ಮುಂಗಾರು ಆರಂಭವಾಗುತ್ತಲೇ ಮುದಗೊಳ್ಳುವ ಕಾಲ ಸರಿದು ಹೋಗಿ ಎರಡ್ಮೂರು ವರ್ಷಗಳೇ ಕಳೆದು ಹೋಗಿವೆ. ಇದು ಮುಂಗಾರಿನ ಹಿಮ್ಮೇಳದಲ್ಲಿ ಎಂಥಾ ದುರ್ಘಟನೆಗಳು ನಡೆಯಲಿವೆಯೋ ಅಂತ ಬೆಚ್ಚಿಬಿದ್ದು ಮುದುರಿ ಕೂರುವ ಕಾಲಮಾನ. ನಮ್ಮ ರಾಜ್ಯ ಮಾತ್ರವಲ್ಲ; ಒಂದಿಡೀ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆಯೆಂಬುದು ಮರಣಮೃದಂಗವನ್ನೇ ಬಾರಿಸುತ್ತಿವೆ. ಇದೀಗ ನಮ್ಮ ದಕ್ಷಿಣ ಕನ್ನಡದಂಥಾ ಕಡೆಗಳಲ್ಲಿ ಊರುಗಳು ಮುಳುಗಡೆಯಾಗುತ್ತಿವೆ. ಆದರೆ ಒಂದಷ್ಟು ಬಡತನವನ್ನು ಹಾಸಿ ಹೊದ್ದಿರುವ ಅಸ್ಸಾಂ ಮುಂಗಾರು ಪೂರ್ವ ಮಳೆಯಲ್ಲಿಯೇ ಸಂಪೂರ್ಣವಾಗಿ ಮುಳುಗೆದ್ದಿದೆ. ಅದೆಷ್ಟೋ ಜನರು ಪ್ರಾಣ ಕಳೆದುಕೊಂಡರೆ, ಬದುಕುಳಿದ ಮಂದಿಗೊಂದು ಸೂರಿಗೂ ಗತಿಯಿಲ್ಲದಂಥಾ ದಾರುಣ ಪರಿಸ್ಥಿತಿ ಅಸ್ಸಾಂ ಅನ್ನು ಅಕ್ಷರಶಃ ಆಳುತ್ತಿದೆ.
ಅಸ್ಸಾಂನಲ್ಲಿ ಜನ ಬಡತನದಿಂದ ನರಳುತ್ತಿದ್ದರೂ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಮಳೆಗಾಲ ಶುರುವಾದರೆ ಸಾಕು; ಜನರ ಬದುಕು ಮೂರಾಬಟ್ಟೆಯಾಗುತ್ತಿದೆ. ಅಸ್ಸಾಂನ ಬಹುತೇಕ ಪ್ರದೇಶಗಳಲ್ಲಿ ವ್ಯಾಪಕ ಮಳೆ ಹಾನಿಗಳು ಸಂಭವಿಸಿವೆಯಾದರೂ ಬಾರ್ಪೇಟಾ ಜಿಲ್ಲೆಯ ಕಚುಮಾರಾ ಪ್ರದೇಶದಲ್ಲಿ ಹೇಳತೀರದಷ್ಟು ಹಾನಿಗಳಾಗಿವೆ. ಪದೇ ಪದೆ ಬಂದೆರಗಿದ ನೆರೆ ಹಾವಳಿಯಿಂದಾಗಿ ಅಲ್ಲಿನ ಜನ ಅಕ್ಷರಶಃ ಕಂಗಾಲಾಗಿದ್ದಾರೆ. ಒಂದೆಡೆ ಊರ ಜೊತೆಗೇ ಇದ್ದ ಕೆಲವರನ್ನು ಕಳೆದುಕೊಂಡ ಸಂಕಟ, ಮತ್ತೊಂದೆಡೆ ತಲೆ ಮೇಲೊಂದು ಸೂರೂ ಇಲ್ಲದಂಥಾ ದಾರುಣ ಸ್ಥಿತಿಯಿಂದ ಜನ ದಿಕ್ಕು ತೋಚದಂತಾಗಿದ್ದಾರೆ.
ಬ್ರಹ್ಮಪುತ್ರ ನದಿಯ ಅಬ್ಬರದಿಂದಾಗಿ ಕಚುಮಾರಾ ಪ್ರದೇಶದಲ್ಲಿ ಏನಿಲ್ಲವೆಂದರೂ ಇನ್ನೂರರಷ್ಟು ಕುಟುಂಬಗಳು ಬೀದಿ ಪಾಲಾಗಿವೆ. ಈ ಭೀಕರ ಪ್ರವಾಹ ಕಷ್ಟಪಟ್ಟು ಕಟ್ಟಿಕೊಂಡಿದ್ದ ಮನೆಗಳನ್ನೂ ಕೊಚ್ಚಿಕೊಂಡು ಹೋಗಿದೆ. ಇಲ್ಲಿನ ಜನರನ್ನು ಬೇರೆಡೆಗೆ ಸ್ಥಾಳಾಂತರವಾಗುವಂತೆ ಆಡಳಿತ ವ್ಯವಸ್ಥೆ ಹೇಳುತ್ತಿದೆಯಾದರೂ ಅಲ್ಲಿಯೂ ಮೂಲಭೂತ ಸೌಕರ್ಯಗಳಿಲ್ಲ. ಈ ಬಾಗದಲ್ಲಂತೂ ಭಾಗಶಃ ಎಲ್ಲ ಪ್ರದೇಶಗಳೂ ಹಾನಿಗೊಳಗಾಗಿವೆ. ಬಹುತೇಕ ಕಡೆಗಳಲ್ಲಿ ನೀರಿನ ಅಬ್ಬರದಿಂದ ಭೂಮಿ ಕೊರೆತಕ್ಕೀಡಾಗಿದೆ. ಸದ್ಯದ ಮಟ್ಟಿಗೆ ಸದರಿ ಭೂಭಾಗ ಪಕ್ಕಾ ಡೇಂಜರ್ ಝೋನಿನಂತಾಗಿದೆ. ಮನೆ ಮಠ, ಬಟ್ಟೆಬರೆ ಇಲ್ಲದ ಅಲ್ಲಿನ ಜನರ ಪಾಡು ನಿಜಕ್ಕೂ ಕಣ್ಣಲ್ಲಿ ನೀರೂರಿಸುವಂತಿದೆ.