ಝೈದ್ ಖಾನ್ ನಾಯಕನಾಗಿ ನಟಿಸಿರೋ ಬನಾರಸ್ ಬಿಡುಗಡೆಗೊಂಡು ದಿನವೊಂದು ಹೊರಳಿಕೊಂಡಿದೆ. ಕರ್ನಾಟಕವೂ ಸೇರಿದಂತೆ, ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಹೀಗೆ ಬನಾರಸ್ ಪ್ರಭೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿರೋದರಿಂದ, ಒಟ್ಟಾರೆ ಕಲೆಕ್ಷನ್ ಬಗ್ಗೆ ಎಲ್ಲ ಚಿತ್ತ ಕದಲಿಕೊಂಡಿದೆ. ಈ ಬಗ್ಗೆ ಇದೀಗ ಚಿತ್ರತಂಡದ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರ ಬಿದ್ದಿದೆ.
ಅದರನ್ವಯ ಹೇಳೋದಾದರೆ, ಬನಾರಸ್ ಮೊದಲ ದಿನದ ಕಲೆಕ್ಷನ್ ಮೂರು ಕೋಟಿ ಮೀರಿಕೊಂಡಿದೆ. ಮೊದಲ ದಿನವೇ ಸಿನಿಮಾ ನೋಡಿದವರ ಬಾಯಿಂದ ಬಾಯಿಗೆ ಸದಭಿಪ್ರಾಯ ಹಬ್ಬಿಕೊಳ್ಳುತ್ತಿರೋದರಿಂದ, ಎರಡನೇ ದಿನ ಆ ಮೊತ್ತ ದುಪ್ಪಟ್ಟಾಗುವ ನಿರೀಕ್ಷೆಗಳಿವೆ. ಒಟ್ಟಾರೆಯಾಗಿ ಜಯತೀರ್ಥ ನಿರ್ದೇಶನದ ಬನಾರಸ್ ಕಥೆ ಸೇರಿದಂತೆ ಎಲ್ಲ ದಿಕ್ಕಿನಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಝೈದ್ ಖಾನ್ ನಟನೆಯನ್ನೂ ಕೂಡಾ ಪ್ರೇಕ್ಷಕರು ಕೊಂಡಾಡಲಾರಂಭಿಸಿದ್ದಾರೆ.
ಈ ಮೂಲಕ ಇದೀಗ ದೇಶಾದ್ಯಂತ ಬನಾರಸ್ ಬೆಳುದಿಂಗಳು ಹಬ್ಬಿಕೊಂಡಂತಾಗಿದೆ. ಕರ್ನಾಟಕದಲ್ಲಿ ಕೆಲ ಮಂದಿ ಶುರುವಾತಿನಿಂದಲೂ ಬಾಯ್ಕಾಟ್ ಬನಾರಸ್ ಅಂತೆಲ್ಲ ಬಡಬಡಿಸಿದ್ದರು. ಆದರೆ, ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ, ನೋಡಿ ಗೆಲ್ಲಿಸುತ್ತಾರೆಂಬ ನಂಬಿಕೆ ಬನಾರಸ್ ಮೂಲಕ ಮತ್ತಷ್ಟು ಗಟ್ಟಿಗೊಂಡಿದೆ. ಅದಕ್ಕೆ ಬನಾರಸ್ ಮೂಡಿ ಬಂದಿರುವ ರೀತಿಯೂ ಪಕ್ಕಾ ಸಾಥ್ ಕೊಟ್ಟಿದೆ. ನೋಡಿದ ಪ್ರತೀ ಪ್ರೇಕ್ಷಕರ ಮನಸಿಗೂ ದೈವೀಕ ಪ್ರೇಮ ಕಥನದ ಗಂಧ ತಾಕಿದೆ. ಬನಾರಸ್ ಒಂದು ದೇಸೀ ಸೊಗಡಿನ ಪ್ಯಾನಿಂಡಿಯಾ ಚಿತ್ರವಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಕನ್ನಡವೂ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಟೇಕಾಫ್ ಆಗುತ್ತಿರೋ ಈ ಚಿತ್ರ ದೊಡ್ಡ ಮಟ್ಟದ ಗೆಲುವು ದಾಖಲಿಸೋದರಲ್ಲಿ ಯಾವ ಸಂದೇಹವೂ ಇಲ್ಲ!