ಪಿ.ಎನ್ ಸತ್ಯ ಶಿಷ್ಯನ ಭಿನ್ನ ಯಾನ!
ಸಿನಿಮಾ ಕನಸೆಂಬುದು ಕೈಚಾಚಿದವರಿಗೆಲ್ಲ ಸಲೀಸಾಗಿ ದಕ್ಕುವಂಥಾದ್ದಲ್ಲ. ಅಲ್ಲಿ ಅಲೆದಾಡಬೇಕು, ಏದುಸಿರು ಬಿಟ್ಟು ಕಾದಾಡಬೇಕು, ಯಾರದ್ದೋ ನೆರಳಲ್ಲಿ ಅವುಡುಗಚ್ಚಿ ಕುಳಿತು ಕೆಲಸವನ್ನೇ ಧ್ಯಾನವಾಗಿಸಿಕೊಳ್ಳಬೇಕು. ಅಂಥಾದ್ದೊಂದು ಅಸೀಮ ಧ್ಯಾನದ ಫಲವಾಗಿಯೇ ಹುಟ್ಟು ಪಡೆದ ವಿಶಿಷ್ಟ ಚಿತ್ರ ಭೈರವ. ಈ ಮೂಲಕ ಖ್ಯಾತ ನಿರ್ದೇಶಕ ಪಿ.ಎನ್ ಸತ್ಯ ಅವರ ಗರಡಿಯಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅವರ ಬಹುತೇಕ ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಸಾಥ್ ಕೊಟ್ಟಿರುವ ರಾಮ್ ತೇಜ್ ನಿರ್ದೇಶನದ ಚೊಚ್ಚಲ ಚಿತ್ರ. ಟೈಟಲ್ ಅನೌಸ್ ಆದೇಟಿಗೆ ತನ್ನೊಳಗಿನ ಖದರ್ ಮೂಲಕವೇ ಈ ಸಿನಿಮಾ ಸದ್ದು ಮಾಡಿತ್ತು. ಇದೀಗ ಚಿತ್ರೀಕರಣವನ್ನೆಲ್ಲ ಸಾಂಘವಾಗಿ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿಕೊಂಡಿದೆ.
ಕಳೆದ ದೀಪಾವಳಿಯ ಹೊತ್ತಿಗೆಲ್ಲಾ ಚಿತ್ರೀಕರಣ ಆರಂಭಿಸಿದ್ದ ಮೈಥಾಲಾಜಿಕಲ್ ಥ್ರಿಲ್ಲರ್ ಚಿತ್ರ ಭೈರವ. ಈಗಾಗಲೇ ಕಮರೊಟ್ಟು ಚೆಕ್ಪೋಸ್ಟ್, ಒಲವೇ ಮಂದಾರ ಪಾರ್ಟ್೨, ಚೀ ಥೂ ಯುವಕರ ಸಂಘ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಸನತ್ ಭೈರವ ನಾಯಕನಾಗಿ ಎಂಟ್ರಿ ಕೊಡುವ ಸನ್ನಾಹದಲ್ಲಿದ್ದಾರೆ. ಒಂದು ಮೊಟ್ಟೆಯ ಕಥೆ ಖ್ಯಾತಿಯ ಶೈಲಶ್ರೀ ಮುಲ್ಕಿ ನಾಯಕಿಯಾಗಿ ಜೊತೆಯಾಗಿದ್ದಾರೆ. ಶಿರಾಡಿ ಘಾಟ್ ಚಿತ್ರದ ಮೂಲಕ ಗಮನ ಸೆಳೆದಿದ್ದ ಉಮೇಶ್ ಸಕ್ಕರೆನಾಡು ಒಂದು ಪ್ರಧಾನ ಪಾತ್ರದ ಮೂಲಕ ಭೈರವನಿಗೆ ಜೊತೆಯಾಗಿದ್ದಾರೆ. ಯಾವುದೇ ಸದ್ದುಗದ್ದಲವಿಲ್ಲದೆ ತನ್ನ ಪಾಡಿಗೆ ತಾನು ಚಿತ್ರೀಕರಣ ಮುಗಿಸಿಕೊಂಡ ಚಿತ್ರತಂಡವೀಗ ಒಂದಷ್ಟು ಅಚ್ಚರಿಗಳೊಂದಿಗೆ ಪ್ರೇಕ್ಷಕರನ್ನು ಎದುರುಗೊಳ್ಳಲು ತಯಾರಿ ನಡೆಸಿದೆ.
ಹೆಸರಲ್ಲಿಯೇ ಒಂದು ಅಗೋಚರ ಖದರ್ ಅನ್ನು ಬಚ್ಚಿಟ್ಟುಕೊಂಡಂತಿರೋ ಭೈರವ ಮೈಥಾಲಾಜಿಕಲ್ ಥ್ರಿಲ್ಲರ್ ಚಿತ್ರ. ಅದು ನಿರ್ದೇಶಕ ರಾಮ್ ತೇಜ್ ಪಾಲಿಗೆ ಮಾತ್ರವಲ್ಲ; ಕನ್ನಡ ಚಿತ್ರರಂಗದ ಪಾಲಿಗೂ ಕೂಡಾ ಭಿನ್ನ ಸಿನಿಮಾ ಎಂಬ ಸೂಚನೆಗಳು ಸಿಗುತ್ತಿವೆ. ಈ ಸಿನಿಮಾ ಬಗ್ಗೆ ನಿರ್ದೇಶಕರು ಬಿಚ್ಚಿಟ್ಟಿರುವ ಒಂದಷ್ಟು ವಿಚಾರಗಳು ಅದಕ್ಕೆ ಪೂರಕವಾಗಿವೆ. ಪಿ.ಎನ್ ಸತ್ಯ ಗರಡಿಯಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಯ ನಿರ್ವಹಿಸಿರುವವರು ರಾಮ್ ತೇಜ್. ಆರಂಭದಿಂದ ಅವರು ಮರಣ ಹೊಂದುವವರೆಗೂ ಜೊತೆಯಾಗಿಯೇ ಇದ್ದ ಅವರ ಪಾಲಿಗೆ ರೌಡಿಸಂ ಫ್ಲೇವರಿನ ಸಿನಿಮಾಗಳೆಂದರೆ ಅಚ್ಚುಮೆಚ್ಚು. ಸ್ವತಂತ್ರ ನಿರ್ದೇಶಕನಾದರೆ ಹೊಸತನ ಹೊಂದಿರೋ ಅಂಥಾ ಸಿನಿಮಾ ಮೂಲಕವೇ ಲಾಂಚ್ ಆಗಬೇಕೆಂಬ ಇರಾದೆ ರಾಮ್ ತೇಜ್ರದ್ದಾಗಿತ್ತು.
ಅಂಥಾ ಮನಸ್ಥಿತಿಯನ್ನು ಅಚಾನಕ್ಕಾಗಿ ಬದಲಾಯಿಸಿ ಬಿಟ್ಟವರು ರಾಮ್ಚರಣ್ ಅವರ ಸ್ನೇಹಿತ, ಭಾರತೀಯ ಸಿನಿಮಾ ರಂಗದ ನಂಟು ಹೊಂದಿರುವ ನಿರ್ಮಾಪಕ ಚರಣ್ ಸುವರ್ಣ. ಮೈಥಾಲಾಜಿಕಲ್ ಥ್ರಿಲ್ಲರ್ ಜಾನರಿನಂಥಾ ಒಂದು ಕಥಾ ಎಳೆಯನ್ನು ಚರಣ್ ಸುವರ್ಣ ಹೇಳಿದೇಟಿಗೆ ಅದು ರಾಮ್ ತೇಜ್ಗೆ ಇಷ್ಟವಾಗಿ ಹೋಗಿತ್ತು. ಅದಾಗಿ ಒಂದು ವಾರ ಕಳೆಯೋದರೊಳಗಾಗಿ ಸಂಭಾಷಣೆ ಸಮೇತವಾದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದ ರಾಮ್ ತೇಜ್, ಒಂದೆಳೆ ಕಥೆ ಹೇಳಿದ್ದ ಚರಣ್ ಸುವರ್ಣರಿಗೇ ಅಚ್ಚರಿ ಮೂಡಿಸಿದ್ದರಂತೆ. ಒಂದು ಜೋಡಿ ಐಟಿ ದಂಪತಿ, ಅವರನ್ನು ಕಾಡುವ ಮಕ್ಕಳಾಗದ ಚಿಂತೆ, ಅದರ ಸುತ್ತ ಹಬ್ಬಿಕೊಳ್ಳುವ ಮೆಚೂರ್ಡ್ ಲವ್ ಸ್ಟೋರಿ ಮತ್ತು ಈ ದಂಪತಿ ಉತ್ತರಪ್ರದೇಶಕ್ಕೆ ತೆರಳಿದಾಗ ತೆರೆದುಕೊಳ್ಳುವ ಮೈಥಾಲಾಜಿಕಲ್ ಮಗ್ಗುಲು… ಇವಿಷ್ಟರೊಂದಿಗೆ ಅದ್ಭುತ ಎನಿಸುವಂಥಾದ್ದೊಂದು ದೃಷ್ಯ ಕಾವ್ಯವನ್ನು ಕಟ್ಟಿ ಕೊಟ್ಟ ಖುಷಿ ರಾಮ್ ತೇಜ್ರಲ್ಲಿದೆ.
