ಬಹುನಿರೀಕ್ಷಿತ ಬನಾರಸ್ ಚಿತ್ರ ಬಿಡುಗಡೆಯಾಗಲು ತಿಂಗಳಷ್ಟೇ ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಒಂದಿಡೀ ಚಿತ್ರತಂಡ ಪ್ರಚಾರ ವೈಖರಿಯನ್ನು ತೀವ್ರವಾಗಿಸಿದೆ. ಅದರಲ್ಲಿಯೂ ವಿಶೇಷವಾಗಿ, ನಾಯಕ ಝೈದ್ ಖಾನ್ ಅಂತೂ ಪಕ್ಕಾ ಆಕ್ಟೀವ್ ಆಗಿ ಸಿನಿಮಾವನ್ನು ಜನಮಾನಸಕ್ಕೆ ಹತ್ತಿರಾಗಿಸಲು ಏನೇನು ಬೇಕೋ ಅದೆಲ್ಲವನ್ನೂ ಬಲು ಆಸ್ಥೆಯಿಂದಲೇ ಮಾಡುತ್ತಿದ್ದಾರೆ. ಇದೊಂದು ಪ್ಯಾನಿಂಡಿಯಾ ಸಿನಿಮಾ. ಆದರೆ ಝೈದ್ ಖಾನ್ ಆರಂಭದಿಂದಲೂ ಪ್ರಧಾನವಾಗಿ ಗಮನ ಹರಿಸಿದ್ದು ಕರುನಾಡಲ್ಲಿ ಬನಾರಸ್ ಅನ್ನು ನೆಲೆಗಾಣಿಸುವ ನಿಟ್ಟಿನಲ್ಲಿ ಮಾತ್ರ. ಹಾಗೆ ಸಾಂಗ್ ರಿಲೀಸ್, ಟ್ರೈಲರ್ ಲಾಂಚ್ ಅಂತೆಲ್ಲ ಖುದ್ದಾಗಿ ತಾವೇ ಎಲ್ಲದರ ದೇಖಾರೇಖಿ ನೋಡಿಕೊಂಡಿದ್ದ ಝೈದ್, ಇದೀಗ ಉಳಿದ ಆರು ಭಾಷೆಗಳಲ್ಲಿ ಬನಾರಸ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಭಾಗವಾಗಿಯೇ ನಾಯಕಿ ಸೋನಲ್ ಮೊಂತೇರೋ ಜೊತೆಗೂಡಿ ಬಾಂಬೆಯಲ್ಲಿ ಬೀಡುಬಿಟ್ಟಿದ್ದಾರೆ!
ಹೀಗೆ ಬಾಂಬೆಗೆ ತೆರಳಿರುವ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಬಿಡುವಿರದಂತೆ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಕರ್ನಾಟಕದ ತುಂಬೆಲ್ಲ ಬನಾರಸ್ ಬಗೆಗಿನ ಕುತೂಹಲ ವ್ಯಾಪಿಸಿಕೊಂಡಿದೆಯಲ್ಲಾ? ಅದು ಅಷ್ಟೇ ವೇಗವಾಗಿ ಪರಭಾಷೆಗಳಿಗೂ ಹಬ್ಬಿಕೊಂಡಿದೆ. ರಾಷ್ಟ್ರ ಮಟ್ಟದಲ್ಲಿ ಬನಾರಸ್ನ ಪ್ರಭೆ ಹಬ್ಬಿಕೊಂಡಿದೆ ಎಂದರೂ ಅತಿಶಯವೇನಲ್ಲ. ಸದ್ಯ ಜೈದ್ ಖಾನ್ ಮತ್ತು ಸೋನಲ್ರ ಸಂದರ್ಶನ ಮಾಡಲು ಮಾಧ್ಯಮದ ಮಂದಿ ತರಾತುರಿಯಲ್ಲಿರೋದೇ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ಗೊಂದು ತಾಜಾ ಉದಾಹರಣೆ. ಇಂಥಾ ಸಂದರ್ಶನಗಳಲ್ಲಿ ಬನಾರಸ್ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಪಡಿಮೂಡಿಕೊಂಡಿರುವ ಭರವಸೆಯೆಲ್ಲವೂ ಧ್ವನಿಸುತ್ತಿವೆ; ಪ್ರತಿಫಲಿಸುತ್ತಿವೆ.
