ದೇವರೂರಿನ ದಾರಿಹೋಕನ ಮೋಹಕ ಪ್ರೇಮಕಥೆ!
ಝೈದ್ ಖಾನ್ ನಾಯಕನಾಗಿ ಆಗಮಿಸುತ್ತಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಜಯತೀರ್ಥ ನಿರ್ದೇಶನದ ಈ ಸಿನಿಮಾ ಟೈಟಲ್ ಲಾಂಚ್ ಆದಂದಿನಿಂದಲೇ ನಾನಾ ಥರದಲ್ಲಿ ನಿರೀಕ್ಷೆ ಮೂಡಿಸಿತ್ತು. ಆ ನಂತರದಲ್ಲಿ ಕಲಾವಿದನ ಕುಂಚದಲ್ಲರಳಿದ ಅಮೂರ್ತ ಚಿತ್ತಾರದಂಥಾ ಪೋಸ್ಟರ್ಗಳ ಮೂಲಕ ಬನಾರಸ್ ಸೃಷ್ಟಿಸಿದ್ದ ಸಂಚಲನವಿದೆಯಲ್ಲಾ? ಅದು ಸಾಮಾನ್ಯವಾದುದೇನಲ್ಲ. ಆ ಬಳಿಕ ತನ್ನ ಪಾಡಿಗೆ ತಾನು ಚಿತ್ರೀಕರಣದಲ್ಲಿ ತಲ್ಲೀನವಾಗಿ, ಚಿತ್ರೀಕರಣ ಪೂರೈಸಿಕೊಂಡಿರುವ ಬನಾರಸ್ ಇದೀಗ ಚೆಂದದ ಹಾಡೊಂದರ ಮೂಲಕ ಚರ್ಚೆ ಹುಟ್ಟು ಹಾಕಿದೆ. ಪ್ರೇಮವೆಂಬೋ ಧ್ಯಾನವನ್ನು, ದೈವೀಕ ಸುಗಂಧದಲ್ಲಿ ಸುತ್ತುವರೆದಂತಿರೋ ಈ ಹಾಡೀಗ ಟ್ರೆಂಡಿಂಗ್ನಲ್ಲಿದೆ. ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ದಾಖಲೆಯ ಹಾದಿಯತ್ತ ದಾಪುಗಾಲಿಡುತ್ತಿದೆ.
ಜಯತೀರ್ಥ ಒಂದು ಸಿನಿಮಾವನ್ನು ಕೈಗೆತ್ತಿಕೊಂಡರೆಂದರೆ ಸಹಜವಾಗಿಯೇ ಅದರತ್ತ ಪ್ರೇಕ್ಷಕರ ಚಿತ್ತ ಕದಲಿಬಿಡುತ್ತೆ. ಅದರಲ್ಲಿಯೂ ಬನಾರಸ್ ಒಂದು ವಿಶಿಷ್ಟ ಪ್ರೇಮ ಕಾವ್ಯವೆಂಬಂಥಾ ಸುಳಿವು ಸಿಕ್ಕಾಕ್ಷಣವೇ ಭರವಸೆ ಇಮ್ಮಡಿಗೊಂಡಿತ್ತು. ಯಾಕೆಂದರೆ ಅಂತಾರಾಜ್ಯ ಪ್ರೇಮ್ಕಹಾನಿಯ ಕಥೆ ಹೊಂದಿದ್ದ ಒಲವೇ ಮಂದಾರ ಚಿತ್ರವನ್ನು ಜಯತೀರ್ಥ ನಿರ್ದೇಶನ ಮಾಡಿದ್ದ ಪರಿಯೇ ಅಂಥಾದ್ದಿದೆ. ಬನಾರಸ್ನಲ್ಲಿಯೂ ಕೂಡಾ ಅದೆಲ್ಲವನ್ನೂ ಮೀರಿಸುವ ಪ್ರೇಮಕಥೆ ಇದೆ ಎಂಬುದಕ್ಕೆ ಈಗ ಬಿಡುಗಡೆಗೊಂಡಿರೋ ಮಾಯಗಂಗೆ ಹಾಡಿಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ. ಮಾಯಗಂಗೆ ಮಾಯಗಂಗೆ ಮೌನಿಯಾದಳೇ ಅಂತ ಗಂಗೆಯ ತಟದಿಂದ ತೆರೆದುಕೊಳ್ಳುವ ಈ ಹಾಡು ಒಂದೇ ಸಲಕ್ಕೆ ಮನಸಿಗೆ ತಾಕುತ್ತದೆ. ಆ ಸಂಗೀತ ಒಳಗಿಳಿದು, ಸಾಹಿತ್ಯವೂ ಅಲ್ಲಿಯೇ ಜಿನುಗಲಾರಂಭಿಸುತ್ತದೆ. ಅಷ್ಟರ ಮಟ್ಟಿಗೆ ಈ ಹಾಡು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.
