ಬನಾರಸ್ ಚಿತ್ರದ ಮೂಲಕ ನಾಯಕನಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಎಂಟ್ರಿ ಕೊಡುತ್ತಿರುವವರು ಝೈದ್ ಖಾನ್. ಈ ಚಿತ್ರ ಬಿಡುಗಡೆಗೆ ಇನ್ನು ಕೆಲವೇ ಕೆಲ ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ. ಈ ಹೊತ್ತಿಗೆಲ್ಲಾ ಝೈದ್ ಯಾವುದೇ ತಟವಟಗಳಿಲ್ಲದ ತಮ್ಮ ನಡವಳಿಕೆಯ ಮೂಲಕವೇ ಎಲ್ಲರ ಇಷ್ಟದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅದಕ್ಕೆ ಕಾರಣವಾಗಿರೋದು ಎಲ್ಲವನ್ನೂ ಜಾತಿ ಧರ್ಮಗಳ ಭೂಮಿಕೆಯಲ್ಲಿ ನೋಡುವಂಥಾ ಇಂದಿನ ಕಾಲಘಟ್ಟದಲ್ಲಿ ಝೈದ್ ಖಾನ್ ಮುಂದುವರೆಯುತ್ತಿರುವ ರೀತಿಯಷ್ಟೇ. ಇದೀಗ ಬೇರೆ ರಾಜ್ಯಗಳಲ್ಲಿ ಬನಾರಸ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಝೈದ್, ಆ ಹಾದಿಯಲ್ಲೆದುರಾಗೋ ದೇವಸ್ಥಾನಗಳಿಗೆಲ್ಲ ಭೇಟಿ ಕೊಟ್ಟು ಭಕ್ತಿ ಭಾವದಿಂದ ನಡೆದುಕೊಳ್ಳುತ್ತಿದ್ದಾರೆ. ಬಹುಶಃ ಅಂಥಾದ್ದೊಂದು ಸಹಜವಾದ ನಡವಳಿಕೆಯ ಫಲವಾಗಿಯೇ ಏನೋ… ಝೈದ್ಗೆ ಕುಂಭ ಮೇಳದ ಸಂದರ್ಭದಲ್ಲಿ ನಡೆಯುವ ಗಂಗಾರತಿಯಲ್ಲಿ ಭಾಗಿಯಾಗೋ ಸದವಕಾಶ ಕೂಡಿ ಬಂದಿದೆ.
ಈಗೊಂದಷ್ಟು ದಿನಗತಳಿಂದ ಝೈದ್ ಖಾನ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿಡುವಿರದೆ ಸುತ್ತುತ್ತಿದ್ದಾರೆ. ಬನಾರಸ್ ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವ ಈ ಹೊತ್ತಿನಲ್ಲಿ, ಎಲ್ಲವೂ ಸಾರ್ಥಕ್ಯ ಕಾಣುವಂತೆ ಮಾಡಲು ಶ್ರಮಿಸುತ್ತಿದ್ದಾರೆ. ಗಮನೀಯ ಅಂಶವೆಂದರೆ, ಈ ಹಾದಿಯಲ್ಲಿ ಸಿಗುವ ಧಾರ್ಮಿಕ ಕ್ಷೇತ್ರಗಳಿಗೆಲ್ಲ ಝೈದ್ ಜಾತಿ ಮತಗಳ ಹಂಗಿಲ್ಲದೆ ಭೇಟಿ ನೀಡಿ ಭಕ್ತಿಯಿಂದ ನಮಿಸುತ್ತಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಜೋಡಿಯೀಗ ಪ್ರಚಾರ ಕಾರ್ಯದ ನಿಮಿತ್ತವಾಗಿಯೇ ವಾರಾಣಸಿಗ ಅಂಗಳ ತಲುಪಿಕೊಂಡಿದೆ. ಇಲ್ಲಿಯೇ ಒಂದಷ್ಟು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಗಂಗಾರತಿಯಲ್ಲಿ ಪಾಲ್ಗೊಂಡರು. ವಿಧಿವಿಧಾನಗಳಿಗೆ ತಕ್ಕುದಾಗಿ ಅದರಲ್ಲಿ ಪಾಲ್ಗೊಂಡು ಭಕ್ತಿ ಭಾವದಲ್ಲಿ ಮಿಂದೆದ್ದಿದ್ದಾರೆ. ಗಂಗಾರತಿಗೆ ಧಾರ್ಮಿಕವಾಗಿ ಮಹತ್ವವಿದೆ. ಅದು ಕೋಟ್ಯಂತರ ಜನರ ಭಕ್ತಿ ಭಾವಗಳ ಆಚರಣೆ. ಅದರಲ್ಲಿ ಭಾಗಿಯಾಗುವ ಅವಕಾಶ ಬನಾರಸ್ ಹೀರೋ ಝೈದ್ ಖಾನ್ ಮತ್ತು ನಾಯಕಿ ಸೋನಲ್ ಮೊಂತೇರೋ ಅವರುಗಳಿಗೆ ಅದಾಗಿಯೇ ಒಲಿದು ಬಂದಿದೆ. ಎಲ್ಲ ನಂಬಿಕೆಗಳನ್ನೂ ಗೌರವಿಸುವ, ಅಷ್ಟೇ ಆಪ್ತವಾಗಿ ಆಚರಿಸುವ ಮನೋಭಾವದ ಝೈದ್ ಖಾನ್ ತಲ್ಲೀನರಾಗಿ ಗಂಗಾರತಿಯಲ್ಲಿ ಪಾಲ್ಗೊಂಡಿದ್ದಾರೆ. ಅಂಥಾದ್ದೊಂದು ಧನ್ಯತಾ ಭಾವದೊಂದಿಗೆ ಮತ್ತೆ ಬನಾರಸ್ ಪ್ರಚಾರ ಕಾರ್ಯಕ್ಕೆ ಮರಳಿದ್ದಾರೆ.
