ಝೈದ್ ಖಾನ್ ನಾಯಕನಾಗಿ ನಟಿಸಿರೋ ಪ್ಯಾನಿಂಡಿಯಾ ಚಿತ್ರ ಬನಾರಸ್. ಐದು ಭಾಷೆಗಳಲ್ಲಿ ತಯಾರಾಗಿರುವ ಈ ಸಿನಿಮಾ ಪ್ರಭೆಯೀಗ ದೇಶದ ಉದ್ದಗಲಕ್ಕೂ ಹಬ್ಬಿಕೊಂಡಿದೆ. ಎತ್ತ ಕಣ್ಣು ಹಾಯಿಸಿದರೂ ಬನಾರಸ್ ಬಗೆಗಿನ ಕ್ರೇಜ್, ಹಾಯೆನಿಸುವಂಥಾ ನಿರೀಕ್ಷೆಗಳೇ ಕಾಣಿಸುತ್ತಿವೆ. ಅಷ್ಟರಮಟ್ಟಿಗೆ ಬನಾರಸ್ ಪ್ರೇಕ್ಷಕರೆಲ್ಲರ ಆಸಕ್ತಿ ಕೇಂದ್ರದ ಮುನ್ನೆಲೆಗೆ ಬಂದು ನಿಂತಿದೆ. ಇನ್ನೇನು ಈ ಚಿತ್ರ ನವೆಂಬರ್ ನಾಲಕ್ಕರಂದು ತೆರೆಗಾಣಲಿದೆ. ಈ ಹೊತ್ತಿನಲ್ಲಿ ಅದ್ದೂರಿಯಾದ, ಅರ್ಥಪೂರ್ಣವಾದ ಪ್ರೀ ರಿಲೀಸ್ ಇವೆಂಟ್ ಒಂದನ್ನು ಚಿತ್ರತಂಡ ಆಯೋಜಿಸಿದೆ. ಇದೇ 22ನೇ ತಾರೀಕು ಶನಿವಾರದಂದು ಸಂಜೆ 7.30ಕ್ಕೆ ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್ನಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ವಿಶೇಷವೆಂದರೆ, ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಲಿದ್ದಾರೆ.
ಆರಂಭದಿಂದಲೂ ಬನಾರಸ್ ಹೀರೋ ಝೈದ್ ಖಾನ್ಗೆ ಸ್ಟಾರ್ ನಟರೊಬ್ಬರ ನೆರಳಿದೆ ಎಂಬರ್ಥದ ಸುದ್ದಿಗಳು ಹರಿದಾಡುತ್ತಿದ್ದವು. ಬನಾರಸ್ಗೆ ಆ ನಟನ ಬೆಂಬಲ ಇರಲಿದೆ ಅಂತೆಲ್ಲ ಗಾಂಧಿನಗರದಲ್ಲಿ ಮಾತುಕತೆಗಳು ನಡೆದಿದ್ದವು. ಇದೀಗ ಆ ಸ್ಟಾರ್ ನಟ ಯಾರೆಂಬುದು ಜಾಹೀರಾಗಿದೆ. ನಟನಾಗಬೇಕೆಂಬ ಆಸೆ ಮೂಡಿಕೊಂಡಾಕ್ಷಣವೇ ಅದಕ್ಕಾಗಿನ ತಯಾರಿ ಆರಂಭಿಸಿದ್ದ ಝೈದ್, ಒಂದಷ್ಟು ನಟರ ಸಾಂಗತ್ಯವನ್ನೂ ದಕ್ಕಿಸಿಕೊಂಡಿದ್ದರು. ಅದರಲ್ಲಿಯೂ ವಿಶೇಷವಾಗಿ ದರ್ಶನ್ ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡೇ ಮುಂದುವರೆಯುತ್ತಿದ್ದರು. ಬನಾರಸ್ ಚಿತ್ರದ ವಿಚಾರದಲ್ಲಿಯೂ ದರ್ಶನ್ ಮಾರ್ಗದರ್ಶನ ಇದ್ದೇ ಇದೆ.
ಝೈದ್ ಖಾನ್ ಮೇಲೆ ಅತೀವ ಪ್ರೀತಿ ಹೊಂದಿರೋ ದರ್ಶನ್, ಅದರ ಭಾಗವಾಗಿಯೇ ಬನಾರಸ್ ಪ್ರೀ ರಿಲೀಸ್ ಇವೆಂಟ್ನಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ. ಅವರ ಆಗಮನವೇ ಬನಾರಸ್ ಜಾತ್ರೆಗೆ ಮತ್ತಷ್ಟು ಮೆರುಗು ತಂದು ಕೊಡಲಿದೆ. ಆ ದಿನ ದರ್ಶನ್ ಮಾತ್ರವಲ್ಲದೇ, ವಿನೋದ್ ಪ್ರಭಾಕರ್, ಚಿಕ್ಕಣ್ಣ, ಅಭಿಷೇಕ್ ಅಂಬರೀಶ್ ಮುಂತಾದ ನಟರೂ ಪಾಲ್ಗೊಳ್ಳಲಿದ್ದಾರೆ. ಜಯತೀರ್ಥ ನಿರ್ದೇಶನದ ಬನಾರಸ್ ಈಗಾಗಲೇ ಕರ್ನಾಟಕದಾದ್ಯಂತ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇನ್ನೆನು ಬಿಡುಗಡೆಗೆ ಕೆಲವೇ ಕೆಲ ದಿನಗಳು ಮಾತ್ರ ಬಾಕಿ ಇರುವಾಗಲೇ ಚಿತ್ರತಂಡ ಈ ಇವೆಂಟ್ ಅನ್ನು ಆಯೋಜಿಸಿದೆ. ಅದು ಬನಾರಸ್ ಪ್ರಭೆ ಮತ್ತಷ್ಟು ಪ್ರಜ್ವಲಿಸುವಂತೆ ಮಾಡಲಿದೆ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ.