ಸಿಂಪ್ಲಿ ಫನ್ ಮೀಡಿಯಾ ನೆಟ್ವರ್ಕ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಚೇಜ಼್ ಚಿತ್ರ ಬಿಡುಗಡೆಗೆ ಒಂದು ದಿನವಷ್ಟೇ ಬಾಕಿ ಉಳಿದುಕೊಂಡಿದೆ. ವಿಲೋಕ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಮೊನ್ನೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕ ಸೃಷ್ಟಿಸಿರುವ ಕ್ರೇಜ್ ಸಾಮಾನ್ಯವಾದುದೇನಲ್ಲ. ಆರಂಭಿಕ ಹಂತದಿಂದಲೂ ಹೆಜ್ಜೆ ಹೆಜ್ಜೆಗೂ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿದ್ದ ಈ ಸಿನಿಮಾ ಪ್ರತಿಯೊಂದು ವಿಚಾರದಲ್ಲಿಯೂ ವಿಶೇಷತೆಗಳನ್ನೇ ಒಡಲಲ್ಲಿಟ್ಟುಕೊಂಡಿದೆ. ಅದರಲ್ಲಿಯೂ ವಿಲೋಕ್ ಶೆಟ್ಟಿ ತಮ್ಮ ಕನಸಿಗೆ ತಕ್ಕುದಾಗಿಯೇ ಅತ್ಯಂತ ಶ್ರದ್ಧೆಯಿಂದ ಇದರ ಹಾಡುಗಳು ಮೂಡಿ ಬರುವಂತೆ ನೋಡಿಕೊಂಡಿದ್ದಾರೆ. ಈ ಕಾರಣದಿಂದಲೇ ಚೇಸ್ನದ್ದು ಇತ್ತೀಚಿನ ದಿನಮಾನದ ಅತ್ಯುತ್ತಮ ಆಲ್ಬಂ ಅಂತ ಹೆಸರಾಗಿದೆ.
ಈ ಚಿತ್ರದೊಂದಿಗೆ ಮಾಲಿವುಡ್ನ ಖ್ಯಾತ ಗಾಯಕ ಮಖ್ಬೂಲ್ ಮನ್ಸೂರ್ ಮೊಹಮದ್ ಕನ್ನಡ ಚಿತ್ರಪ್ರೇಮಿಗಳಿಗೆ, ಸಂಗೀತಾಸಕ್ತರಿಗೆ ಪರಿಚಯವಾಗಿದ್ದಾರೆ. ಕೇರಳದ ಪ್ರಸಿದ್ಧ ಸಂಗೀತ ನಿರ್ದೇಶಕ ಗೋಪಿ ಸುಂದರ್ ಅವರೊಂಗಿಗೆ ವರ್ಷಾಂತರಗಳ ಕಾಲದಿಂದ ಕಾರ್ಯ ನಿರ್ವಹಿಸಿ ಪಳಗಿಕೊಂಡಿರುವವರು ಮನ್ಸೂರ್. ದೇಶ ವಿದೇಶಗಳಲ್ಲಿಯೂ ಮೋಹಕ ಕಂಠಸಿರಿಯಿಂದ ಪ್ರಸಿದ್ಧಿ ಪಡೆದಿರುವ ಅವರು ಮಲೆಯಾಳದ ಎನ್ನು ನಿಂಟೆ ಮೊಯಿದಿನ್ ಚಿತ್ರದ ಮುಕ್ಕತ್ತಿಪೆನ್ನೆ ಎಂಬ ಹಾಡಿನ ಮೂಲಕವೇ ಗುರುತಾದವರು. ಇಂಥಾ ಮನ್ಸೂರ್ ಇದೀಗ ಚೇಜ಼್ ಚಿತ್ರದ ಚೆಂದದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಆ ಹಾಡು ಎಲ್ಲರಿಗೂ ಇಷ್ಟವಾಗಿದೆ.
ವಿಲೋಕ್ ಶೆಟ್ಟಿ ಚೇಜ಼್ ಅನ್ನು ಹಾಡುಗಳ ವಿಚಾರದಲ್ಲಿಯೂ ಸಾರ್ವಕಾಲಿಕ ದಾಖಲೆ ಮಾಡುವಂತೆ ರೂಪಿಸುವ ಕನಸು ಹೊಂದಿದ್ದವರು. ಇದಕ್ಕೆ ಸಂಗೀತ ನಿರ್ದೇಶಕರಾಗಿ ಕಾರ್ತಿಕ್ ಆಚಾರ್ಯ ಜೊತೆಯಾಗಿದ್ದರು. ಡಾ ಉಮೇಶ್ ಪಿಲಿಕುಡೆಬೈಲ್ ಬರೆದಿದ್ದ ಸಾಹಿತ್ಯ ಮತ್ತು ಕಾರ್ತಿಕ್ ಸಂಗೀತಕ್ಕೆ ಪಾಕಿಸ್ತಾನಿ ಗಾಯಕ ರಾಹತ್ ಪಥೇ ಅಲಿಖಾನ್ ಧ್ವನಿ ಸೂಕ್ತ ಎಂಬ ನಿರ್ಧಾರ ವಿಲೋಕ್ ಅವರದ್ದಾಗಿತ್ತು. ರಾಹತ್ ಪತೇ ಅಲಿಖಾನ್ ಬಾಲಿವುಡ್ನ ಅದೆಷ್ಟೋ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸೂಫಿ ಶೈಲಿಯ ರಾಹತ್ರ ಹಾಡಿನ ಮೋಡಿಗೆ ವಶವಾಗದವರೇ ವಿರಳ. ಆದರೆ ಕಡೇ ಕ್ಷಣದಲ್ಲಿ ಅವರ ಧ್ವನಿ ಹೋಲುವ ಗಾಯಕನಿಗಾಗಿ ಹುಡುಕಾಟ ನಡೆಸಿದಾಗ ಸಿಕ್ಕವರು ಮನ್ಸೂರ್.
ಮಖ್ಬೂಲ್ ಮನ್ಸೂರ್ ಯಾವುದೇ ಭಾಷೆಯಲ್ಲಿಯಾದರೂ ಹಾಡೊಂದು ಇಷ್ಟವಾಗದ ಹೊರತು ಧ್ವನಿಯಾಗುವವರಲ್ಲ. ಚೇಜ಼್ ಹಾಡಿನ ಪ್ರಪೋಸಲ್ ಇಟ್ಟಾಗಲೂ ಇಷ್ಟವಾದರೆ ಮಾತ್ರವೇ ಹಾಡೋದಾಗಿ ಮಖ್ಬೂಲ್ ಹೇಳಿದ್ದರಂತೆ. ಆದರೆ ಕಡೆಗೆ ಸಂಗೀತ ಮತ್ತು ಸಾಹಿತ್ಯಗಳೆರಡನ್ನೂ ಮೆಚ್ಚಿಕೊಂಡು ಹಾಡಿದ್ದಾರಂತೆ. ಅವರು ಹಾಡಿರೋ ಈ ಹಾಡೂ ಕೂಡಾ ಚೇಜ಼್ ಚಿತ್ರದ ಪ್ರಧಾನ ಆಕರ್ಷಣೆಯಂತಿದೆಯಂತೆ. ಆ ಹಾಡು ಈಗಾಗಲೇ ಜನಪ್ರಿಯತೆ ಪಡೆದುಕೊಂಡಾಗಿದೆ. ಹೀಗೆ ಪ್ರತೀ ವಿಚಾರದಲ್ಲಿಯೂ ವಿಶೇಷತೆಗಳ ಸರಮಾಲೆಯನ್ನೇ ಹೊಂದಿರುವ ಈ ಚಿತ್ರ ಪ್ರೇಕ್ಷಕರೆದುರು ಬರಲು ಕ್ಷಣಗಣನೆ ಶುರುವಾಗಿದೆ.