು ಅಷ್ಟು ಸಲೀಸಿನ ಸಂಗತಿಯಾಗಿರಲಿಲ್ಲ. ಯಾಕೆಂದರೆ ಆವರೆಗೂ ಬಾಲಿವುಡ್ಡಿನ ಮಂದಿಗೂ ಆ ಪ್ರದೇಶದಲ್ಲಿ ಚಿತ್ರೀಕರಣ ನಡೆಸುವ ಅವಕಾಶ ಸಿಕ್ಕಿರಲಿಲ್ಲ. ಕಡೆಗೂ ಹರಸಾಹಸ ಪಟ್ಟು ಆ ಪ್ರದೇಶದಲ್ಲಿಯೇ, ಮೈ ಕೊರೆಯುವ ಚಳಿಯ ನಡುವೆಯೂ ಚಿತ್ರೀಕರಣ ಮಾಡಲಾಗಿದೆ.
ಇನ್ನುಳಿದಂತೆ ಬಾಲಿವುಡ್ ಮಟ್ಟದಲ್ಲಿ ಹೆಸರು ಮಾಡಿರುವ ತಂತ್ರಜ್ಞರ ತಂಡ ಚೇಸ್ಗೆ ಸಾಥ್ ಕೊಟ್ಟಿದೆ. ಈ ಕಾರಣದಿಂದಲೇ ಸದರಿ ಸಿನಿಮಾ ತಾಂತ್ರಿಕವಾಗಿಯೂ ಶ್ರೀಮಂತಿಕೆಯ ಕಳೆಕಟ್ಟಿಕೊಂಡಿದೆ. ಎರಡು ವರ್ಷಗಳ ಕಾಲ ಅವಿರತವಾಗಿ ಶ್ರಮಿಸಿ ಇಡೀ ಚಿತ್ರತಂಡ ಚೇಸ್ ಅನ್ನು ಸಿದ್ಧಪಡಿಸಿದೆ. ಇಂದು ಅದೆಲ್ಲವೂ ಸಾರ್ಥಕಗೊಳ್ಳುವ ದಿನ. ಯಾಕೆಂದರೆ, ರಾಜ್ಯಾದ್ಯಂತ ಚೇಸ್ ತೆರೆಗಂಡಿದೆ. ಇಂದೇ ಹತ್ತಿರದ ಚಿತ್ರಮಂದಿರಗಳಿಗೆ ತೆರಳಿ ನೋಡುವ ಮೂಲಕ ಒಂದು ಅಪರೂಪದ ಅನುಭೂತಿಯನ್ನು ನಿಮ್ಮದಾಗಿಸಿಕೊಳ್ಳಬಹುದು.