ತೆಲುಗಿಗೆ ಹೋದರೂ ತಗ್ಗಲಿಲ್ಲ ಧಿಮಾಕು!
ಒಂದೇ ಒಂದು ಸಿನಿಮಾ, ಸೀರಿಯಲ್ಲುಗಳಲ್ಲಿ ಮುಸುಡಿ ತೋರಿಸಿದಾಕ್ಷಣವೇ ಕೆಲ ನಟ ನಟಿಯರು ಸೀಮೆಗಿಲ್ಲದ ಸ್ಟಾರುಗಳಂತೆ ಮೆರೆದಾಡಿ ಬಿಡುತ್ತಾರೆ. ತಾವೇನೋ ಮಹಾನ್ ಸೆಲೆಬ್ರಿಟಿಗಳೆಂಬಂತೆ ಪೋಸು ಕೊಡುತ್ತಾರೆ. ನಂತರದಲ್ಲಿ ಯಾವ ಸೂಪರ್ ಸ್ಟಾರ್ಗಳಿಗೂ ಕಮ್ಮಿಯಿಲ್ಲದಂತೆ ದೌಲತ್ತು ಪ್ರದರ್ಶಿಸಲಾರಂಭಿಸುತ್ತಾರೆ. ಹೀಗೆ ಮೆರೆದ ಬಹಳಷ್ಟು ಮಂದಿ ಸಣ್ಣದೊಂದು ಕುರುಹೂ ಉಳಿಯದಂತೆ ಸೋತು ಸುಣ್ಣವಾಗಿ ಬಿಲ ಸೇರಿಕೊಂಡಿದ್ದಾರೆಂಬ ವಾಸ್ತವಿಕ ಇತಿಹಾಸವನ್ನು ಇಂಥಾ ತಿರ್ಕೆ ದೌಲತ್ತಿನ ಮಂದಿ ಮರೆತೇ ಬಿಡುತ್ತಾರೆ. ಇಂಥಾ ಮೆರೆದಾಟಕ್ಕೆ ಇತ್ತೀಚಿನ ಉದಾಹರಣೆಯಾಗಿ ನಿಲ್ಲುವಾತ ಲಕ್ಷ್ಮಿ ಬಾರಮ್ಮ ಸೀರಿಯಲ್ಲಿನ ಚಂದು ಖ್ಯಾತಿಯ ನಟ ಚಂದನ್!
ಹೀರೋ ಆಗಲು ಬೇಕಾದಂಥಾ ಎಲ್ಲ ಗುಣ ಲಕ್ಷಣಗಳನ್ನು, ದೈಹಿಕ ಚಹರೆ ಮತ್ತು ಒಂದಷ್ಟು ಪ್ರತೀಬೆಯನ್ನು ಹೊಂದಿರುವಾತ ಚಂದನ್. ಲಕ್ಷ್ಮಿ ಬಾರಮ್ಮ ಸೀರಿಯಲ್ಲಿನ ಮೂಲಕ ಮನೆ ಮಾತಾಗಿದ್ದ ಈತ, ಆ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದನಾದರೂ ಅದ್ಯಾವುದೂ ಬರಖತ್ತಾಗಲಿಲ್ಲ. ಹೀರೋ ಆಗಿ ನೆಲೆನಿಲ್ಲಬೇಕಾದ ಈ ಹುಡುಗ ಹೀಗೇಕಾದ ಅಂತ ತಲಾಶು ನಡೆಸಿದರೆ ಆತನ ದುರಹಂಕಾರದ ವರ್ತನೆಗಳ ಹೊರತಾಗಿ ಬೇರ್ಯಾವ ಕಾರಣಗಳೂ ಕಾಣ ಸಿಗುವುದಿಲ್ಲ. ಹೀಗೆ ಕನ್ನಡದಲ್ಲಿ ಗೋತಾ ಹೊಡೆದು ಇತ್ತೀಚಿನ ದಿನಗಳಲ್ಲಿ ತೆಲುಗಿನ ಸಾವಿತ್ರಮ್ಮಗಾರಿ ಅಬ್ಬಾಯಿ ಎಂಬ ಸೀರಿಯಲ್ಲಿನಲ್ಲಿ ನಟಿಸಿ ತೆಲುಗುನಾಡಿನಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದ ಚಂದನ್, ತನ್ನದೇ ಸೀರಿಯಲ್ಲಿನ ಟೀಮಿನಿಂದಲೇ ಭರ್ಜರಿಯಾಗಿ ಗೂಸಾ ತಿಂದು ಸುದ್ದಿಯಾಗಿದ್ದಾನೆ!
