ದಿನದಿಂದ ದಿನಕ್ಕೆ ಬನಾರಸ್ ಕ್ರೇಜ್ ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿದೆ. ಝೈದ್ ಖಾನ್ ಈ ಸಿನಿಮಾ ಮೂಲಕ ಮೊದಲ ಬಾರಿ ನಾಯಕನಾಗಿ ಲಾಂಚ್ ಆಗುತ್ತಿದ್ದಾರೆಂಬುದನ್ನೂ ಮರೆಸುವಂತೆ ಬನಾರಸ್ ಪ್ರಭೆ ಮಿರುಗುತ್ತಿದೆ. ಇದೀಗ ಎತ್ತ ಕಣ್ಣು ಹಾಯಿಸಿದರೂ, ಅಷ್ಟ ದಿಕ್ಕುಗಳಲ್ಲಿಯೂ ಬನಾರಸ್ ಸೂಪರ್ ಹಿಟ್ಟಾಗೋದು ಗ್ಯಾರೆಂಟಿ ಎಂಬಂಥಾ ವಾತಾವರಣ ಢಾಳಾಗಿ ಪಡಿಮೂಡಿಕೊಂಡಿದೆ. ಇಂಥಾ ಘಳಿಗೆಯಲ್ಲಿಯೇ ಚಿತ್ರತಂಡದ ಕಡೆಯಿಂದ ಖುಷಿಯ ಸಂಗತಿಯೊಂದು ಜಾಹೀರಾಗಿದೆ. ಕೇರಳದ ಪ್ರಖ್ಯಾತ ವಿತರಣಾ ಸಂಸ್ಥೆಯಾದ ಮುಲಕುಪ್ಪಡಮ್, ಬನಾರಸ್ನ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಈಗಾಗಲೇ ಹಲವಾರು ಹಿಟ್ ಸಿನಿಮಾಗಳನ್ನು ವಿತರಿಸಿರುವ ಹೆಗ್ಗಳಿಕೆ ಹೊಂದಿರುವ ಈ ಸಂಸ್ಥೆಯ ಮೂಲಕ ಕೇರಳದಾದ್ಯಂತ ನವೆಂಬರ್ ನಾಲಕ್ಕರಂದು ಬನಾರಸ್ ಬಿಡುಗಡೆಗೊಳ್ಳಲಿದೆ.
ತೋಮಿಚನ್ ಮುಲಕುಪ್ಪಡಮ್ ಅಂತಲೇ ದೇಶಾದ್ಯಂತ ಉದ್ಯಮಿಯಾಗಿ ಹೆಸರುವಾಸಿಯಾಗಿರುವವರು ತೋಮಿಚನ್ ಮಲಕುಪ್ಪಡಮ್. ಅವರು ಕೇರಳದಲ್ಲಿ ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದಾರೆ. ಮುಲಕುಪ್ಪಡಮ್ ಸಂಸ್ಥೆಯನ್ನು ತೆರೆದಿದ್ದ ತೋಮಿಚನ್, ಮಮ್ಮುಟ್ಟಿ ಮುಂತಾದವರು ನಟಿಸಿರುವ ಚಿತ್ರಗಳೂ ಸೇರಿದಂತೆ ಒಂದಷ್ಟು ಹಿಟ್ ಸಿನಿಮಾಗಳ ವಿತರಕರಾಗಿಯೂ ಗೆದ್ದಿದ್ದಾರೆ. ವಿಶೇಷವೆಂದರೆ, ತೋಮಿಚನ್ ಪ್ರಧಾನವಾಗಿ ಸಿನಿಮ ಆವೊಂದರ ಕಂಟೆಂಟು ಮತ್ತು ಕ್ಲಾಲಿಟಿಯ ಮಾನದಂಡವನ್ನು ಎಂದಿಗೂ ಸಡಿಲಗೊಳಿಸೋದಿಲ್ಲ. ಈ ಕಾರಣದಿಂದಲೇ ಅವರೊಂದು ಸಿನಿಮಾ ಒಡಂಬಡಿಕೆ ಮಾಡಿಕೊಂಡರೆ, ಅದು ವಿಶೇಷವಾಗಿರುತ್ತದೆಂಬ ನಂಬಿಕೆ ಅಲ್ಲಿನ ಪ್ರೇಕ್ಷಕರಲ್ಲಿದೆ.
