ವರ್ಷಗಳ ಹಿಂದೆ ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅಂತೊಂದು ಅಭಿಯಾನ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದು ಹಾಲಿವುಡ್ಡಿನಿಂದ, ಬಾಲಿವುಡ್ಡನ್ನು ಬಳಸಿ ಬಂದು ಸ್ಯಾಂಡಲ್ವುಡ್ಡನ್ನೂ ಸವರಿ ಹೋಗಿತ್ತು. ನಟಿಯರಿಗೆ ಸಿನಿಮಾಗಳಲ್ಲಿ ಅವಕಾಶ ಕೊಟ್ಟು ಮೆತ್ತಗೆ ಮಂಚ ಹತ್ತಿಸಿಕೊಳ್ಳುವ ಖಯಾಲಿ ಎಲ್ಲ ಚಿತ್ರರಂಗದಲ್ಲಿಯೂ ಇದ್ದೇ ಇದೆ. ಹಾಗೆ ಮಂಚಕ್ಕೆ ಕರೆಯೋ ಕಾಮುಕರ ಮುಖವಾಡ ಕಾಸ್ಟಿಂಗ್ ಕೌಚ್ ಮೂಲಕ ಕಳಚಿಕೊಂಡಿತ್ತು. ಇದೀಗ ಆ ಅಭಿಯಾನಕ್ಕೆ ಮತ್ತೆ ಚಾಲನೆ ಸಿಕ್ಕಂತಿದೆ; ಮರಾಠಿ ಚೆಲುವೆ ತೇಜಸ್ವಿನಿ ತೆರೆದಿಟ್ಟಿರುವ ಒಂದಷ್ಟು ವಿಚಾರಗಳ ಮೂಲಕ!
ತೇಜಸ್ವಿನಿ ಸದ್ಯ ಮರಾಠಿಯಲ್ಲಿ ಒಂದಷ್ಟು ಬೇಡಿಕೆ ಹೊಂದಿರುವ, ನಾಯಕಿಯಾಗಿ ಮೆರೆದಿದ್ದ ನಟಿ. ಈಕೆ 2009ರ ಆಸುಪಾಸಿನಲ್ಲಿ ನಾಯಕಿಯಾಗಿ ಮರಾಠಿ ಚಿತ್ರರಂಗದಲ್ಲಿ ಪ್ರಚಲಿತಕ್ಕೆ ಬರಲಾರಂಭಿಸಿದ್ದಳು. ಆ ಹೊತ್ತಿನಲ್ಲಿ ನಡೆದಿದ್ದ ಕಹಿ ಘಟನೆಯೊಂದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾಳೆ. ಆ ಹೊತ್ತಿನಲ್ಲಿ ತೇಜಸ್ವಿನಿ ಪುಣೆಯ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗಿದ್ದಳಂತೆ. ಅದರ ಮಾಲೀಕನಾಗಿದ್ದವನು ಓರ್ವ ಕಾರ್ಪೋರೇಟರ್. ಆತ ಸಿನಿಮಾ ನಿರ್ಮಾಣವನ್ನೂ ಮಾಡುತ್ತಿದ್ದ.
ಆ ಕಾಲಕ್ಕೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ತೇಜಸ್ವಿನಿಯ ಮೇಲೆ ಆತನ ಕಾಕ ದೃಷ್ಟಿ ಬಿದ್ದಿತ್ತು. ಹಾಗೆ ಒಂದು ದಿನ ತೇಜಸ್ವಿನಿ ಬಾಡಿಗೆ ಕೊಡಲು ಹೋದಾಗ, ಆ ಆಸಾಮಿ ಕೆಟ್ಟದಾಗಿ ನಡೆದುಕೊಂಡಿದ್ದನಂತೆ. ಅದಾಗಲೇ ಹೆಂಡತಿ ಮಕ್ಕಳಿದ್ದ ಆ ಕಲಾಪೋರೇಟರ್, ತನಗೆ ಸಹಕರಿಸಿದರೆ ಬಾಡಿಗೆ ಕೊಡದೆ ರಾಣಿಯಂತಿರಬಹುದು ಅಂದಿದ್ದಲ್ಲದೇ, ಸಿನಿಮಾಗಳಲ್ಲಿ ಅವಕಾಶ ಕೊಡಿಸುವ ಆಮಿಷವನ್ನೂ ಒಡ್ಡಿದ್ದನಂತೆ. ಅದರಿಂದ ಸಿಟ್ಟಿಗೆದ್ದು ಉಗಿದು ವಾಪಾಸಾಗಿದ್ದಾಗಿ ತೇಜಸ್ವಿನಿ ಹೇಳಿಕೊಂಡಿದ್ದಾಳೆ. ಇದರೊಂದಿಗೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.