ಕನ್ನಡ ಚಿತ್ರರಂಗದ ಪಾಲಿಗೀಗ ಅಕ್ಷರಶಃ ಸಕಾರಾತ್ಮಕ ಪರ್ವವೊಂದು ಆರಂಭವಾಗಿದೆ. ಇದೀಗ ಚಿತ್ರರಂಗದತ್ತ ತಣ್ಣಗೊಮ್ಮೆ ಕಣ್ಣು ಹಾಯಿಸಿದರೆ ಹಾಯೆನಿಸುವಂಥಾ ವಾತಾವರಣವೇ ಮೇಳೈಸಿಕೊಂಡಿದೆ. ಬಿಡುಗಡೆಗೆ ಸಜ್ಜಾಗಿ ನಿಂತಿರುವ ಒಂದಷ್ಟು ಚಿತ್ರಗಳನ್ನು ಗಮನಿಸಿದರಂತೂ, ಒಂದರ ಹಿಂದೊಂದರಂತೆ ಹಿಟ್ ಆಗಬಲ್ಲ ಸಿನಿಮಾಗಳೇ ಸರತಿಯಲ್ಲಿ ನಿಂತಂತಿವೆ. ವಿಶೇಷವೆಂದರೆ, ಆ ಸಾಲಿನಲ್ಲಿ ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಕೂಡಾ ಸೇರಿಕೊಂಡಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರ ಈಗಾಗಲೇ ಟ್ರೈಲರ್ನೊಂದಿಗೆ ವ್ಯಾಪಕ ಪ್ರಚಾರ, ಅದಕ್ಕೆ ತಕ್ಕುದಾದ ನಿರೀಕ್ಷೆ ಮೂಡಿಸಿದೆ. ವಾರದ ಹಿಂದೆ ಬಿಡುಗಡೆಗೊಂಡಿದ್ದ ಬನಾರಸ್ ಟ್ರೈಲರ್ ಈಗ ಹತ್ತು ಮಿಲಿಯನ್ ವೀಕ್ಷಣೆಗಳಾಚೆಗೆ ದಾಪುಗಾಲಿಡಲಾರಂಭಿಸಿದೆ.
ಜಯತೀರ್ಥ ಚಿತ್ರವೆಂದ ಮೇಲೆ ಅದರತ್ತ ಕುತೂಹಲವೊಂದು ಹರಳುಗಟ್ಟಿಕೊಂಡು ಬಿಡುತ್ತೆ. ಯಾವಾಗ ಮಾಯಗಂಗೆ ಎಂಬ ಹಾಡು ಬಿಡುಗಡೆಗೊಂಡು ಇದೊಂದು ಪ್ರೇಮ ಕಥಾನಕ ಎಂಬ ವಿಚಾರ ಜಾಹೀರಾಯಿತೋ, ಆ ಕ್ಷಣದಿಂದಲೇ ನಿರೀಕ್ಷೆ ನೂರ್ಮಡಿಸಿತ್ತು. ಬನಾರಸ್ ಅನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರದಲ್ಲಿ ಪ್ರತಿಷ್ಟಾಪಿಸಿದ್ದರ ಹಿಂದೆ ಮಾಯಗಂಗೆಯ ಪಾಲು ಬಹಳಷ್ಟಿದೆ. ಆ ಹಾಡಿನ ಮೂಲಕವೇ ಸಮ್ಮೋಹಕ ದಾಖಲೆ ಬರೆದಿದ್ದ ಬನಾರಸ್, ಟ್ರೈಲರ್ ಮೂಲಕ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬಗೆಲುವು ದಾಖಲಿಸುತ್ತೆ, ಕನ್ನಡ ಚಿತ್ರರಂಗದ ಘನತೆಯನ್ನು ಮತ್ತೆ ಜಗತ್ತಿನ ಮುಂದೆ ಎತ್ತಿ ಹಿಡಿಯುತ್ತೆ ಎಂಬಂಥಾ ಗಾಢ ನಂಬಿಕೆ ಅಷ್ಟದಿಕ್ಕುಗಳತ್ತಲೂ ವ್ಯಾಪಿಸಿಕೊಂಡಿದೆ.
