ಕೆಲವೊಮ್ಮೆ ಜೀವನದಲ್ಲಿ ತುಂಬಾ ಇಷ್ಟಪಟ್ಟಿದ್ದನ್ನೇ ಕಳೆದುಕೊಳ್ಳೋ ಸಂದರ್ಭಗಳೆದುರಾಗುತ್ವೆ. ಅದರೊಂದಿಗೆ ಭಾವನೆಗಳು, ನೆನಪುಗಳನ್ನೂ ಕಳೆದುಕೊಂಡಂತೆ ಒದ್ದಾಡೋ ಸಂದರ್ಭಗಳೂ ಸೃಷ್ಟಿಯಾಗುತ್ವೆ. ಹೆಚ್ಚಿನಾದಾಗಿ ಅಂಥಾ ಸಂದಭರ್ಧ ಸೃಷ್ಟಿಯಾಗೋದು ಚಿನ್ನಾಭರಣಗಳ ರೂಪದಲ್ಲಿ. ಒಂದು ಉಂಗುರ, ಮೂಗಿನ ನತ್ತು, ಕಿವಿಯೋಲೆಗಳಲ್ಲಿಯೂ ಇಂಥಾ ಸೆಂಟಿಮೆಂಟುಗಳಿರುತ್ತವೆ. ಅವೇನಾದ್ರೂ ಕಳೆದು ಹೋಗಿ ಸಿಗದಿದ್ರೆ ಹೆಂಗಳೆಯರು ಹೆಜ್ಜೆ ಹೆಜ್ಜೆಗೂ ಕೊರಗ್ತಾರೆ. ಆದ್ರೆ ಹೆಚ್ಚಿನವ್ರಿಗೆ ಕೊರಗೇ ಖಾಯಂ.
ಆದ್ರೆ ಇಲ್ಲೊಬ್ಬಳು ಅದೃಷ್ಟವಂತ ಮಹಿಳೆಯ ಪಾಲಿಗೆ ಪವಾಡ ಸದೃಷವಾಗಿ ಕಳೆದು ಹೋದ ರಿಂಗು ವಾಪಾಸಾಗಿದೆ. ಅರೇ ಒಂದು ಚಿನ್ನದ ಉಂಗುರ ಕಳೆದು ಹೋಗಿ ಮತ್ತೆ ಸಿಗೋದ್ರಲ್ಲಿ ಪವಾಡ ಏನಿರತ್ತೆ ಅಂತ ಅಂದ್ಕೋತೀರೇನೋ… ಈ ಪ್ರಕರಣವನ್ನ ವಿಶೇಷವಾಗಿಸಿರೋದು ಅದು ಮರಳಿ ಸಿಕ್ಕ ಅಚ್ಚರಿದಾಯಕ ರೀತಿ. ಅದರ ವಿವರ ಕೇಳಿದರೆ ಯಾರೇ ಆದ್ರೂ ಥ್ರಿಲ್ ಆಗದಿರೋಕೆ ಸಾಧ್ಯವೇ ಇಲ್ಲ.
ಇಂಥಾದ್ದೊಂದು ಅಪರೂಪದ ವಿದ್ಯಮಾನ ಘಟಿಸಿರೋದು ಸ್ವೀಡನ್ನಿನಲ್ಲಿ. ಅಲ್ಲಿನ ಮಹಿಳೆಯೊಬ್ಬಾಕೆ ೧೯೯೫ರಲ್ಲಿ ಇಷ್ಟದ ಚಿನ್ನದುಂಗುರವನ್ನ ಕಳೆದುಕೊಂಡಿದ್ಲು. ಆ ವರ್ಷ ಕ್ರಿಸ್ಮಸ್ಗೆ ಅಡುಗೆ ತಯಾರಿ ಮಾಡುವಾಗ ಆ ರಿಂಗ್ ಬೆರಳಿಂದ ಕಳಚಿಕೊಂಡು ಕಣ್ಮರೆಯಾಗಿತ್ತು. ಹೇಳಿಕೇಳಿ ಅದು ಆಕೆಯ ಮದುವೆಯಲ್ಲಿ ಹಾಕಿದ್ದ ಉಂಗುರ. ಅಡುಗೆಮನೆ ಸೇರಿದಂತೆ ಎಲ್ಲೆಡೆ ಹುಡುಕಿದ್ರೂ ಅದು ಸಿಕ್ಕಿರಲಿಲ್ಲ. ಒಂದಷ್ಟು ದಿನಗಳ ಕಾಲ ಹುಡುಕಾಡಿದ ಆ ಮಹಿಳೆ ಕ್ರಮೇಣ ಅದರ ಆಸೆ ಬಿಟ್ಟಿದ್ದಳು.
ಹೆಚ್ಚೂ ಕಡಿಮೆ ಆ ರಿಂಗಿನ ನೆನಪೂ ಕೂಡಾ ಮಾಸಲಾಗ್ತಾ ಬಂದಿತ್ತು. ಅದಾಗಿ ಹದಿನೇಳು ವರ್ಷ ಅಂದ್ರೆ ೨೦೧೨ರಲ್ಲಿ ಮಾತ್ರ ಆಕೆ ಊಹಿಸದಂಥಾ ಪವಾಡವೊಂದು ಘಟಿಸಿತ್ತು. ಆ ವರ್ಷ ಆ ಮಹಿಳೆ ಕೈದೋಟದಲ್ಲಿ ಕ್ಯಾರೆಟ್ ಬೀಜ ಹಾಕಿದ್ದಳು. ತಿಂಗಳುಗಳ ಕಳೆದ ನಂತ್ರ ಕ್ಯಾರೆಟ್ ಅನ್ನು ಕಟಾವು ಮಾಡಿದ್ದಳು. ನಂತ್ರ ಕ್ಯಾರೆಟ್ಟುಗಳನ್ನ ತೊಳೆಯುವಾಗ ಆಕೆಗೊಂದು ಅಚ್ಚರಿ ಕಾದಿತ್ತು. ಯಾಕಂದ್ರೆ ಅದ್ರಲ್ಲೊಂದು ಕ್ಯಾರೆಟ್ ಹದಿನೇಳು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಉಂಗುರವನ್ನ ಧರಿಸಿಕೊಂಡಿತ್ತು. ಅದು ತನ್ನದೇ ಅಂತ ಗುರುತು ಹಿಡಿದ ಆ ಮಹಿಳೆ ತನ್ನ ನೆನಪುಗಳೆಲ್ಲವೂ ಹಿಂತಿರುಗಿದಷ್ಟೇ ಸಂಭ್ರಮಿಸಿದ್ದಳಂತೆ. ಇಂಥಾ ಅದೃಷ್ಟ ಜಗತ್ತಿನಲ್ಲಿ ಬೇರ್ಯಾರಿಗೂ ಸಿಕ್ಕಿರಲಿಕ್ಕಿಲ್ಲವೇನೋ…