ಸದ್ಯ ಇಂತಾ ಸಕಾರಾತ್ಮಕ ವಿದ್ಯಮಾನ ಝೈದ್ ಖಾನ್ರೊಳಗೆ ಹೊಸಾ ಚೈತನ್ಯ ತುಂಬಿದಂತಿದೆ. ಬಾಂಬೆಯ ನಂತರದಲ್ಲಿ ಇನ್ನುಳಿದ ಒಂದಷ್ಟು ಭಾಷೆಗಳಲ್ಲಿಯೂ ವೇಗವಾಗಿ ಮಾಧಯಮ ಮಂದಿಯನ್ನು ಮುಖಾಮುಖಿಯಾಗಲು ಝೈದ್ ಉತ್ಸುಕರಾಗಿದ್ದಾರೆ. ಸೋನಲ್ ಕೂಡಾ ಅಂಥಾದ್ದೇ ಲವಲವಿಕೆಯಿಂದ ಸಾಥ್ ಕೊಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದಿರೋದರಿಂದ, ಸಂದರ್ಶನವನ್ನೆಲ್ಲ ಬೇಗನೆ ಮುಗಿಸಿಕೊಂಡು ಮತ್ತೆ ಕರ್ನಾಟಕಕ್ಕೆ ಮರಳುವ ಇಂಗಿತ ಝೈದ್ರೊಳಗಿದೆ. ಏನನ್ನೇ ಮಾಡಿದರೂ ಪಕ್ಕಾ ತಯಾರಿಯೊಂದಿಗೆ, ಯೋಜನೆಗಳ ಪ್ರಕಾರವೇ ನಡೆಸೋದು ಝೈದ್ ಸ್ಪೆಷಾಲಿಟಿ. ಸಂದರ್ಶನಗಳ ವಿಚಾರದಲ್ಲಿಯೂ ಅಷ್ಟೇ ಅಚ್ಚುಕಟ್ಟಾಗಿ ಪ್ಲಾನು ಮಾಡಿಕೊಂಡಿರುವ ಅವರು, ಹೊಸಾ ಬಗೆಯಲ್ಲಿ ಬನಾರಸ್ ಅನ್ನು ಮತ್ತಷ್ಟು ಜನರಿಗೆ ತಲುಪಿಸುವ ಆಲೋಚನೆಯಲ್ಲಿದ್ದಾರೆ.
ವಾರದ ಹಿಂದಷ್ಟೇ ಬನಾರಸ್ ಟ್ರೈಲರ್ ಲಾಂಚ್ ಆಗಿತ್ತು. ಅದರಲ್ಲಿ ಸಿಕ್ಕಿದ್ದ ಕಥೆಯ ಹೊಳಹು ಮತ್ತು ಅದಕ್ಕಾಗಿ ಝೈದ್ ಮಾಡಿಕೊಂಡಿರಬಹುದಾದ ತಯಾರಿಗಳ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರ ಫಲವಾಗಿಯೇ ಸದರಿ ಟ್ರೈಲರ್ ಮಿಲಿಯನ್ನುಗಟ್ಟಲೆ ವೀಕ್ಷಣೆಯೊಂದಿಗೆ ಮುಂದುವರೆಯುತ್ತಿದೆ. ಅದ್ಯದ ಮಟ್ಟಿಗೆ ಅದೊಂದು ಟ್ರೆಂಡಿಂಗ್ನಲ್ಲಿರೋ ಟ್ರೈಲರ್. ಇಂಥಾ ಅಮೋಘ ಪ್ರತಿಕ್ರಿಯೆಗಳು ಕನ್ನಡಕ್ಕೆ ಮಾತ್ರವೇ ಸೀಮಿತವಾಗಿಲ್ಲ; ಅದು ಕರುನಾಡಿನ ಗಡಿದಾಟಿ ಉಳಿದೊಂದಷ್ಟು ಭಾಷೆಗಳಿಗೂ ಪಸರಿಸಿಕೊಂಡಿದೆ. ಓರ್ವ ಹೊಸಾ ಹೀರೋ ಲಾಂಚ್ ಆಗುತ್ತಿರುವ ಬನಾರಸ್, ಪರಭಾಷಾ ಚಿತ್ರಪ್ರೇಮಿಗಳ ಮನಗೆಲ್ಲುವಲ್ಲಿಯೂ ಯಶ ಕಂಡಿದೆ. ಅಷ್ಟರಮಟ್ಟಿಗೆ ನಿರ್ದೇಶಕ ಜಯತೀರ್ಥ ಅವರ ಶ್ರಮವೂ ಸಾರ್ಥಕ್ಯ ಕಂಡಿದೆ. ಅಂದಹಾಗೆ, ಈ ಚಿತ್ರ ಇದೇ ನವೆಂಬರ್ ನಾಲಕ್ಕರಂದು ಬಿಡುಗಡೆಗೊಳ್ಳಲಿದೆ.