ಅವರು ತಮ್ಮನ್ನು ಹಸು ಅಂದುಕೊಂಡಿರ್ತಾರೆ!
ಈ ವಿಶ್ವದಲ್ಲಿ ಚಿತ್ರ ವಿಚಿತ್ರವಾದ ಕಾಯಿಲೆಗಳಿದ್ದಾವೆ. ಬಂದರೆ ಜೀವವನ್ನೇ ತೆಗೆದು ಬಿಡುವಂಥವು, ಅಕ್ಷರಶಃ ನರಕಯಾತನೆ ತಂದಿಡುವಂಥವೂ ಸೇರಿದಂತೆ ಕಾಯಿಲೆಗಳಿಗೆ ನಾನಾ ಮುಖ. ಅದು ದೈಹಿಕ ಕಾಯಿಲೆಗಳ ವಿಚಾರ. ಇನ್ನುಳಿದಂತೆ ಕೆಲ ಮಾನಸಿಕ ವ್ಯಾಧಿಗಳಿದ್ದಾವೆ. ಅವುಗಳ ಬಗ್ಗೆ ಅರಿಯುತ್ತಾ ಹೋದಂತೆ ನಂಬಲಸಾಧ್ಯವಾದ, ಇಂಥಾ ಕಾಯಿಲೆಗಳೀ ಇರ್ತಾವಾ ಎಂಬಂತೆ ಅಚ್ಚರಿ ಮೂಡಿಸುವವಿವರಗಳು ಬಿಚ್ಚಿಕೊಳ್ಳುತ್ತವೆ. ಹಾಗೆ ನೋಡಿದರೆ ಮನಸಿಗೆ ಸಂಬಂಧಿಸಿದ ಕಾಯಿಲೆಗಳದ್ದೊಂದು ದೊಡ್ಡ ಪಟ್ಟಿಯೇ ಇದೆ. ನಮ್ಮ ಪಾಲಿಗೆ ಬೋಧ ಕಳೆದುಕೊಂಡು ಕಂಡ ಕಂಡಲ್ಲಿ ಸುತ್ತುವಂಥಾದ್ದು ಮಾನಸಿಕ ಕಾಯಿಲೆ. ಆದರೆ ಅದಕ್ಕೆ ಅದೆಲ್ಲವನ್ನೂ ಮೀರಿದ ಮಜಲುಗಳಿದ್ದಾವೆ.
ಈಗ ನಾವು ಹೇಳ ಹೊರಟಿರೋದು ಅಂಥಾದ್ದೇ ಒಂದು ವಿಚಿತ್ರವಾದ ಕಾಯಿಲೆಯ ಬಗ್ಗೆ, ಈ ಮಾನಸಿಕ ವ್ಯಾಧಿ ಅಮರಿಕೊಂಡರೆ ಆ ರೋಗಿಗೆ ಮಾತ್ರವ್ಲ್ಲದೇ ಮನೆ ಮಂದಿಗೂ ನರಕ ಕಾಣಿಸುತ್ತೆ. ಯಾಕಂದ್ರೆ ಈ ಕಾಯಿಲೆಗೀಡಾದವರು ತಮ್ಮನ್ನು ತಾವು ಹಸು ಎಂದೇ ಭ್ರಮಿಸ್ತಾರಂತೆ. ಅದೇನು ಸಾಮಾನ್ಯದ ಭ್ರಮೆಯಲ್ಲ. ಅದು ಆವರಿಸಿಕೊಳ್ಳುತ್ತಿದ್ದಂತೆಯೇ ಅವರು ಥೇಟು ಹಸುವಿನಂತೆ ವರ್ತಿಸಲಾರಂಭಿಸ್ತಾರೆ. ಎರಡು ಕಾಲುಗಳಲ್ಲಿ ನಡೆಯೋದನ್ನು ಮರೆತು ನೆಲಕ್ಕೆ ಕೈಯೂರಿ ನಡೆಯಲಾರಂಭಿಸ್ತಾರೆ. ಅದು ಉಲ್ಬಣಿಸುತ್ತಿದ್ದಂತೆಯೇ ಊಟ, ತಿಂಡಿಗಳನ್ನ ಮರೆತು ಹುಲ್ಲು ಮೇಯಲು ಹೊರಟು ಬಿಡ್ತಾರೆ.
ಇಂಥಾದ್ದೊಂದು ಅನಾಹುತಕಾರಿ ಮನೋ ರೋಗಕ್ಕೆ ಮನಃಶಾಸ್ತ್ರಜ್ಞರು ಬಾನ್ತ್ರೊಪಿ ಅನ್ನೋ ಹೆಸರಿಟ್ಟಿದ್ದಾರೆ. ನಮ್ಮಲ್ಲಿ ಇಂಥಾ ಕಾಯಿಲೆ ಬಂದರೆ ಮಾಟ ಮಂತ್ರ ಮುಂತಾದ ಅನುಮಾನಗಳು ಹುಟ್ಟಿಕೊಳ್ಳಬಹುದು. ಅದರ ನಿವಾರಣೆಗೆಂದು ಮಂತ್ರವಾದಿಗಳ ಮೊರೆ ಹೋಗುವ ಹೊತ್ತಿಗೆಲ್ಲ ಅದು ಉತ್ತುಂಗಕ್ಕೇರಿದರೂ ಅಚ್ಚರಿಯೇನಿಲ್ಲ. ಆದ್ರೆ, ಇಂಥಾ ಮಾನಸಿಕ ಕಾಯಿಲೆಗೂ ಕೂಡಾ ಇತರೇ ಕಾಯಿಲೆಯಂತೆಯೇ ಮದ್ದಿದೆ. ಮನೋ ವೈದ್ಯರು ಸತತವಾದ ಕೌನ್ಸೆಲಿಂಗ್ ಮತ್ತು ಟ್ರೀಟ್ಮೆಂಟುಗಳ ಮೂಲಕ ವಾಸಿ ಮಾಡುತ್ತಾರೆ. ಆದರೆ ಅದಕ್ಕೆ ಒಂದಷ್ಟು ಸಮಯ ಹಿಡಿಯುತ್ತಂತೆ.