ಝೈದ್ ಖಾನ್ ನಾಯಕನಾಗಿ ನೆಲೆಗೊಳ್ಳೋ ಲಕ್ಷಣ!
ಒಂದು ಸಿನಿಮಾ ಹೇಗೆ ಹಂತ ಹಂತವಾಗಿ ಪ್ರೇಕ್ಷಕರ ಮನಸಿಗೆ ಹತ್ತಿರಾಗಬಹುದು, ಹೇಗೆಲ್ಲ ಜನಮಾನಸವನ್ನು ಇಡಿಯಾಗಿ ಆವರಿಸಿಕೊಳ್ಳಬಹುದೆಂಬುದಕ್ಕೆ ಇತ್ತೀಚಿನ ತಾಜಾ ನಿದರ್ಶನವಾಗಬಲ್ಲ ಚಿತ್ರ ಬನಾರಸ್. ಅಷ್ಟಕ್ಕೂ ಒಡಲೊಳಗೆ ಗಟ್ಟಿಯಾದುದ್ದೇನನ್ನೋ ಬಚ್ಚಿಟ್ಟುಕೊಂಡ ಚಿತ್ರವೊಂದು ಮಾತ್ರವೇ ಹೀಗೆ ಸದ್ದು ಮಾಡಲು ಸಾಧ್ಯ. ಅಂಥಾದ್ದೊಂದು ಅಚಲವಾದ ಭರವಸೆಯನ್ನು ಪ್ರೇಕ್ಷಕರ ಮನಸಲ್ಲಿ ಪ್ರತಿಷ್ಟಾಪಿಸಿದ್ದ ಬನಾರಸ್, ಈಗಾಗಲೇ ಹಾಡಿನ ಮೂಲಕ ಮಾಡಿರುವ ಮೋಡಿ ಸಣ್ಣದೇನಲ್ಲ. ಇದೆಲ್ಲದರಿಂದಾಗಿ ಬನಾರಸ್ನ ಮತ್ತಷ್ಟು ಅಚ್ಚರಿಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದರು; ಟ್ರೈಲರ್ಗಾಗಿ ಕಾದು ಕೂತಿದ್ದರು. ಕಡೆಗೂ ಆ ಕ್ಷಣವೀಗ ಕೂಡಿ ಬಂದಿದೆ. ಬನಾರಸ್ನ ಬಹುನಿರೀಕ್ಷಿತ ಟ್ರೈಲರ್ ಬಿಡುಗಡೆಗೊಂಡಿದೆ!
ಗಂಗೆಯ ಸೆರಗಿಂದ ಗರಿಬಿಚ್ಚಿಕೊಳ್ಳುವ ಈ ಟ್ರೈಲರ್ ಗಹನವಾದ ಕಥೆಯೊಂದರ ಸುಳಿವನ್ನು ನಿಖರವಾಗಿಯೇ ಬಿಟ್ಟು ಕೊಟ್ಟಿದೆ. ಅದ್ಭುತ ಪ್ರೇಮಕಥಾನಕದ ಜೊತೆ ಜೊತೆಗೇ, ಮೈನವಿರೇಳಿಸೋ ಅಂಶಗಳೊಂದಿಗೆ ಮೂಡಿ ಬಂದಿರುವ ಈ ಟ್ರೈಲರ್ ಒಂದೇ ಸಲಕ್ಕೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತಿದೆ. ಪ್ರೇಮವೆಂಬುದು ಎಷ್ಟು ಸಲ ದೃಷ್ಯಕ್ಕೆ ಒಗ್ಗಿಸಿದರೂ ಮಾಸಲಾಗದ ಮಾಯೆ. ಅದರಲ್ಲಿಯೂ ನವಿರುಪ್ರೇಮವನ್ನು ಸಿನಿಮಾ ಫ್ರೇಮಿನಲ್ಲಿ ವಿಭಿನ್ನವಾಗಿ ಹಿಡಿದಿಡುವಲ್ಲಿ ಜಯತೀರ್ಥ ನಿಸ್ಸೀಮರು. ಬನಾರಸ್ ವಿಚಾರದಲ್ಲಿಯೂ ಅವರ ನಿರ್ದೇಶನ ಮತ್ತೆ ಗೆಲ್ಲುವ ಸ್ಪಷ್ಟ ಕುರುಹುಗಳು ಕಾಣಿಸಿವೆ. ನವಿರಾದ ಭಾವವೊಂದನ್ನು ಎದೆಗೆ ನಾಟಿಸುತ್ತಲೇ, ಮೈ ನಡುಗುವ ಅಂಶಗಳೂ ಬನಾರಸ್ ಒಳಗಿದೆ ಎಂದೆ ಸಂದೇಶವನ್ನು ಸದರಿ ಟ್ರೈಲರ್ ಪರಿಣಾಮಕಾರಿಯಾಗಿಯೇ ದಾಟಿಸಿದೆ.