ಚಂದನ್ ಇತ್ತೀಚಿನ ದಿನಗಳಲ್ಲಿ ಕನ್ನಡ ಸೀರಿಯಲ್ ಮತ್ತು ಸಿನಿಮಾ ರಂಗದಿಂದ ದೂರವುಳಿದಂತಿದ್ದ. ನಟಿ ಕವಿತಾ ಗೌಡಳನ್ನು ಮದುವೆಯಾದ ನಂತರದಲ್ಲಿ ಚಂದನ್ ಬಣ್ಣದ ಲೋಕದಿಂದ ದೂರವುಳಿದಿದ್ದಾನೆಂದು ಬಹುತೇಕರು ಅಂದುಕೊಳ್ಳುತ್ತಿರುವಾಗಲೇ ಆತ ತೆಲುಗು ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿಯೇ ಹೆಸರು ಮಾಡಿದ್ದ. ಸಾವಿತ್ರಮ್ಮಗಾರಿ ಅಬ್ಬಾಯಿ ಎಂಬ ಸೂಪರ್ ಹಿಟ್ ಧಾರಾವಾಹಿಯ ಪ್ರಧಾನ ಪಾತ್ರದಲ್ಲಿ ಮಿಂಚಿದ್ದ. ಬಹುಶಃ ತಿಮಿರನ್ನು ಕೊಂಚ ತಹಬಂಧಿಯಲ್ಲಿಟ್ಟುಕೊಂಡಿದ್ದರೆ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಡಬಹುದಿತ್ತು. ಆದರೆ, ಯಾವಾಗ ಸೀರಿಯಲ್ ಹಿಟ್ ಆಯಿತೋ, ಅದಕ್ಕೆ ತಾನೇ ಕಾರಣ ಎಂಬಂತೆ ಚಂದನ್ ಮೆರೆಯಲಾರಂಭಿಸಿದ್ದ. ತಾಂತ್ರಿಕ ವರ್ಗ ಮತ್ತು ನಿರ್ದೇಶನ ವಿಭಾಗದವರ ಜೊತೆ ದೌಲತ್ತಿನಿಂದ ನಡೆದುಕೊಳ್ಳಲಾರಂಭಿಸಿದ್ದ.
ಇಂಥಾ ಚಂದನ್ ಜಯಲೈ ಮೂವತ್ತರಂದು ಚಿತ್ರೀಕರಣಕ್ಕೆ ಹಾಜರಾಗಿದ್ದಾನೆ. ಮಧ್ಯಾನ್ಹದ ಸುಮಾರಿಗೆ ಹೋಗಿ ಮುದುರಿ ಮಲಗಿದ್ದವನು, ಇಡೀ ತಂಡ ಕಾದು ಕೂತಿದ್ದರೂ ಹೊರ ಬರದೆ ಸತಾಯಿಸಲಾರಂಭಿಸಿದ್ದನಂತೆ. ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸಹಾಯಕ ನಿರ್ದೇಶಕನೋರ್ವ ಚಂದನ್ನನ್ನು ಕರೆದುಕೊಂಡು ಬರುವಂತೆ ಏಕವಚನದಲ್ಲಿ ರೇಗಿದ್ದಾನೆ. ಅಸಿಸ್ಟೆಂಟ್ ಡೈರೆಕ್ಟರ್ ಒಬ್ಬ ತನ್ನನ್ನು ಏಕವಚನದಲ್ಲಿ ಕರೆದಿದ್ದನ್ನು ಕೇಳಿ ಕೆಂಡಾಮಂಡಲವಾದ ಚಂದನ್, ಸೀದಾ ಬಂದವನೇ ಆ ಸಹಾಯಕ ನಿರ್ದೇಶಕನನ್ನು ತಳ್ಳಿ ಕಪಾಳಕ್ಕೆ ಬಾರಿಸಿದ್ದಾನೆ. ಈ ವಿಷಯ ತಿಳಿಯುತ್ತಲೇ ಇಡೀ ತಂಡ ಒಗ್ಗಟ್ಟಾಗಿ ಚಂದನ್ಗೆ ಅಮರಿಕೊಂಡಿದೆ. ಈ ಸಂದರ್ಭದಲ್ಲಿ ಸೂಪರ್ ಸ್ಟಾರ್ ಚಂದನ್ನ ಕಪಾಳ ಬಾತುಹೋಗುವಂತೆ ಒದೆಯೂ ಬಿದ್ದಿದೆ. ಅಲ್ಲಿಗೆ ತೆಲುಗಿನಲ್ಲಿಯೂ ಚಂದನ್ನ ಕೆರಿಯರ್ ಎಕ್ಕಾ ಎದ್ದಂತಾಗಿದೆ!
