ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೇಜ಼್ ಚಿತ್ರವೀಗ ಎಲ್ಲ ಕುತೂಹಲದ ಕೇಂದ್ರಬಿಂದು. ಈ ಚಿತ್ರ ದಿನವೊಂದು ಹೊರಳಿಕೊಂಡಾಕ್ಷಣವೇ ಪ್ರೇಕ್ಷಕರ ಮುಂದೆ ಬರಲಿದೆ. ಭರ್ತಿ ಎರಡು ವರ್ಷಗಳ ಕಾಲ ತಯಾರುಗೊಂಡು, ಕೊರೋನಾ ಕಂಟಕವನ್ನು ಸಮರ್ಥವಾಗಿ ದಾಟಿಕೊಂಡಿರುವ ಈ ಚಿತ್ರವೀಗ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಸಡಗರದಲ್ಲಿದೆ. ಮೊನ್ನೆಯಷ್ಟೇ ಇದರ ಟ್ರೇಲರ್ ಒಂದು ಬಿಡುಗಡೆಯಾಗಿತ್ತಲ್ಲಾ? ಅದು ಮೂಡಿ ಬಂದಿರೋ ರೀತಿಯೇ ಒಂದಿಡೀ ಚಿತ್ರ ರೂಪುಗೊಂಡಿರುವ ರೀತಿಗೆ ಸ್ಪಷ್ಟ ಉದಾಹರಣೆ. ಅದರೊಂದಿಗೆ ಮೇಕಿಂಗ್ನ ಅದ್ದೂರಿತನ ಮತ್ತು ಭಿನ್ನ ಕಥನದ ಸೂಚನೆಗಳೂ ಕೂಡಾ ಹೊರ ಬಿದ್ದಿವೆ. ಚೇಜ಼್ನ ಆಕರ್ಷಣೆಗಳು ಇದೀಗ ಹಂತ ಹಂತವಾಗಿ, ಒಂದೊಂದಾಗಿ ಜಾಹೀರಾಗುತ್ತ ಪ್ರೇಕ್ಷಕರೊಳಗೆ ಕುತೂಹಲವೆಂಬುದು ನಿಗಿನಿಗಿಸಿದೆ.
ನಿರ್ದೇಶಕ ವಿಲೋಕ್ ಶೆಟ್ಟಿ ಇದರಲ್ಲಿನ ಒಂದೊಂದು ಪಾತ್ರಗಳನ್ನೂ ಸಹ ಸದಾ ಕಾಡುವಂತೆ, ನೆನಪಿಟ್ಟುಕೊಳ್ಳುವಂತೆ ರೂಪಿಸಿದ್ದಾರಂತೆ. ಕೆಲ ಪಾತ್ರಗಳಂತೂ ಪ್ರೇಕ್ಷಕರೆಲ್ಲರೂ ಅಚ್ಚರಿಗೊಳ್ಳುವಂತಿದೆ. ಈ ಚಿತ್ರದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್ ಶೆಟ್ಟಿ, ರಾಜೇಶ್ ನಟರಂಗ, ಸುಶಾಂತ್ ಪೂಜಾರಿ ಮುಂತಾದವರ ತಾರಾಗಣವಿದೆ ಎಂಬುದೂ ಕೂಡಾ ಈಗಾಗಲೇ ಬಹಿರಂಗಗೊಂಡಿರುವ ವಿಚಾರ. ಆದರೆ ಇದರಲ್ಲಿ ರಿವೀಲ್ ಆಗದಿರುವಂಥಾ ವಿಶೇಷ ಪಾತ್ರಗಳೂ ಇದ್ದಾವೆ. ಅದರಲ್ಲಿ ತುಳು ಚಿತ್ರರಂಗದಲ್ಲಿ ಹಾಸ್ಯ ದಿಗ್ಗಜರಾಗಿ ಗುರುತಿಸಿಕೊಂಡು, ತುಳುನಾಡ ಮಾಣಿಕ್ಯ ಎಂದೇ ಹೆಸರಾಗಿರುವ ಅರವಿಂದ ಬೋಳಾರ್ ಪಾತ್ರವೂ ಪ್ರಧಾನವಾಗಿದೆ.
ಸಿಂಪ್ಲಿ ಫನ್ ಮೀಡಿಯಾ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಅರವಿಂದ ಬೋಳಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರಂತೆ. ಈ ಹಿಂದೆ ರಜನೀಕಾಂತ್ ನಿರ್ದೇಶನದ ರೋಬೋ ೨.೦ ಎಂಬ ಚಿತ್ರ ತೆರೆಕಂಡಿತ್ತು. ಅದರಲ್ಲಿ ಪಕ್ಷಿರಾಜನ ಪಾತ್ರವೂ ವಿಶೇಷ ಆಕರ್ಷಣೆಯಾಗಿತ್ತು. ಈ ಸಿನಿಮಾದಲ್ಲಿಯೂ ಅರವಿಂದ ಬೋಳಾರ್ ಅಂಥಾದ್ದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಾ ಅಂತೊಂದು ಗುಮಾನಿ ಎಲ್ಲರನ್ನೂ ಕಾಡುತ್ತಿದೆ. ನಿರ್ದೇಶಕ ವಿಲೋಕ್ ಶೆಟ್ಟಿ ಈ ಬಗ್ಗೆ ನಿಖರ ಮಾಹಿತಿಗಳನ್ನು ಕೊಡುವುದಿಲ್ಲ. ಆದರೆ ಅರವಿಂದ ಬೋಳಾರ್ ಪಾತ್ರ ಕನ್ನಡ ಪ್ರೇಕ್ಷಕರನ್ನೂ ನಗಿಸಲಿದೆಯಂತೆ. ಆ ಪಾತ್ರದ ಹಾಸ್ಯದ ತೀವ್ರತೆ ಎಂಥಾದ್ದಿದೆಯೆಂದರೆ ಚಿತ್ರೀಕರಣದ ಸಂದರ್ಭದಲ್ಲಿ ನಗುವನ್ನು ತಡೆದುಕೊಂಡು ಚಿತ್ರೀಕರಣ ನಡೆಸೋದೇ ದೊಡ್ಡ ಸವಾಲಾಗಿ ಹೋಗಿತ್ತಂತೆ. ಈಗಾಗಲೇ ತುಳು ನಾಡಿನಲ್ಲಿ ಹಾಸ್ಯ ನಟನಾಗಿ ಮಿಂಚಿರುವ ಅರವಿಂದ ಬೋಳಾರ್ ಈ ಮೂಲಕ ಬಹುಮುಖ್ಯ ಪಾತ್ರದಲ್ಲಿ ಕನ್ನಡ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ.
ಈ ಚಿತ್ರವನ್ನು ಮನೋಹರ್ ಸುವರ್ಣ ಸಿಂಪ್ಲಿ ಫನ್ ಮೀಡಿಯಾ ನೆಟ್ವರ್ಕ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ತಾರಾಗಣವಿದೆ.