ಎಲ್ಲವೂ ನಿರೀಕ್ಷೆಯಂತೆಯೇ ಘಟಿಸುತ್ತಿರುವ ಅಪಾರ ಖುಷಿ ಬನಾರಸ್ ಚಿತ್ರತಂಡವನ್ನು ತಬ್ಬಿಕೊಂಡಿದೆ. ಓರ್ವ ನವ ನಾಯಕನ ಚಿತ್ರವೊಂದು ಈ ಪರಿಯಾಗಿ, ತಾನೇತಾನಾಗಿ ಸೌಂಡು ಮಾಡಲು ಸಾಧ್ಯವಾ ಅತೊಂದು ಅಚ್ಚರಿ ಮೂಡುವಂತೆ ಬನಾರಸ್ ಟಾಕ್ ಕ್ರಿಯೇಟ್ ಮಾಡುತ್ತಿದೆ. ಗಮನೀಯ ಅಂಶವೆಂದರೆ, ಇಂಥಾದ್ದೊಂದು ಸಕಾರಾತ್ಮಕ ವಾತಾವರಣಕ್ಕೆ ಕಾರಣವಾಗಿರೋದು ಚೆಂದದ ಹಾಡುಗಳ ಹಂಗಾಮಾ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಮಾಯಗಂಗೆ ಎಂಬ ಹಾಡನ್ನು ಬಹುತೇಕರು ಮತ್ತೆ ಮತ್ತೆ ಕೇಳುತ್ತಾ ಸುಖಿಸುತ್ತಿದ್ದಾರೆ. ಈ ಕಾರಣದಿಂದಲೇ ಅದು ದೊಡ್ಡ ಮಟ್ಟದಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಆ ಮೆಲೋಡಿಯ ಮಾಧುರ್ಯವಿನ್ನೂ ಚಾಲ್ತಿಯಲ್ಲಿರುವಾಗಲೇ, ಟಪ್ಪಾಂಗುಚ್ಚಿ ಶೈಲಿಯ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ.
ನಿರ್ದೇಶಕ ಜಯತೀರ್ಥ ಸಿನಿಮಾ ಅಂದ ಮೇಲೆ ಅಲ್ಲಿ ಮತ್ತೆ ಮತ್ತೆ ಕೇಳುವಂಥಾ ಹಾಡುಗಳ ಹಾಜರಿ ಇದ್ದೇ ಇರುತ್ತದೆ. ಹಾಗೊಂದು ನಂಬಿಕೆ ಪ್ರೇಕ್ಷಕ ವಲಯದಲ್ಲಿ ಪಡಿಮೂಡಿಕೊಂಡಿದೆ. ಆ ನಂಬಿಕೆ ಬನಾರಸ್ ಮೂಲಕ ಮತ್ತಷ್ಟು ಹೊಳಪುಗಟ್ಟಿಕೊಂಡಿದೆ. ಈ ಹಿಂದೆ ಮಾಯಗಂಗೆ ಹಾಡು ಬರೆದಿದ್ದ ವಿ. ನಾಗೇಂದ್ರ ಪ್ರಸಾದ್ ಅವರೇ ಈಗ ಬಿಡುಗಡೆಯಾಗಿರೋ ಟ್ರೋಲ್ ಸಾಂಗಿಗೂ ಸಾಹಿತ್ಯ ಒದಗಿಸಿದ್ದಾರೆ. ಈಗಿನ ದಿನಮಾನದ ಟ್ರೆಂಡಿಗೆ ತಕ್ಕುದಾದಂಥಾ ಸಾಹಿತ್ಯವಿರೋ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವ ಅಜನೀಶ್ ಲೋಕನಾಥ್ ಅವರೇ ಸದರಿ ಹಾಡಿಗೆ ಧ್ವನಿಯಾಗಿದ್ದಾರೆ. ಒಟ್ಟಾರೆಯಾಗಿ ಒಂದೇ ಸಲಕ್ಕೆ ಇಷ್ಟವಾಗುವ ರೀತಿಯಲ್ಲಿದು ಮೂಡಿ ಬಂದಿದೆ. ನಿಸ್ಸಂದೇಹವಾಗಿ ಈ ಹಾಡೂ ಕೂಡಾ ಟ್ರೆಂಡ್ ಸೆಟ್ ಮಾಡೋದು ಪಕ್ಕಾ.