ಇಂಥಾದ್ದೊಂದು ಸಾಹಿತ್ಯವನ್ನು ಕಥೆಗೆ ಪೂರಕವಾಗಿ ರಚಿಸಿ, ಅಚ್ಚರಿ ಮೂಡಿಸಿದವರು ವಿ. ನಾಗೇಂದ್ರ ಪ್ರಸಾದ್. ಅವರು ಆಗಾಗ ಇಂಥಾ ಸಾಲುಗಳ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿರುತ್ತಾರೆ. ಅವರ ಇದುವರೆಗಿನ ಹಿಟ್ ಲಿಸ್ಟುಗಳಲ್ಲಿ ಈ ಹಾಡೂ ಕೂಡಾ ನಿಸ್ಸಂಶಯವಾಗಿ ದಾಖಲಾಗುತ್ತದೆ. ಇನ್ನುಳಿದಂತೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತವೂ ಮೋಹಕವಾಗಿದೆ. ಇದೆಲ್ಲವೂ ಗಂಗೆಯ ಸೆರಗಿನ ಸುಂದರ ವಾತಾವರಣದಲ್ಲಿ ಮತ್ತಷ್ಟು ಚೆಂದಗಂಡಿದೆ. ಈ ಹಾಡಿನ ದೃಷ್ಯಗಳ ಮೂಲಕವೇ ಕಥೆಯ ಬಗೆಗೊಂದು ಕುತೂಹಲ ಮೊಳೆಯುವಂತೆ ಮಾಡೋ ಜಾಣ್ಮೆಯನ್ನೂ ನಿರ್ದೇಶಕರು ತೋರಿಸಿದ್ದಾರೆ. ಒಟ್ಟಾರೆಯಾಗಿ ಈ ಹಾಡು ಇತ್ತೀಚಿನ ದಿನಗಳಲ್ಲಿ ಹೊಸಾ ಫೀಲ್ ಹುಟ್ಟಿಸುವ ಮೂಲಕ ಎಲ್ಲರಿಂದಲೂ ಗುನುಗುನಿಸಿಕೊಳ್ಳುತ್ತಿದೆ.
ಈ ಮೂಲಕ ನಾಯಕ ಝೈದ್ ಖಾನ್ ಲವರ್ ಬಾಯ್ ಆಗಿ ಕಂಗೊಳಿಸಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗಕ್ಕೊಬ್ಬ ಹ್ಯಾಂಡ್ಸಂಮ್ ಹೀರೋನ ಎಂಟ್ರಿಯಾದಂತಾಗಿದೆ. ಆತನಿಗೆ ನಾಯಕಿಯಾಗಿ ಕರಾವಳಿಯ ಹುಡುಗಿ ಸೋನಲ್ ಮಂತೇರೋ ಸಾಥ್ ಕೊಟ್ಟಿದ್ದಾರೆ. ಈ ಚಿತ್ರವನ್ನು ಬಲು ಪ್ರೀತಿಯಿಂದ ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ದೇವರಾಜ್, ಸುಜಯ್ ಶಾಸ್ತ್ರಿ, ಅಚ್ಯುತ್ ಕುಮಾರ್ ಮುಂತಾದವರ ದೊಡ್ಡ ತಾರಾಗಣ ಈ ಚಿತ್ರಕ್ಕಿದೆ. ಕೆ.ಎಂ ಪ್ರಕಾಶ್ ಸಂಕಲನ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ ಸಾಹಸ, ರಘು ನಿಡುವಳ್ಳಿ ಸಂಭಾಷಣೆಗಳಿಂದ ಬನಾರಸ್ ಕಳೆಗಟ್ಟಿಕೊಂಡಿದೆ. ಈಗ ಬಿಡುಗಡೆಯಾಗಿರೋ ಮಾಯಗಂಗೆ ಹಾಡು ಹಿಂದಿ ಸೇರಿದಂತೆ ಒಂದಷ್ಟು ಭಾಷೆಗಳಲ್ಲಿಯೂ ಹಂತ ಹಂತವಾಗಿ ಬಿಡುಗಡೆಗೊಳ್ಳಲಿದೆ. ಐದು ಭಾಷೆಗಳಲ್ಲಿ ತಯಾರಾಗಿರುವ ಪ್ಯಾನಿಂಡಿಯಾ ಸಿನಿಮಾ ಬನಾರಸ್ ಇದೀಗ ಬಿಡುಗಡೆಯ ಹಾದಿಯಲ್ಲಿದೆ.