ಈ ಟ್ರೈಲರ್ ನೋಡಿದ ಪ್ರತಿಯೊಬ್ಬರಲ್ಲಿಯೂ ಬನಾರಸ್ನೆಡೆಗಿನ ಕೌತುಕ ಆಯಾಚಿತವಾಗಿ ಆವರಿಸಿಕೊಳ್ಳುತ್ತೆ. ಈ ಚಿತ್ರದಲ್ಲಿ ಝೈದ್ ಖಾನ್ ಎಂಥಾ ಪಾತ್ರ ಮಾಡಿದ್ದಾರೆ? ಸೋನಲ್ ಮೊಂತೇರೋ ಪಾತ್ರದ ಚಹರೆಗಳೇನು? ಒಟ್ಟಾರೆ ಕಥೆ ಯಾವ ಬಗೆಯದ್ದು? ಹೀಗೆ ನಾನಾ ಆಯಾಮಗಳಲ್ಲಿ ಪ್ರಶ್ನೆಗಳು ಚಿಗಿತುಕೊಂಡಿದ್ದವು. ಅದೆಲ್ಲದಕ್ಕೂ ಈ ಟ್ರೈಲರ್ನಲ್ಲಿ ಉತ್ತರಗಳಿದ್ದಾವೆ. ಹಾಗೆ ಸಿಕ್ಕ ಜವಾಬುಗಳೇ ಮತ್ತೊಂದಷ್ಟು ದಿಕ್ಕುಗಳಲ್ಲಿ ಚರ್ಚೆ ಹುಟ್ಟುಹಾಕುವಂತಿರೋದು ಈ ಟ್ರೈಲರ್ನ ನಿಜವಾದ ಹೆಚ್ಚುಗಾರಿಕೆ. ಅದರಲ್ಲಿಯೂ ವಿಶೇಷವಾಗಿ, ಝೈದ್ ಖಾನ್ ಈ ಸಿನಿಮಾ ಮೂಲಕವೇ ನಾಯಕನಾಗಿ ಎಂಟರಿ ಕೊಡುತ್ತಿದ್ದಾರೆ. ಆದ್ದರಿಂದ ಅವರ ಪಾತ್ರದ ಸುತ್ತಲೇ ಕುತೂಹಲವೆಂಬುದು ಗಿರಕಿ ಹೊಡೆಯುತ್ತಿತ್ತು. ಅವರು ಲವರ್ ಬಾಯ್ ಸೇರಿದಂತೆ, ನಾನಾ ಶೇಡುಗಳಿರುವ ಚೆಂದದ ಪಾತ್ರಕ್ಕೆ ಜೀವ ತುಂಬಿದ್ದಾರೆಂಬ ವಿಚಾರವನ್ನೂ ಈ ಟೃಲರ್ ಜಾಹೀರಾಗಿಸಿದೆ.
ಬನಾರಸ್ ಪ್ಯಾನಿಂಡಿಯಾ ಚಿತ್ರ. ಆ ಗತ್ತು ಗೈರತ್ತು ಮತ್ತು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಂತೆ ಈ ಚಿತ್ರದ ಕಥೆಯಿದೆ ಎಂಬ ವಿಚಾರವೂ ಈ ಟ್ರೈಲರ್ ನೋಡಿದವರಿಗೆಲ್ಲ ಮನದಟ್ಟಾಗುತ್ತದೆ. ಝೈದ್ ಖಾನ್ ನಿಸ್ದಸಂಶಯವಾಗಿಯೂ ಸಮರ್ಥ ನಾಯಕನಾಗಿ ನೆಲೆ ಕಂಡುಕೊಳ್ಳುತ್ತಾರೆಂಬ ನಂಬಿಕೆ ಕೂಡಾ ತಾನೇ ತಾನಾಗಿ ಮೂಡಿಕೊಳ್ಳುತ್ತೆ. ಯಾಕೆಂದರೆ, ಅವರಲ್ಲೊಬ್ಬ ಪಳಗಿದ ಕಲಾವಿದ ಪ್ರತಿಯೊಬ್ಬರಿಗೂ ಗೋಚರಿಸಿದ್ದಾನೆ. ಒಟ್ಟಾರೆಯಾಗಿ ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ ಬನಾರಸ್, ಸರ್ವ ರೀತಿಯಲ್ಲಿಯೂ ಶ್ರೀಮಂತವಾಗಿ ಮೂಡಿ ಬಂದಿದೆ. ಅದು ಕನ್ನಡ ಮಾತ್ರವಲ್ಲದೇ, ಬೇರೆ ಭಾಷೆಗಳಲ್ಲಿಯೂ ಗೆಲುವಿನ ಭಾಷ್ಯ ಬರೆಯುತ್ತದೆಂಬ ನಂಬಿಕೆಯನ್ನು ಈ ಟ್ರೈಲರ್ ಗಟ್ಟಿಯಾಗಿಸಿದೆ!