ಇದೇ ಹೊತ್ತಿನಲ್ಲಿ ಮತ್ತೊಂದು ಅಚ್ಚರಿದಾಯಕ ಅವಕಾಶ ಕೂಡಾ ಬನಾರಸ್ ಜೋಡಿಗೆ ಕೂಡಿ ಬಂದಿದೆ. ವಾರಾಣಸಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್ನಲ್ಲಿಯೂ ಬನಾರಸ್ ಜೋಡಿ ಭಾಗಿಯಾಗಿದ್ದೊಂದು ಅವಿಸ್ಮರಣೀಯ ಕ್ಷಣ. ಆ ಕಾರ್ಯಕ್ರಮವನ್ನು ಬಾಲಿವುಡ್ನ ಹಿರಿಯ ನಟ ಸಂಜಯ್ ಮಿಶ್ರಾ ಉದ್ಘಾಟಿಸಿದ್ದಾರೆ. ಬಳಿಕ ಬಲು ಪ್ರೀತಿಯಿಂದ ಅವರೇ ಖುದ್ದಾಗಿ ಬನಾರಸ್ ಜೋಡಿಯನ್ನು ಸನ್ಮಾನಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ ಒಳ್ಳೆ ಮಾತುಗಳನ್ನಾಡಿ, ಗೆಲುವಾಗಲೆಂದು ಹಾರೈಸಿದ್ದಾರೆ. ಸಂಜಯ್ ಮಿಶ್ರಾ ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾವಂತ ಹಿರಿಯ ನಟ. ದೂರದರ್ಶನವೂ ಸೇರಿದಂತೆ ಅನೇಕ ಭೂಮಿಕೆಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಮಿಶ್ರಾ ಬನಾರಸ್ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ಅದು ನವನಾಯಕ ಝೈದ್ ಖಾನ್ ಅವರಿಗೆ ಹೊಸಾ ಹುರುಪು ತುಂಬಿದೆ.
ಈ ಸಿನಿಮಾ ಫೆಸ್ಟಿವಲ್ ವಾರಾಣಸಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಆ ವೇದಿಕೆಯಲ್ಲಿಯೇ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಅವರುಗಳಿಗೆ ಸನ್ಮಾನ ಸಿಗುವ ಮೂಲಕ ಬನಾರಸ್ ಚಿತ್ರಕ್ಕೆ ವ್ಯಾಪಕ ಪ್ರಚಾರ ಸಿಕ್ಕಂತಾಗಿದೆ. ಅಷ್ಟಕ್ಕೂ ವಾರಾಣಸಿಯ ವಾತಾವರಣವೇ ಒಂದಿಡೀ ಬನಾರಸ್ ಚಿತ್ರದ ಜೀವಾಳ. ಒಂದು ಅಮೋಘವಾದ ಪ್ರೇಮ ಕಥಾನಕ ಮತ್ತೊಂದಷ್ಟು ಬೆರಗುಗಳೊಂದಿಗೆ ಗಂಗೆಯ ತಟದಿಂದಲೇ ಗರಿಬಿಚ್ಚಿಕೊಳ್ಳುತ್ತದೆ. ಇದೀಗ ಅದೇ ನೆಲದಲ್ಲಿ, ಸಿನಿಮಾ ಹಬ್ಬದಲ್ಲಿ ಸನ್ಮಾನಿಸಿಕೊಳ್ಳುವ ಸದಾವಕಾಶ ಝೈದ್ ಪಾಲಿಗೆ ಕೂಡಿ ಬಂದಿದೆ. ಅದೇ ಹುರುಪಿನೊಂದಿಗೆ ಝೈದ್ ಮತ್ತಷ್ಟು ಆವೇಗದಿಂದ ಬನಾರಸ್ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹೋದಲ್ಲೆಲ್ಲ ಇಂಥಾದ್ದೇ ಪ್ರೀತ್ಯಾಧರಗಳು ಅವರನ್ನರಸಿ ಬರುತ್ತಿವೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ, ಭಾರೀ ಕ್ರೇಜ್ನ ಒಡ್ಡೋಲಗದಲ್ಲಿ, ಬನಾರಸ್ ಇದೇ ನವೆಂಬರ್ ನಾಲಕ್ಕರಂದು ಅದ್ದೂರಿಯಾಗಿ ತೆರೆಗಾಣುತ್ತಿದೆ.