ವಿಶೇಷವಾಗಿ, ಈ ಹಾಡಿನಲ್ಲಿ ಝೈದ್ ಖಾನ್ ಗಮನ ಸೆಳೆಯುತ್ತಾರೆ. ಅವರ ಪಾತ್ರದ ಪ್ರಧಾನ ಶೇಡೊಂದು ಈ ಮೂಲಕವೇ ಜಾಹೀರಾದಂತಿದೆ. ಸಾಮಾನ್ಯವಾಗಿ ಹಣವಂತರ ಮಕ್ಕಳು ಹೀರೋ ಆದಾಗ ಅದೊಂದು ಥರದ ಮೂದಲಿಕೆಯೇ ಮೊದಲು ಕಾಣ ಸಿಗುತ್ತೆ. ಆದರೆ, ಬೇಕಾದಂಥಾ ಕಲಿಕೆ, ಸಮರ್ಪಣಾ ಮನೋಭಾವ ಇಲ್ಲದ ಯಾರನ್ನೂ ಸಿನಿಮಾ ಜಗತ್ತು ಅಪ್ಪಿಕೊಳ್ಳೋದಿಲ್ಲ. ಯಾಕೆಂದರೆ ಕಲೆಗೆ ಕಾಸಿನ ನಂಟಿಲ್ಲ. ಅದಕ್ಕಿರೋದು ಪ್ರತಿಭೆ, ಪರಿಶ್ರಮಗಳ ಪರಿಚಯವಷ್ಟೇ. ಇದನ್ನು ನಿಖರವಾಗಿಯೇ ಅರ್ಥೈಸಿಕೊಂಡಿದ್ದ ಝೈದ್ ಖಾನ್, ನಟನಾಗಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಎಲ್ಲದರಲ್ಲಿಯೂ ಪಳಗಿಕೊಂಡಿದ್ದಾರೆ. ಅದರ ಲಕ್ಷಣಗಳು ಹಾಡುಗಳ ಮೂಲಕ ಸ್ಪಷ್ಟವಾಗಿಯೇ ಗೋಚರಿಸಿವೆ.
ಇದು ಕನ್ನಡ ಚಿತ್ರರಂಗದ ಪಾಲಿಗೆ ಹೊಸತನದ ಶಖೆಯೊಂದು ಆರಂಭವಾಗಿರುವ ಕಾಲ. ಅದನ್ನು ಮತ್ತಷ್ಟು ತೀವ್ರವಾಗಿಸುವಂತೆ ಬನಾರಸ್ ಮೂಡಿ ಬಂದಿದೆ. ಇದು ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ತಯಾರುಗೊಂಡಿರುವ ಪ್ಯಾನಿಂಡಿಯಾ ಚಿತ್ರ. ಇದೇ ನವೆಂಬರ್ ನಾಲಕ್ಕರಂದು ತೆರೆಗಾಣಲಿರುವ ಬನಾರಸ್ ಅನ್ನು ತಿಲಕ್ ರಾಜ್ ಬಲ್ಲಾಳ್ ಬಲು ಆಸ್ಥೆಯಿಂದ ನಿರ್ಮಾಣ ಮಾಡಿದ್ದಾರೆ. ಸೋನಲ್ ಮಂತೇರೋ ಮಹತ್ವದ ಚಹರೆಗಳಿರುವ ಪಾತ್ರದಲ್ಲಿ, ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸಪ್ನಾ ರಾಜ್, ಬರ್ಖತ್ ಅಲಿ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಕಥಾನಕದೊಂದಿಗೆ ಈ ಸಿನಿಮಾ ತಿಂಗಳೊಪ್ಪತ್ತಿನಲ್ಲಿಯೇ ಪ್ರೇಕ್ಷಕರ ಮುಂದೆ ಅವತರಿಸಲಿದೆ.