ಈ ಸಾವೆಂಬುದು ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಬಂದೆರಗುತ್ತದೆಂದು ಹೇಳಲು ಬರುವುದಿಲ್ಲ. ಕೆವಲೊಮ್ಮೆ ಕೆಲವೇ ಕೆಲ ಮಂದಿಗೆ ಮಾತ್ರ ತಾವು ಧ್ಯಾನದಂತೆ ಮಾಡುವ ಕಾಯಕದಲ್ಲಿಯೇ ಕಣ್ಮುಚ್ಚುವಂಥಾ ಅವಕಾಶ ಸಿಕ್ಕಿದೆ. ಕೇರಳದ ತುಂಬೆಲ್ಲ ಆರ್ಕೇಸ್ಟ್ರಾಗಳಲ್ಲಿ ಹಾಡುತ್ತಾ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದ್ದ ಪ್ರಖ್ಯಾತ ಗಾಯಕ ಎಡವಾ ಬಶೀರ್ ಎಂಬವರಿಗೂ ಅಂಥಾದ್ದೇ ಸಾವು ಬಂದಿದೆ.
ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಮೊನ್ನೆ ದಿನ ಆರ್ಕೇಸ್ಟ್ರದ ಗೋಲ್ಡನ್ ಜ್ಯುಬಿಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬಶೀರ್ ಖ್ಯಾತ ಗಾಯಕ ಜೇಸುದಾಸ್ ಹಾಡಿದ್ದ ಹಿಂದಿ ಹಾಡನ್ನು ತನ್ಮಯರಾಗಿ ಹಾಡುತ್ತಿದ್ದರು. ಈ ವೇಳೆಯಲ್ಲಿ ನೋಡ ನೋಡುತ್ತಲೇ ಅವರು ನಿತ್ರಾಣರಾಗಿದ್ದಾರೆ. ಹಾಡನ್ನು ಹಾಡುತ್ತಲೇ ಹತ್ತಿರದಲ್ಲಿ ಕುಳಿತುಕೊಳ್ಳಲು ಯತ್ನಿಸಿದ್ದಾರೆ. ಆದರೆ ಕುಸಿದು ಬಿದ್ದಿದ್ದಾರೆ. ಅವರು ಜೀವನದ ಭಾಗವೆಂದುಕೊಂಡಿದ್ದ ಮೌತ್ ಪೀಸ್ ಕೂಡಾ ಕೈಜಾರಿ ಕೆಳ ಬಿದ್ದಿದೆ.
ಇಷ್ಟಾಗುತ್ತಲೇ ನೆರೆದಿದ್ದ ಪ್ರೇಕ್ಷಕರಿಗೆ, ಆಯೋಜಕರಿಗೆ ಅನಾಹುತದ ಅರಿವಾಗಿದೆ. ಆನರೆಲ್ಲ ಕೂಡಲೆ ನುಗ್ಗಿ ಬಂದು ಬಶೀರ್ ಅವರಿಗೆ ಪ್ರಥಮ ಚಿಕಿತ್ಸೆ ಕೊಟ್ಟು ನಂತರ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಹೀಗೆ ಸಾವು ಕಂಡಿರುವ ಬಶೀರ್ ಆರ್ಕೇಸ್ಟ್ರಾಗಳ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದರು. ವಯಸ್ಸು ಹತ್ತತ್ತಿರ ಎಪ್ಪತ್ತಾಗುತ್ತಾ ಬಂದರೂ ಸಂಗೀತ ಸೇವೆಯಲ್ಲಿ ನಿರತರಾಗಿದ್ದರು. ಸಂಗೀತವನ್ನು ಶಾಸ್ತ್ರೀಯವಾಗಿಯೇ ಕಲಿತಿದ್ದ ಅವರು ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದರು.