ಜನ ಸಮುದಾಯದ ನಡುವೆ ಚಿತ್ರವಿಚಿತ್ರವಾದ ನಂಬಿಕೆಗಳು ಬೇರಿಳಿಸಿಕೊಂಡಿವೆ. ಅವುಗಳಲ್ಲಿ ಕೆಲವಂತೂ ಆಳವಾಗಿ ಆಲೋಚನೆಗೆ ಹಚ್ಚುತ್ತವೆ. ಭಾವುಕತೆ ಬೆರೆತ ರೂಢಿ, ಆಚರಣೆಗಳಂತೂ ವಿಶ್ವಾದ್ಯಂತ ಹಬ್ಬಿಕೊಂಡಿವೆ. ಈ ಜಗತ್ತಿನ ನಾನಾ ದೇಶಗಳಲ್ಲಿ ಬೀಡು ಬಿಟ್ಟಿರೋ ಬುಡಕಟ್ಟು ಜನಾಂಗದಲ್ಲಿ ಹಾಸುಹೊಕ್ಕಾಗಿರೋ ಆಚರಣೆಗಳಂತೂ ತೀರಾ ವಿಚಿತ್ರವಾಗಿವೆ. ಆ ಮುಗ್ಧ ಜನರ ನಂಬಿಕೆ, ಆಚರಣೆಗಳು ನಾಗರಿಕ ಸಮುದಾಯವನ್ನು ತಬ್ಬಿಬ್ಬುಗೊಳಿಸುವಂತಿವೆ.
ಅಂಥಾದ್ದೇ ಒಂದು ನಂಬಿಕೆ, ಸಂಪ್ರದಾಯ ತೋರಾಜನ್ ಬುಡಕಟ್ಟು ಸಮುದಾಯದಲ್ಲಿ ಚಾಲ್ತಿಯಲ್ಲಿದೆ. ಈ ಸಮುದಾಯದಲ್ಲಿ ಹಸುಗೂಸುಗಳು ಮರಣ ಹೊಂದಿದಾಗ ಅವುಗಳ ಅಂತ್ಯ ಸಂಸ್ಕಾರ ಮಾಡೋ ವಿಧಾನವೇ ವಿಚಿತ್ರ. ಸಾಮಾನ್ಯವಾಗಿ ಎಳೇ ಕಂದಮ್ಮಗಳು ಅಸನೀಗಿಸರೆ ಮಣ್ಣು ಮಾಡುವ ಸಂಪ್ರದಾಯ ಎಲ್ಲೆಡೆಯಲ್ಲಿದೆ. ಆದ್ರೆ ತೋರಾನ್ನಿಯರು ಮಾತ್ರ ಸತ್ತ ಕೂಸನ್ನು ನಿರ್ಧಿಷ್ಟವಾದ ಬೃಹತ್ ಮರವೊಂದರ ಪೊಟರೆಯಲ್ಲಿಟ್ಟು ಅದಕ್ಕೆ ಕಟ್ಟಿಗೆಯ ಬಾಗಿಲಿನಿಂದ ಮುಚ್ಚಿಗೆ ಮಾಡೋ ಸಂಪ್ರದಾಯವನ್ನ ಪರಿ ಪಾಲಿಸಿಕೊಂಡು ಬಂದಿದ್ದಾರೆ.
ಆರು ತಿಂಗಳೊಳಗಿನ, ಇನ್ನೂ ಹಲ್ಲು ಮೂಡದ ಮಕ್ಕಳು ಸತ್ತರೆ ಅವುಗಳ ಕಳೇಬರವನ್ನು ಟರ್ರಾ ಎಂಬ ಜಾತಿಯ ಮರದ ಪೊಟರೆಯಲ್ಲಿಟ್ಟು ಸಂಸ್ಕಾರ ಮಾಡಲಾಗುತ್ತೆ. ಟರ್ರಾ ಅನ್ನೋದು ಆಕಾಶದೆತ್ತರಕ್ಕೆ ಬೆಳೆಯೋ ಬೃಹತ್ ಮರ. ಹತ್ತಾರು ಮಂದಿ ಸುತ್ತ ನಿಂತರೂ ನಿಲುಕದಷ್ಟು ಸುತ್ತಳತೆಯನ್ನ ಆ ಮರ ಹೊಂದಿರುತ್ತೆ. ಅಂಥಾ ಮರದಲ್ಲಿ ಸುತ್ತಲೂ ಅಲ್ಲಲ್ಲಿ ಪೊಟರೆಗಳಿರುತ್ತವೆ. ಆ ಮರವನ್ನೇ ಸದರಿ ಜನಾಂಗ ಮಸಣದಂತೆ ಬಳಸಿಕೊಳ್ಳುತ್ತೆ.
ಈ ಬುಡಕಟ್ಟು ಜನಾಂಗ ವಾಸವಿರುವ ಪ್ರದೇಶದಲ್ಲಿ ಇಂಥಾ ಮರ ಇದ್ದೇ ಇರುತ್ತೆ. ಆ ಮರದ ಸುತ್ತಲೂ ಬೇಲಿ ಮಾಡಲಾಗಿರುತ್ತೆ. ಆ ಮರದ ಪೊಟರೆಗಳ ತುಂಬಾ ಶಿಶುಗಳ ಕಳೇಬರ ತುಂಬಿಕೊಂಡಿರುತ್ತೆ. ಈ ಆಚರಣೆಯ ಹಿಂದೊಂದು ಭಾವುಕ ನಂಬಿಕೆ ಇದೆ. ಇನ್ನೂ ಹಲ್ಲು ಮೂಡದ ಮಕ್ಕಳು ಸತ್ತಾಗ ಈ ಮರದ ಪೊಟರೆಯಲ್ಲಿಟ್ಟರೆ ಮತ್ತೆ ಅದು ಅದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟುತ್ತೆ ಅನ್ನೋ ನಂಬಿಕೆ ಆ ಜನರಲ್ಲಿದೆ.