ಕಾರಿನ ಮೇಲೆ ಕಕ್ಕ ಮಾಡುತ್ತಿದ್ದ ಹಕ್ಕಿಗಳಿಗೆ ಆ ಜನ ಏನು ಮಾಡಿದ್ದಾರೆ ಗೊತ್ತಾ?
ತಾನು ಮಾತ್ರವೇ ಸದಾ ಕಾಲವೂ ಯಾವುದೇ ರಿಸ್ಕಿಲ್ಲದೆ ಸೇಫ್ ಆಗಿರಬೇಕೆಂಬುದು ಮನುಷ್ಯನ ಜಾಯಮಾನ. ಇಂಥಾ ಮನಸ್ಥಿತಿಯೇ ನಮ್ಮ ಸುತ್ತಾ ಸ್ವಚ್ಚಂದವಾಗಿ ಜೀವಿಸುತ್ತಿದ್ದ ಕೋಟ್ಯಂತರ ಜೀವರಾಶಿಗೆ ಕಂಟಕವಾಗಿಯೂ ಮಾರ್ಪಟ್ಟಿದೆ. ಬೇರೆಲ್ಲ ಅಂಕ ಅಂಶಗಳ ಕಥೆಯೇನೋ ಗೊತ್ತಿಲ್ಲ. ಆದರೆ ಮನುಷ್ಯನ ಸ್ವೇಚ್ಛೆ ಮತ್ತು ಸ್ವಾರ್ಥಕ್ಕೆ ಬಲಿಯಾಗುತ್ತಿರೋ ಜೀವರಾಶಿಗಳಲ್ಲಿ ಹಕ್ಕಿಗಳು ಮುಂಚೂಣಿಯಲ್ಲಿವೆ!
ಇದೀಗ ಇಂಗ್ಲೆಂಡಿನ ಪ್ರದೇಶವೊಂದರ ಮಂದಿ ತಂತಮ್ಮ ಕಾರುಗಳನ್ನು ಸೇಫ್ ಮಾಡೋ ಉದ್ದೇಶದಿಂದ ಹಕ್ಕಿಗಳಿಗೆ ರಾತ್ರಿ ವಿಶ್ರಾತಿ ಪಡೆಯಲೂ ಒಂದು ನೆಲೆಯಿಲ್ಲದಂತೆ ಮಾಡಿದ್ದಾರೆ. ಈ ವಿಚಾರವೀಗ ಅಂತಾರಾಷ್ಟ್ರೀಯ ಪ್ರಾಣಿದಯಾ ಸಂಘಗಳ ಗಮನಕ್ಕೂ ಬಂದು ವಿಶ್ವಾಧ್ಯಂತ ಚರ್ಚೆ ಹುಟ್ಟು ಹಾಕಿದೆ. ಇಂಗ್ಲೆಂಡ್ನ ಬ್ರಿಸ್ಟೋಲ್ ಎಂಬ ಪ್ರದೇಶದಲ್ಲಿ ನಮ್ಮ ಬೆಂಗಳೂರಿನಂಥಾ ಮಹಾನಗರಗಳಲ್ಲಿರುವಂಥಾದ್ದೇ ಸಮಸ್ಯೆ ಒಂದಿತ್ತು. ಮನೆಯೆದುರಿನ ಮರದ ಕೆಳಗೆ ಅಥವ ಪಾರ್ಕಿಂಗ್ ಏರಿಯಾದಲ್ಲಿ ಕಾರು ನಿಲ್ಲಿಸಿದರೆ ಮಾರನೇ ದಿನ ಬೆಳಗ್ಗಿನ ಹೊತ್ತಿಗೆಲ್ಲಾ ಕಾರೆಲ್ಲವೂ ಹಕ್ಕಿ ಪಿಕ್ಕೆಯಿಂದಲೇ ತುಂಬಿ ಹೋಗುತ್ತಿತ್ತು. ದಿನಾ ಬೆಳಗ್ಗೆ ಕಚೇರಿಗೆ ತೆರಳೋ ಮುನ್ನ ಕಾರನ್ನು ವಾಶ್ ಮಾಡೋದೇ ದೊಡ್ಡ ತಲೆನೋವಾಗಿಸಿಕೊಂಡ ಮಂದಿ ಮಂಡೆಬಿಸಿ ಮಾಡಿಕೊಂಡಿದ್ದಾಗಲೇ ಅಲ್ಲಿನ ಐನಾತಿಯೊಬ್ಬ ಈ ಪಿಕ್ಕೆ ಪ್ರಾಬ್ಲಮ್ಮಿಗೆ ಹೊಸಾ ಪರಿಹಾರವೊಂದನ್ನು ಕಂಡು ಹಿಡಿದಿದ್ದಾನೆ.
ಪ್ಲಾಸ್ಟಿಕ್ಕಿನ ಮುಳ್ಳಿನಂಥಾ ಹಗ್ಗಗಳನ್ನು ತಯಾರಿಸಿ ಅದನ್ನು ಕಾರ್ ಪಾರ್ಕಿಂಗ್ ಏರಿಯಾದಲ್ಲಿರೋ ಸಮಸ್ತ ಮರಗಳ ಟೊಂಗೆಗಳಿಗೂ ಸುತ್ತಿದ್ದಾನೆ. ಅದಾದ ಮಾರನೇ ದಿನ ಂಕಾರುಗಳೆಲ್ಲ ಯಥಾ ಸ್ಥಿತಿಯಲ್ಲಿರೋ ಮೂಲಕ ಈ ಪ್ಲಾನು ಸಕ್ಸಸ್ಸಾಗಿದೆ. ಇದೀಗ ಇಂಗ್ಲೆಂಡಿನ ಎಲ್ಲ ಏರಿಯಾಗಳಲ್ಲಿಯೂ ಈ ಪಿಕ್ಕೆ ನಿರೋಧಕ ಐಡಿಯಾ ಸಾವ್ರತ್ರಿಕಗೊಂಡಿದೆ. ಆದರೆ ಅಳಿದುಳಿದ ಮರಗಳನ್ನೇ ಆವಾಸ ಸ್ಥಾನ ಮಾಡಿಕೊಂಡಿದ್ದ ಹಕ್ಕಿಗಳು ಎಲ್ಲಿ ಹೋಗುತ್ತವೆ, ಅವುಗಳ ಗತಿಯೇನು ಎಂಬುದರ ಬಗ್ಗೆ ಮಾತ್ರ ಈ ಏರಿಯಾದ ಮಂದಿ ಯೋಚಿಸುತ್ತಿಲ್ಲ. ಆದರೆ ಪ್ರಾಣಿ ದಯಾ ಸಂಘಗಳು ಮಾತ್ರ ಈ ಪ್ಲಾನನ್ನು ನಿಷ್ಕ್ರಿಯಗೊಳಿಸುವ ಪಣ ತೊಟ್ಟು ಬೀದಿಗಿಳಿಯಲು ತಯಾರಾಗಿವೆ!