ಉತ್ತರ ಪ್ರದೇಶದಲ್ಲೊಂದು ಅಚ್ಚರಿಯ ಘಟನೆ!
ಶೋಧ ನ್ಯೂಸ್ ಡೆಸ್ಕ್: ಕೆಲವೊಮ್ಮೆ ಸಣ್ಣ ಪುಟ್ಟ ಸಮಸ್ಯೆಗಳೂ ದೊಡ್ಡದಾಗಿ ಬೆಳೆದುಕೊಂಡು ಪೊಲೀಸು, ಕೋರ್ಟು ಕಚೇರಿ ಅಂತೆಲ್ಲ ಅಲೆದಾಡುವ ಸಂದರ್ಭಗಳು ಸೃಷ್ಟಿಯಾಗೋದಿದೆ. ಬಹುಶಃ ರೈತಾಪಿ ವರ್ಗದ ಇರುವಿಕೆ ಇರುವ ಕಡೆಯಲ್ಲೆಲ್ಲ ಬೇಲಿ ಸಮಸ್ಯೆ, ಜನ ಜಾನುವಾರುಗಳ ಸಮಸ್ಯೆ ಇದ್ದಿದ್ದೇ. ಕೆಲವೊಂದು ಸಲ ಯಾರ ಮನೆಯ ಜಾನುವಾರುಗಳನ್ನೋ ಇನ್ಯಾರೋ ಕಟ್ಟಿ ಹಾಕಿ ಹಳ್ಳಿಗಳ ಲೆವೆಲ್ಲಿನಲ್ಲಿ ಅದೊಂದು ದೊಡ್ಡ ರಾದ್ಧಾಂತ, ರಾಮಾಯಣವಾಗೋದೂ ಇದೆ. ಅದು ಎಲ್ಲರ ಅಂಕೆ ಮೀರಿಕೊಂಡು ಪೊಲೀಸ್ ಠಾಣಾ ಮೆಟ್ಟಿಲೇರಿ ರಂಪವಾಗೋದೂ ಇದೆ. ಸದ್ಯ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿಯೂ ಇಂಥಾದ್ದೇ ಪ್ರಕರಣವೊಂದು ನಡೆದಿದೆ.
ಇಲ್ಲಿನ ಹಳ್ಳಿಯೊಂದರಲ್ಲಿ ರೈತನಾಗಿ ದುಡಿಯುತ್ತಿದ್ದ ಓರ್ವನ ಎಮ್ಮೆ ಕೆಲ ತಿಂಗಳುಗಳ ಹಿಂದೆ ನಾಪತ್ತೆಯಾಗಿತ್ತು. ಒಳ್ಳೇ ಹಾಲು ಕೊಡುತ್ತಿದ್ದ ಪ್ರೀತಿಯ ಎಮ್ಮೆ ಏಕಾಏಕಿ ನಾಪತ್ತೆಯಾಗಿದ್ದನ್ನು ನೋಡಿದ ಆ ರೈತನ ಇಡೀ ಸಂಸಾರವೇ ದುಃಖದಲ್ಲಿ ಮುಳುಗಿ ಹೋಗಿತ್ತು. ಯಥಾ ಪ್ರಕಾರವಾಗಿ ಆ ಕ್ಷಣದಿಂದಲೇ ಹುಡುಕಾಟದ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಸುತ್ತಲ ಹತ್ತೂರುಗಳಲ್ಲಿ ಅಲೆದಲೆದು ಸಾಕಾದ ಈ ರೈತನಿಗೆ ತನ್ನೂರಿನಲ್ಲಿಯೇ ಯಾರಾದರೂ ಎಮ್ಮೆಯನ್ನು ಕಟ್ಟಿ ಹಾಕಿದ್ದಿರಬಹುದೆಂಬ ಅನುಮಾನ ಕಾಡಲಾರಂಭಿಸಿತ್ತು. ಹಾಗೆ ಹಟ್ಟಿಗೇ ಭೇಟಿ ನೀಡಿ ಹುಡುಕಾಡಿದಾಗ ಗ್ರಾಮದಂಚಿನ ಮತ್ತೋರ್ವ ರೈತನ ಮನೆಯಲ್ಲಿ ಎಮ್ಮೆ ಪತ್ತೆಯಾಗಿತ್ತು. ಆದರೆ ಅದು ಕದ್ದು ತಂದ ಎಮ್ಮೆ ಅನ್ನೋದನ್ನು ಒಪ್ಪಿಕೊಳ್ಳಲು ಆ ರೈತ ಸುತಾರಾಂ ತಯಾರಿರಲಿಲ್ಲ.
ಆದರೆ, ಹಲವಾರು ವರ್ಷಗಳಿಂದ ಲಾಲನೆ ಪಾಲನೆ ಮಾಡಿದ್ದ ಆ ರೈತನಿಗೆ ಅದು ತನ್ನದೇ ಎಮ್ಮೆ ಎಂಬುದು ಪಕ್ಕಾ ಆಗಿತ್ತು. ಊರ ಮಂದಿಯನ್ನು ಸೇರಿಸಿ ಸಂಧಾನ ನಡೆಸಲು ಪ್ರಯತ್ನಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ನಂತರ ಬೇರೆ ದಾರಿ ಕಾಣದ ಆ ಋಯಥ ಸಂಳೀ ಏಮSಳ್ಲಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಅಲ್ಲಿಗೆ ಹಾಜರಾಗಿ ಹೇಳಿಕೆ ಕೊಡುವಂತೆ ಎದುರಾಳಿ ರೈತನಿಗೂ ಬುಲಾವು ಕಳಿಸಲಾಗಿತ್ತು. ಹಾಗೆ ಹಾಜ೫ರಾದ ರೈತ ಅದು ಕದ್ದು ತಂದ ಎಮ್ಮೆಯಲ್ಲ, ತನ್ನಲ್ಲಿಯೇ ಹುಟ್ಟಿ ಬೆಳೆದ ಎಮ್ಮೆ. ಅದರ ತಾಯಿಯೂ ತನ್ನ ಕೊಟ್ಟಿಗೆಯಲ್ಲಿರೋದಾಗಿ ಹೇಳಿದ್ದ. ಇದಾಗುತ್ತಲೇ ಈ ಪ್ರಕರಣ ಮತ್ತಷ್ಟು ಜಟಿಲವಾಗಿತ್ತು. ಈ ರೈತ ಏನೇ ಅಂದರೂ ಅದು ತನ್ನದೇ ಎಮ್ಮೆ ಅಂತ ಪಟ್ಟು ಹಿಡಿದು ಕೂತಿದ್ದ. ಬೇರೆ ದಾರಿ ಕಾಣದ ಪೊಲೀಸರು ಎಮ್ಮೆಯ ಡಿಎನ್ಎ ಪರಿಕ್ಷೆ ಮಾಡಿಸಿ ಈ ಪ್ರಕರಣವನ್ನು ಬೇಧಿಸಲು ಮುಂದಾಗಿದ್ದಾರೆ.