ಈ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಪ್ರದೇಶದಲ್ಲಿಯೇ ನಡೆದಿದೆ. ರಿಶಿಕೇಶ, ಹರಿದ್ವಾರ, ಕಾಶಿ ಮತ್ತು ಮೋದಿ ನಗರಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೈನಸ್ ಡಿಗ್ರಿಯ ಕೊರೆಯುವ ಚಳಿಯಲ್ಲಿಯೂ ಚಿತ್ರತಂಡ ಅಂದುಕೊಂಡಂತೆಯೇ ಯಶಸ್ವಿಯಾ ಸಿನಿಮಾ ಮಾಡಿ ಮುಗಿಸಿದೆ. ಅಂದಹಾಗೆ ಈ ಚಿತ್ರವನ್ನು ವಿಶಿಕಾ ಫಿಲಂಸ್ ಬ್ಯಾನರಿನಡಿಯಲ್ಲಿ ಉತ್ತರಪ್ರದೇಶದ ಹನೀ ಚೌಧರಿ ಮತ್ತು ದೆಹಲಿಯ ವೈಭವ್ ಬಜಾಜ್ ನಿರ್ಮಾಣ ಮಾಡಿದ್ದಾರೆ. ಶ್ರೀನಿವಾಸ್ ಸಿ.ವಿ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಅಮೀತ್ ದೀಕ್ಷಿತ್, ವಿಶ್ವಜಿತ್ ಮತ್ತು ಕನ್ನಡದವರಾದ ಕಿಶೋರ್ ಈ ಸಿನಿಮಾದ ಮೂರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕನ್ನಡದ ಮೊಟ್ಟ ಮೊದಲ ವೆಬ್ ಸೀರೀಸ್ ಎಂಬ ಹೆಗ್ಗಳಿಕೆ ಹೊಂದಿರುವ ಸೈಕೋ ಎಂಬ ವೆಬ್ ಸೀರೀಸ್ ಅನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ರಾಮ್ ತೇಜ್ ಭೈರವ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಪ್ರತಿಭಾವಂತರ ತಾಂತ್ರಿಕ ತಂಡವೂ ಸಾಥ್ ಕೊಟ್ಟಿದೆ. ಈ ಬಗೆಯ ಚಿತ್ರಗಳಿಗೆ ಹಿನ್ನೆಲೆ ಸಂಗೀತ ತುಂಬಾನೇ ಮಹತ್ವ ಪಡೆದುಕೊಳ್ಳುತ್ತದೆ. ಇಲ್ಲಿ ಆ ಜವಾಬ್ದಾರಿಯನ್ನು ರಾಮ್ ಗೋಪಾಲ್ ವರ್ಮಾ ಸಿನಿಮಾಗಳ ಮೂಲಕ ಖ್ಯಾತರಾಗಿರುವ ಬಾಪಿ ಟ್ಯೂಟಲ್ ನಿಭಾಯಿಸಿದ್ದಾರೆ. ಬಾಪಿ ಟ್ಯೂಟಲ್ ಬಾಲಿವುಡ್ ಮಟ್ಟದಲ್ಲಿಯೂ ಹೆಸರುವಾಸಿಯಾಗಿರುವವರು. ಸರ್ಕಾರ್, ಸುದೀಪ್ ನಟನೆಯ ಪೂಂಖ್, ರನ್ ಮುಂತಾದ ಚಿತ್ರಗಳಿಗೂ ಅವರೇ ಹಿನ್ನೆಲೆ ಸಂಗೀತ ನೀಡಿದ್ದರು. ಇನ್ನುಳಿದಂತೆ ಸುದೀಪ್ ಫೆಡ್ರಿಕ್ ಸಂಕಲನ, ಚರಣ್ ಸುವರ್ಣ ಕಥೆ ಮತ್ತು ರಾಮ್ತೇಜ್ ಅವರ ಸ್ಕ್ರೀನ್ಪ್ಲೇ, ಸಂಭಾಷಣೆ ನಿರ್ದೇಶನ ಭೈರವನಿಗಿದೆ.
ಇದೀಗ ಸೌಂಡ್ ಡಿಸೈನಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ಮತ್ತೊಂದೆಡೆಯಲ್ಲಿ ಆಡಿಯೋ ಹಕ್ಕುಗಳಿಗಾಗಿನ ಮಾತುಕಥೆಗಳೂ ಬಿರಿಸು ಪಡೆದುಕೊಂಡಿವೆ. ಅದಾದಾಕ್ಷಣವೇ ಹಾಡುಗಳು, ಟೀಸರ್, ಟ್ರೈಲರ್ಗಳೆಲ್ಲ ಹಂತ ಹಂತವಾಗಿ ಬಿಡುಗಡೆಗೊಳ್ಳಿದ್ದಾವೆ. ಒಟ್ಟಾರೆಯಾಗಿ ಈ ಚಿತ್ರ ಮೈಥಾಲಾಜಿಕಲ್ ಥ್ರಿಲ್ಲರ್ ಜಾನರಿನಲ್ಲಿಯೇ ವಿಶೇಷವಾಗಿ ರೂಪುಗೊಂಡಿದೆಯಂತೆ. ಇಷ್ಟರಲ್ಲಿಯೇ ಚಿತ್ರತಂಡ ಒಂದಷ್ಟು ಅಚ್ಚರಿಗಳೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ. ಇದೀಗ ಒಂದನ್ನೊಂದು ಮೀರಿಸುವಂಥಾ ಹೊಸತನಗಳ ಮೂಲಕ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿವೆ. ಭೈರವ ಆ ಯಾದಿಯಲ್ಲಿ ಮುಂಚೂಣಿಯಲ್ಲಿದೆ.