ಈಗೆಲ್ಲಿದೆ ಅಸ್ಪೃಶ್ಯತೆ, ಜಾತಿಪದ್ಧತಿ? ಅದೆಲ್ಲವೂ ಮುಗಿದು ಹೋಗಿರುವ ವಿಚಾರ ಅಂತೆಲ್ಲ ಆರಾಮ ಕುರ್ಚಿಯಲ್ಲಿ ಪವಡಿಸಿದ ಮಂದಿ ಆಗಾಗ ಬಡಬಡಿಸುತ್ತಿರುತ್ತಾರೆ. ಆದರೆ ಅಂಥವರ ಸಿನಿಮಕತೆಯನ್ನು ಮೀರಿ ಈ ಸಮಾಜದಲ್ಲಿ ಜಾತಿ ಪದ್ಧತಿ ಎಂಬ ಹೇಸಿಗೆ ಈ ಕ್ಷಣಕ್ಕೂ ಜೀವಂತವಿದೆ. ಸಿನಿಕರ ಮುಖಕ್ಕೆ ಹೊಡೆದಂತೆ ಆಗಾಗ ಈ ಸಮಾಜದಲ್ಲಿ ಜಾತಿ ವ್ಯಾಧಿ ಉಲ್ಬಣಿಸುತ್ತದೆ. ಉಚ್ಛ ಜಾತಿಗಳಲ್ಲಿ ಹುಟ್ಟಿದ್ದನ್ನೇ ಕಿರೀಟ ಅಂದುಕೊಂಡ ದುಷ್ಟ ಮನಸುಗಳು ಹಲವಾರು ಸಂದರ್ಭಗಳಲ್ಲಿ ಅಸ್ಪೃಶ್ಯತೆಯನ್ನು ಆರಾಧಿಸುತ್ತವೆ. ತೀರಾ ಸರ್ಕಾರಿ ಕಚೇರಿಗಳಲ್ಲಿಯೇ ಅಂಥಾದ್ದು ನಡೆಯುತ್ತವೆ ಎಂದರೆ ಜನರ ಮನಸ್ಥಿತಿ ಅದೆಷ್ಟು ಕುಲಗೆಟ್ಟಿರಬೇಡ. ಅದರಲ್ಲಿಯೂ ಪೆರಿಯಾರ್ರಂಥಾ ಮಹಾನುಭಾವರ ಪ್ರಭಾವಕ್ಕೊಳಗಾದ ತಮಿಳುನಾಡಿನ ಸರ್ಕಾರಿ ಕಚೇರಿಯಲ್ಲಿಯೇ ಜಾತಿ ಪದ್ಧತಿ ವಿಜೃಂಭಿಸುತ್ತದೆಯೆಂದರೆ ಅದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಬೇರ್ಯಾವುದಿದೆ?
ತಮಿಳುನಾಡಿನ ಲೋಕೋಪಯೋಗಿ ಇಲಾಖೆಯಲ್ಲಿ ಇಂಥಾದ್ದೊಂದು ಅನಿಷ್ಟ ವಿಜೃಂಭಿಸಿದೆ. ಇಲ್ಲಿ ಆರು ಮಂದಿ ದಲಿತ ಸಿಬ್ಬಂದಿಗಳಿದ್ದರು. ಅವರಿಗೆಲ್ಲ ಮೇಲ್ಜಾತಿಯ ಅಧಿಕಾರಿಗಳು ಜಾತಿ ಆಧಾರಿತವಾಗಿ ನಿರಂತರವಾಗಿ ಕಿರುಕುಳ ನೀಡುತ್ತಾ ಬರುತ್ತಿದ್ದರು. ಅದು ಇತ್ತೀಚೆಗೆ ಯಾವ ಪರಿಯಾಗಿ ಮೇರೆ ಮೀರಿಕೊಂಡಿತ್ತೆಂದರೆ, ಕುಡಿಯುವ ನೀರು, ಟಾಯ್ಲೆಟ್ ಬಳಸಂದಂತೆ ನಿರ್ಭಂಧ ಹೇರಿ ಕಂಪ್ಯೂಟರ್ ಸೆಕ್ಷನ್ನಿಗೂ ಕಾಲಿಡದಂತೆ ತಡೆಯಲಾಗಿತ್ತು. ತೀರಾ ಸರ್ಕಾರಿ ಕಚೇರಿಯಲ್ಲಿಯೇ ಇಂಥಾ ದೌರ್ಜನ್ಯ ಸಹಿಸಿಕೊಂಡು ಸಾಕಾದ ಆ ಆರು ಮಂದಿ ದಲಿತ ಸಿಬ್ಬಂದಿ ಸಂಬಧಿಸಿದವರಿಗೆ ದೂರು ಸಲ್ಲಿಸಿದ್ದರು.
ಅದರ ಆಧಾರದಲ್ಲೀಗ ಜಾತಿವ್ಯಾಧಿಯ ಮಂದಿಗೆ ಪೀಕಲಾಟ ಶುರುವಾಗಿದೆ. ಯಾಕೆಂದರೆ ಅವರ ಮೇಲೆ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ನಿಜಕ್ಕೂ ವಿಷಾಧಕರ ಬೆಳವಣಿಗೆ. ಈ ಜಾತಿ ದೌರ್ಜನ್ಯವೆಂಬುದನ್ನು ವಿದ್ಯೆ ನಾಮಾವಶೇಷ ಮಾಡುತ್ತದೆ ಅಂತ ನಂಬಲಾಗಿತ್ತು. ವಿದ್ಯೆ ಕಲಿತು ಸರಿ ಸಮನಾಗಿ ಬೆಳೆದು ನಿಂತರ ಜಾತಿ ಪದ್ಧತಿಯ ಕಾವು ಕಡಿಮೆಯಾದೀತೆಂದೂ ಹೇಳಲಾಗುತ್ತದೆ. ಆದರೆ ವಿದ್ಯೆ ಕಲಿತ ಮಂದಿಯೇ ಈ ಪರಿಯಾಗಿ ಅಸ್ಪೃಶ್ಯತೆ ಆಚರಿಸೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ಸಾಮಾಜಿಕ ಜಾಲತಾಣದ ತುಂಬೆಲ್ಲ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.