ಇಂಥಾ ಸಂಸ್ಥೆ ಬಹುವಾಗಿ ಮೆಚ್ಚಿಕೊಂಡು ವಿತರಣಾ ಹಕ್ಕು ಖರೀದಿಸಿದೆ ಎಂಬುದೇ ಬನಾರಸ್ ಮೂಡಿ ಬಂದಿರುವ ರೀತಿಗೆ ಮತ್ತು ಅದರ ಗುಣಮಟ್ಟಕ್ಕೆ ಸಾಕ್ಷಿ. ಈ ಕಾರಣದಿಂದಲೇ ಬನಾರಸ್ ಬಗ್ಗೆ ಕೇಳದಾದ್ಯಂತ ವ್ಯಾಪಕ ಕುತೂಹಲ ಮೂಡಿಕೊಳ್ಳಲಾರಂಭಿಸಿದೆ. ಇದೀಗ ಮಲಕುಪ್ಪಡಂ ಸಂಸ್ಥೆ ಖರೀದಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗುತ್ತದೆಂಬ ನಂಬಿಕೆಯೂ ಅಲ್ಲಿ ಮೂಡಿಕೊಂಡಿದೆ. ಇದೆಲ್ಲವೂ ಬನಾರಸ್ ಚಿತ್ರತಂಡದ ಪಾಲಿಗೆ ನಿಜಕ್ಕೂ ಖುಷಿಯ ಸಂಗತಿ. ಸದ್ಯ ಮುಂಬೈನಲ್ಲಿ ಬೀಡುಬಿಟ್ಟು, ಸಂದರ್ಶನಗಳಲ್ಲಿ ಭಾಗಿಯಾಗಿರುವ ಝೈದ್ ಖಾನ್ ಕೂಡಾ ಈ ವಿದ್ಯಮಾನದಿಂದ ಖುಷಿಗೊಂಡಿದ್ದಾರೆ. ನಿರ್ಮಾಪಕರಾದ ತಿಲಕ್ ರಾಜ್ ಬಲ್ಲಾಳ್ ಸೇರಿದಂತೆ ಚಿತ್ರತಂಡವೆಲ್ಲ ಅದೇ ಹುರುಪಿನೊಂದಿಗೆ ಬನಾರಸ್ ಅನ್ನು ಬಿಡುಗಡೆಗೆ ಸಜ್ಜುಗೊಳಿಸುವತ್ತ ಗಮನ ಕೇಂದ್ರೀಕರಿಸಿದೆ.
ಇದೀಗ ಬೇರೆ ಭಾಷೆಗಳಲ್ಲಿಯೂ ಬನಾರಸ್ ವಿತರಣಾ ಹಕ್ಕು ಖರೀದಿಸಲು ಅನೇಕ ಸಂಸ್ಥೆಗಳು ಉತ್ಸುಕತೆ ತೋರಿಸುತ್ತಿವೆ. ಯಾವಾಗ ಮಾಯಗಂಗೆ ಎಂಬ ಹಾಡು ನಾನಾ ಭಾಷೆಗಳಲ್ಲಿ ಬಿಡುಗಡೆಯಾಯ್ತೋ, ಆವಾಗಿನಿಂದಲೇ ಎಲ್ಲಡೆಗಳಲ್ಲಿ ಬನಾರಸ್ ಕ್ರೇಜ್ ತೀವ್ರಗೊಂಡಿತ್ತು. ವಾರದ ಹಿಂದೆ ರಿಲೀಸ್ ಆಗಿದ್ದ ಟ್ರೈಲರ್ ಅಂತೂ ಆ ಕ್ರೇಜ್ ಅನ್ನು ಮತ್ತಷ್ಟು ತೀವ್ರವಾಗಿಸಿತ್ತು. ಹೀಗೆ ಬನಾರಸ್ ಹವಾ ಈಗ ದೇಶಾದ್ಯಂತ ಹಬ್ಬಿಕೊಂಡಿದೆ. ಬಿಡುಗಡೆಯ ಕ್ಷಣಗಳು ಹತ್ತಿರಾಗುತ್ತಿರುವ ಈ ಘಳಿಗೆಯಲ್ಲಿ ಇದೊಂದು ರೋಮಾಂಚಕ ಬೆಳವಣಿಗೆ. ಅದರಲ್ಲಿಯೂ ಝೈದ್ ಖಾನ್ ನವನಾಯಕನೆಂಬ ವಿಚಾರವೇ ಮರೆಯಾಗುವಂತೆ ಅವರ ಬಗ್ಗೆ ಮೆಚ್ಚುಗೆ ಪಸರಿಸಿಕೊಳ್ಳುತ್ತಿದೆ. ಈಗಿರುವ ವಾತಾವರಣವನ್ನು ಗಮನಿಸಿದರೆ, ಬನಾರಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿ, ಝೈದ್ ಖಾನ್ ಮೊದಲ ಚಿತ್ರದಲ್ಲಿಯೇ ಮಹಾ ಗೆಲುವಿನ ರೂವಾರಿಯಾಗೋ ಕುರುಹುಗಳು ನಿಖರವಾಗಿ ಗೋಚರಿಸುತ್ತಿವೆ.