ವಾರದ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಬಾಲಿವುಡ್ ನಟ ಅರ್ಬಾಜ್ ಖಾನ್ ಸಮ್ಮುಖದಲ್ಲಿ ಬನಾರಸ್ ಟ್ರೈಲರ್ ಬಿಡುಗಡೆಗೊಂಡಿತ್ತು. ಈ ಟ್ರೈಲರ್ ನೋಡಿದ ಕ್ರೇಜಿಸ್ಟಾರ್ ಬಹುವಾಗಿ ಮೆಚ್ಚಿಕೊಂಡಿದ್ದರು. ನವ ನಾಯಕ ಝೈದ್ ಖಾನ್ ನಟನೆ ಮತ್ತು ಅದರ ಹಿಂದಿರುವ ಎಫರ್ಟ್ಗಳನ್ನೆಲ್ಲ ಮನಸಾರೆ ಕೊಂಡಾಡಿದ್ದರು. ದಿನದೊಪ್ಪತ್ತಿನಲ್ಲಿಯೇ ಕನಸುಗಾರನ ಮೆಚ್ಚುಗೆಗಳಿಗೆ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಿಂದ ಸಹಮತ ಕೇಳಿಬರಲಾರಂಭಿಸಿತ್ತು. ಅದರ ಫಲವಾಗಿಯೇ ಏಳೂ ಭಾಷೆಗಳಲ್ಲಿ ಈ ಟ್ರೈಲರ್ಗೆ ಮಿಲಿಯನ್ನುಗಟ್ಟಲೆ ವೀವ್ಸ್ಗಳು ಸಿಕ್ಕಿವೆ. ಅದು ಈ ಕ್ಷಣಕ್ಕೂ ಅತ್ಯಂತ ವೇಗವಾಗಿ ಏರುಗತಿ ಕಾಣುತ್ತಾ ಮುಂದುವರೆಯುತ್ತಿದೆ.
ಬನಾರಸ್ ಏಳು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರುಗೊಂಡಿರುವ ಪ್ಯಾನಿಂಡಿಯಾ ಸಿನಿಮಾ. ಗಮನೀಯ ಸಂಗತಿಯೆಂದರೆ, ಝೈದ್ ಖಾನ್ ಮೊದಲ ಹೆಜ್ಜೆಯಲ್ಲಿಯೇ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದು ಯಾವ ನಟರ ಪಾಲಿಗಾದರೂ ಅಕ್ಷರಶಃ ಸವಾಲಿನ ಸಂಗತಿ. ಅದಕ್ಕೆ ಸಾಕಷ್ಟು ಪೂರ್ವ ತಯಾರಿ ಬೇಕಾಗುತ್ತದೆ. ಅಂಥಾ ಸರ್ವ ತಯಾರಿಯನ್ನೂ ಮಾಡಿಕೊಂಡೇ ಝೈದ್ ಅಖಾಡಕ್ಕಿಳಿದಿದ್ದಾರೆ. ಆರಂಭದಲ್ಲಿ ಅವರ ಹಿನ್ನೆಲೆಯ ಕಾರಣದಿಂದ ಒಂದಷ್ಟು ಮಂದಿ ಕುಹಕವಾಡಿದ್ದದ್ದು ನಿಜ. ಆದರೆ ಟ್ರೈಲರ್ ನೋಡಿದ ಪ್ರತಿಯೊಬ್ಬರಿಗೂ ಕೂಡಾ ಝೈದ್ ಖಾನ್ ಬನಾರಸ್ ಚಿತ್ರಕ್ಕಾಗಿ ಮಾಡಿಕೊಂಡಿರುವ ತಯಾರಿ ಎಂಥಾದ್ದೆಂಬುದರ ಅರಿವಾಗಿದೆ. ನೋಡಿದವರೆಲ್ಲ ಝೈದ್ ಬಗ್ಗೆ ವೀಶೆಷವಾಗಿ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಅಂದಹಾಗೆ, ಬನಾರಸ್ ಇದೇ ನವೆಂಬರ್ ನಾಲಕ್ಕರಂದು ಬಿಡುಗಡೆಗೊಳ್ಳಲಿದೆ.