ಈ ಬಗ್ಗೆ ಮಾಧ್ಯಮಗಳಿಗೆ ಉತ್ತರಿಸಿರುವ ಚಂದನ್, ತನ್ನ ತಾಯಿಗೆ ಹುಶಾರಿಲ್ಲದ ಒತ್ತಡದಲ್ಲಿ ತಾನು ರೇಗಾಡಿದ್ದಾಗಿಯೂ, ತನ್ನ ಕೃತ್ಯ ಉದ್ದೇಶಪೂರ್ವಕವಲ್ಲವೆಂದೂ ಅವಲತ್ತುಕೊಂಡಿದ್ದಾನೆ. ಹಾಗೊಂದು ವೇಳೆ ಅಂತಾ ಒತ್ತಡವಿದ್ದಿದ್ದರೂ ಅದನ್ನು ತಂಡದ ಬಳಿ ಹಂಚಿಕೊಳ್ಳಬಹುದಿತ್ತು. ವರ್ಷಾಂತರಗಳಿಂದ ಒಟ್ಟಿಗಿದ್ದ ಮಂದಿ ಚಂದನ್ನ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳದಿರುತ್ತಿರಲಿಲ್ಲ. ಆದರೆ ಚಂದನ್ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಿದ್ದಾನೆ. ವಿನಾ ಕಾರಣ ಎಗರಾಡಿ ಅಸಿಸ್ಟೆಂಟ್ ಡೈರೆಕ್ಟರಿಗೆ ಹೊಡೆದು ತಾನೂ ಪರಭಾಷಿಕರಿಂದ ಹೊಡೆಸಿಕೊಂಡಿದ್ದಾನೆ!
ಹಾಗೊಂದು ವೇಳೆ ತೆಲುಗು ನಾಡಲ್ಲಿ ಚಂದನ್ ಮೊದಲ ಬಾರಿ ಹೀಗೆ ರಂಕಲು ಸೃಷ್ಟಿಸಿಕೊಂಡಿದ್ದರೆ ಏನೋ ಒತ್ತಡದಲ್ಲಿ ಅಚಾತುರ್ಯ ನಡೆದಿದೆ ಅಂದುಕೊಳ್ಳಬಹುದಿತ್ತು. ಆದರೆ ತನ್ನನ್ನು ಪ್ರೀತಿಯಿಂದ ಬೆಳೆಸಿದ ಕನ್ನಡದ ನೆಲದಲ್ಲಿಯೂ ಚಂದನ್ ಇಂಥಾದ್ದೇ ಕಿರಿಕ್ಕು ಮಾಡಿಕೊಳ್ಳುತ್ತಾ ಬಂದಿದ್ದ. ಈ ಹಿಂದೆ ಪ್ರೇಮಬರಹ ಚಿತ್ರದ ಸಂದರ್ಭದಲ್ಲಿಯೂ ಮಾಧ್ಯಮಗಳ ಮೇಲೆಯೇ ಎಗರಾಡುವಂಥಾ ದುಷ್ಟತನಕ್ಕೂ ಕೈಹಾಕಿದ್ದ. ಸಿನಿಮಾ ಮತ್ತು ಸೀರಿಯಲ್ಲಿನ ತಂಡಗಳೊಂದಿಗೂ ಈತ ಹೊಂದಿಕೊಂಡು ಹೋದ ಉದಾಹರಣೆಗಳು ವಿರಳ. ಇಂಥಾ ಮೆಂಟಾಲಿಟಿ ಇಲ್ಲದೇ ಹೋಗಿದ್ದರೆ ಚಣಂದನ್ ಈವತ್ತಿಗೆ ಕನ್ನಡ ಚಿತ್ರರಂಗದಲ್ಲಿಯೇ ನಟನಾಗಿ ನೆಲೆ ಕಂಡುಕೊಳ್ಳುತ್ತಿದ್ದ. ಈತ ಹೀಗೆಯೇ ಮುಂದುವರೆದರೆ ಇರೋಬರೋ ಅವಕಾಶಗಳನ್ನೆಲ್ಲ ಕಳೆದುಕೊಂಡು ಮಡದಿ ಕವಿತಾಳೊಂದಿಗೆ ಸಂಸಾರ ನಡೆಸಿಕೊಂಡಿರಬೇಕಾಗುತ್ತೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ!