ಭಿನ್ನ ಅಭಿರುಚಿ ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಕೈಯಾಡಿಸಿ ಗೆಲ್ಲಬಲ್ಲ ಛಾತಿ ಇರುವ ಒಂದಷ್ಟು ಮಂದಿ ಬಹುಮುಖ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿದ್ದಾರೆ. ಆ ಸಾಲಿಗೆ ನಿಸ್ಸಂದೇಹವಾಗಿ ಸೇರಿಕೊಳ್ಳುವವರು ಚಂದ್ರ ಓಬಯ್ಯ. ಈಗಾಗಲೇ ಪ್ರತಿಭಾನ್ವಿತ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅವರು, ಸಾಹಿತಿಯೂ ಹೌದು. ಅಂಥಾದ್ದೊಂದು ಕ್ರಿಯಾಶೀಲ, ಸೂಕ್ಷ್ಮ ಮನಃಸ್ಥಿತಿಯನ್ನೇ ನಿರ್ದೇಶನಕ್ಕೂ ಒಗ್ಗಿಸಿಕೊಂಡಿರುವ ಚಂದ್ರು, ಯೂ ಟರ್ನ್೨ ಎಂಬ ಚಿತ್ರದ ಮೂಲಕ ನಾಯಕನಾಗಿಯೂ ಪಾದಾರ್ಪಣೆ ಮಾಡಲು ಅಣಿಗೊಂಡಿದ್ದಾರೆ. ಈ ಮೂಲಕ ಸಂಗೀತ ನಿರ್ದೇಶಕರಾಗಿದ್ದ ಚಂದ್ರು ಓಬಯ್ಯ ನಿರ್ದೇಶಕರಾಗಿ, ನಾಯಕನಾಗಿ ಮತ್ತು ನಿರ್ಮಾಪಕರಾಗಿಯೂ ಅವತರಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.
ಈ ವಿಚಾರ ಕೇಳಿದೇಟಿಗೆ, ಒಬ್ಬರೇ ಇಷ್ಟೊಂದು ಜವಾಬ್ದಾರಿಗಳನ್ನು ಏಕಕಾಲದಲ್ಲಿಯೇ ನಿಭಾಯಿಸಲು ಸಾಧ್ಯವೇ ಎಂಬಂಥಾ ಪ್ರಶ್ನೆಗಳೇಳುತ್ತವೆ. ಆದರೆ, ಪ್ರತೀ ಮನುಷ್ಯರಲ್ಲಿಯೂ ಪ್ರತಿಯೊಂದನ್ನು ನಿಭಾಯಿಸುವ ಜಾಣ್ಮೆ ಇರುತ್ತದೆ. ಮನಸು ಮಾಡಿದರೆ ಎಲ್ಲವೂ ಸಾಧ್ಯ ಎಂಬಂಥ ಮನಃಸ್ಥಿತಿ ಹೊಂದಿರುವ ಚಂದ್ರು ಓಬಯ್ಯ ಎಲ್ಲವನ್ನೂ ಲೀಲಾಜಾಲವಾಗಿ ಮಾಡಿ ಮುಗಿಸಿದ್ದಾರೆ. ಹಾಗಾದರೆ, ಯೂ ಟರ್ನ್೨ ಯಾವ ಬಗೆಯ ಚಿತ್ರ? ಇದರ ವಿಶೇಷತೆಗಳೇನೆಂಬ ಪ್ರಶ್ನೆಗಳು ಸಹಜವಾಗಿಯೇ ಕಾಡುತ್ತವೆ. ಈ ದಿಸೆಯಲ್ಲಿ ನೋಡಹೋದರೆ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಜಾಹೀರಾಗುತ್ತವೆ. ಅದರನ್ವಯ ಹೇಳೋದಾದರೆ, ಇದೊಂದು ಹಾರರ್ ಸಿನಿಮಾ. ಪಕ್ಕಾ ಮನೋರಂಜನಾತ್ಮಕ ಗುಣಗಳೊಂದಿಗೆ, ಕಾಮಿಡಿ ಝಲಕ್ಕುಗಳೊಂದಿಗೆ ಮೈಕೈ ತುಂಬಿಕೊಂಡಿರುವ ಈ ಚಿತ್ರ ಯೂಟರ್ನ್೨. ಇದಕ್ಕೀಗ ಸೆನ್ಸಾರ್ ಸರ್ಟಿಫಿಕೆಟ್ ಕೂಡಾ ಸಿಕ್ಕಿದೆ. ನಿಕ್ಕಿಯಾಗಬೇಕಿರೋದು ಬಿಡುಗಡೆಯ ದಿನಾಂಕ ಮಾತ್ರ!
ಗಡಿನಾಡು ಪಾವಗಡದಲ್ಲಿ ಹುಟ್ಟಿ ಬೆಳೆದು, ಅಲ್ಲಿಂದಲೇ ಜೀವನದ ಬಗ್ಗೆ ನಾನಾ ಆಸಕ್ತಿಗಳನ್ನು, ಕನಸುಗಳನ್ನು ಕಟ್ಟಿಕೊಂಡವರು ಚಂದ್ರು ಓಬಯ್ಯ. ತಂದೆ ಡ್ರಾಮಾ ಮೇಸ್ಟ್ರಾಗಿದ್ದದ್ದರಿಂದ ಎಳವೆಯಿಂದಲೇ ಅವರ ಪಾಲಿಗೆ ಕಲಾಪ್ರೇಮದ ವಾತಾವರಣ ಸಿಕ್ಕಿತ್ತು. ಈ ಕಾರಣದಿಂದಲೇ ಕಲಾಸಕ್ತಿ ಹೊಂದಿದ್ದ ಚಂದ್ರುಗೆ ಶಾಲಾ ದಿನಗಳಿಂದಲೇ ಹಾಡೋದೆಂದರೆ ಬಹಳಾ ಇಷ್ಟವಾಗಿತ್ತು. ಹೀಗೆ ಮುಂದುವರೆಯುವಾಗಲೇ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತಂದೆ ಇನ್ನಿಲ್ಲವಾದ ಆಘಾತವೂ ಅವರಿಗೆದುರಾಗಿತ್ತು. ಅಂಥಾ ನೋವು, ಆಘಾತಗಳಿಂದಲೇ ಗಟ್ಟಿಗೊಳ್ಳುತ್ತಾ, ಸೃಜನಶೀಲ ಆಲೋಚನೆಗಳನ್ನು ಒಳಗಿಳಿಸಿಕೊಳ್ಳುತ್ತಾ ಸಾಗಿ ಬಂದಿದ್ದವರು ಚಂದ್ರು ಓಬಯ್ಯ. ಆ ನಂತರದಲ್ಲಿ ಬದುಕಿನ ಮುಖ್ಯ ಘಟ್ಟ ಎದುರಾದಾಗ ಅವರು ಶಿಕ್ಷಕರಾಗಬೇಕೆಂಬ ತೀರ್ಮಾನಕ್ಕೆ ಬಂದಿದ್ದರು.
ಹಾಗೊಂದು ತೀರ್ಮಾನವೇ ತಮ್ಮನ್ನು ಮತ್ತೆತ್ತಲೋ ಕೊಂಡೊಯ್ದು ನಿಲ್ಲಿಸಲಿದೆ ಎಂಬ ಸಣ್ಣ ಕಲ್ಪನೆಯೂ ಚಂದ್ರು ಅವರಿಗೆ ಬಹುಶಃ ಇರಲಿಕ್ಕಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರಾಗಲು ತರಬೇತಿಗೆಂದು ೨೦೦೯ರಲ್ಲಿ ಬೆಂಗಳೂರಿಗೆ ಬಂದಿಳಿದ ಚಂದ್ರು, ಅದನ್ನು ಪೂರೈಸಿಕೊಂಡು ಜ್ಞಾನ ಗಂಗಾ ಎಂಬ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದರು. ಆ ವೃತ್ತಿಯ ನಡುವೆಯೇ ಆಲ್ಬಂ ಸಾಂಗ್ ಒಂದನ್ನೂ ರೂಪಿಸಿದ್ದರು. ಆ ಶಾಲೆಯ ಮಾಲೀಕರಿಗೂ ಕೂಡಾ ಸಿನಿಮಾ ರಂಗದ ಬಗ್ಗೆ ಅತೀವ ಆಸಕ್ತಿ ಇತ್ತು. ಚಂದ್ರು ಕೂಡಾ ಅಂಥಾದ್ದೇ ಆಸಕ್ತಿ ಹೊಂದಿರುವವರು ಅಂತ ಗೊತ್ತಾದಾಕ್ಷಣವೇ ಒಂದು ಸಿನಿಮಾ ಮಾಡೋಣ ಅಂತ ಮಾತುಕತೆ ಆರಂಭಿಸಿದ್ದರು. ಹಾಗೆ ಶುರುವಾದ ಚಿತ್ರ ಟ್ರಿಗರ್. ಇದರ ಮೂಲಕವೇ ಚಂದ್ರು ಓಬಯ್ಯ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು.
ಕರ್ನಾಟಕ ಸಂಗೀತದಲ್ಲಿ ಒಂದಷ್ಟು ಜ್ಞಾನ ಹೊಂದಿದ್ದ ಚಂದ್ರು, ಆ ನಂತರವೂ ಒಂದಷ್ಟು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದರು. ಶಿಕ್ಷಕ ವೃತ್ತಿಯಲ್ಲಿದ್ದುದರಿಂದ ಬರವಣಿಗೆಯೂ ಅವರ ಕೈ ಹಿಡಿದಿತ್ತು. ಅದರ ಫಲವಾಗಿಯೇ ಅವರೊಂದಷ್ಟು ಕಾದಂಬರಿ, ಪ್ರವಾಸ ಕಥನಗಳನ್ನೂ ಬರೆದು ಸೈ ಅನ್ನಿಸಿಕೊಂಡಿದ್ದಾರೆ. ಈ ಮೂಲಕ ಸಾಹಿತ್ಯ ವಲಯದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಡಸ್ಟ್ಬಿನ್ ಎಂಬ ಕಾದಂಬರಿ ಬರೆಯುತ್ತಿರುವ ಚಂದ್ರು, ಅದನ್ನೇ ಸಾಮಾಜಿಕ ಕಾಳಜಿಯ ಸಿನಿಮಾವಾಗಿಸುವ ನಿಟ್ಟಿನಲ್ಲಿಯೂ ಪ್ರಯತ್ನಿಸುತ್ತಿದ್ದಾರೆ. ಹೀಓಗೆ ಭಿನ್ನ ಅಭಿರುಚಿ ಹೊಂದಿರುವ ಚಂದ್ರು ಓಬಯ್ಯ ಇದೀಗ ಯೂ ಟರ್ನ್೨ ಚಿತ್ರಕ್ಕೂ ನಟನೆ, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.
ಬೆಂಗಳೂರು, ಬಿಡದಿ, ಹೊನ್ನಾವರ ಬೀಚ್ ಮುಂತಾದೆಡೆಗಳಲ್ಲಿ ಈ ಚಿತ್ರವ ನನು ದೃಷ್ಯೀಕರಿಸಲಾಗಿದೆ. ಬಿಗ್ಬಾಸ್ ಖ್ಯಾತಿಯ ಮಂಜು ಪಾವಗಡ, ಗಿಚ್ಚಿಗಿಲಿಗಿಲಿ ಚಿಲ್ಲರ್ ಮಂಜು, ಕರಿಸುಬ್ಬು, ಡಿಂಗ್ರಿ ನಾಗರಾಜ್ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ತಿಥಿ ಚಿತ್ರದ ಮೂಲಕ ಹೆಸರು ಮಾಡಿದ್ದ ಪೂಜಾ ಎಂ.ಎಸ್ ನಾಯಕಿಯಾಗಿ ಚಂದ್ರುಗೆ ಸಾಥ್ ಕೊಟ್ಟಿದ್ದಾರೆ. ಹಲವಾರು ಪ್ರಯೋಗಾತ್ಮಕ ಅಂಶಗಳನ್ನೊಳಗೊಂಡಿರುವ ಈ ಚಿತ್ರ ಪ್ರೇಕ್ಷಕರಿಗೆ ಬಹುವಾಗಿ ಇಷ್ಟವಾಗುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಶೀಘ್ರದಲ್ಲಿಯೇ ಯೂ ಟರ್ನ್೨ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ.