-ಅಪರೂಪದ ಪಾತ್ರಗಳನ್ನು ಆವಾಹಿಸಿಕೊಳ್ಳಿದ್ದಾರೆ ನೀನಾಸಂ ಸತೀಶ್!
-ದಯಾನಂದ್ ಬೊಗಸೆಯಲ್ಲಿರುವುದು ಯಾರ ಉಸಿರಿನ ಸದ್ದು?
ಕನ್ನಡದಲ್ಲಿ ಕಥೆಗಳಿಗೆ ಕೊರತೆಯಿದೆಯಾ ಅಂತೊಂದು ಅನುಮಾನ ನಾನಾ ದಿಕ್ಕಿನಲ್ಲಿ ಗಿರಕಿ ಹೊಡೆದು ದೊಡ್ಡ ಮಟ್ಟದಲ್ಲಿಯೇ ಚರ್ಚೆಗಳನ್ನೂ ಹುಟ್ಟುಹಾಕಿತ್ತು. ಆದರೆ ಆ ಚರ್ಚೆಯ ನೆತ್ತಿಗೆ ಮೊಟಕುವಂಥಾ ಒಂದಷ್ಟು ಕಥೆಗಳು ಕನ್ನಡದಲ್ಲಿಯೂ ಹರಳುಗಟ್ಟುತ್ತಿವೆ. ಸಮಸ್ಯೆ ಕಥೆಯ ಕೊರತೆಯದ್ದಲ್ಲ; ಅದನ್ನು ಕಾಣೋ ಕಣ್ಣು ಮತ್ತು ಬೆಂಬಿದ್ದು ಹುಡುಕಾಡೋ ಮನಸಿನದ್ದೆಂಬ ಸತ್ಯ ಈಗಾಗಲೇ ಅನಾವರಣಗೊಂಡಿದೆ. ಅದರಲ್ಲಿಯೂ ವಿಶೇಷವಾಗಿ ವಿಶಿಷ್ಟವಾದ ಒಳನೋಟಗಳನ್ನು ಹೊಂದಿರುವ, ಯಾರೂ ಮುಟ್ಟದ ಕಥೆಯನ್ನು ಹೆಕ್ಕಿತಂದು ಅಚ್ಚರಿಗೀಡುಮಾಡುವ ಟಿ.ಕೆ ದಯಾನಂದ್ರಂಥಾ ಕಥೆಗಾರರಂತೂ ಹೊಸಾ ಭರವಸೆಯನ್ನೇ ಮೂಡಿಸಿದ್ದಾರೆ. ಬೆಲ್ ಬಾಟಂಗೆ ಕಥೆ ಒದಗಿಸೋ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದ ದಯಾನಂದ್ ಇದೀಗ ಮತ್ತೊಂದು ಚೆಂದದ ಕಥೆಯೊಂದಿಗೆ ಎದುರಾಗಿದ್ದಾರೆ. ಅವರಿಗೀಗ ನೀನಾಸಂ ಸತೀಶ್ ಕೂಡಾ ಜೊತೆಯಾಗಿದ್ದಾರೆ.
ಕಥೆಗಾರ ದಯಾನಂದ್ ವರ್ಷಗಳ ಹಿಂದೆಯೇ ಪರಭಾಷಾ ಚಿತ್ರಗಳಿಗೇ ಸೆಡ್ಡು ಹೊಡೆಯುವ ಕಥೆಯೊಂದು ಹದಗೊಳ್ಳುತ್ತಿರುವ ಸುಳಿವು ನೀಡಿದ್ದರು. ಇದೀಗ ಅದಕ್ಕೆ ತಕ್ಕುದಾದ, ಯಾರೂ ನಿರೀಕ್ಷೆ ಮಾಡಿರದಂಥಾ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಹಾಜರಾಗಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭವೂ ನೆರವೇರಿದೆ. ಇದನ್ನು ಯುವ ನಿರ್ದೇಶಕ ವಿನೋದ್ ದೊಂಡಾಳೆ ನಿರ್ದೇಶನ ಮಾಡಲಿದ್ದಾರೆ. ಈ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡೇ ವರ್ಧನ್ ಹರಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ವಿಶೇಷವೆಂದರೆ ನಿರ್ಮಾಣ ಕಾರ್ಯದಲ್ಲಿ ನಾಯಕ ನೀನಾಸಂ ಸತೀಶ್ ಕೂಡಾ ಜೊತೆಯಾಗಿದ್ದಾರೆ.
ಅಶೋಕಾ ಬ್ಲೇಡ್ ಎಂಬುದು ಎಪ್ಪತ್ತರ ದಶಕದಲ್ಲಿ ನಡೆಯೋ ಕಥಾನಕ. ವರ್ತಕರು ಮತ್ತು ಕಾರ್ಮಿಕರ ನಡುವೆ ನಡೆದ ಕದನದ ಕಥಾನಕವನ್ನೊಳಗೊಂಡಿರೋ ಈ ಚಿತ್ರ ಬೇರೆ ಭಾಷೆಗಳ ಚಿತ್ರಪ್ರೇಮಿಗಳನ್ನೂ ಅವಾಕ್ಕಾಗಿಸುವಂತಿರುತ್ತೆ ಎಂಬ ನಂಬಿಕೆ ಈಗಾಗಲೇ ಮೂಡಿಕೊಂಡಿದೆ. ಇದು ನೀನಾಸಂ ಸತೀಶ್ ವೃತ್ತಿ ಬದುಕಿಗೆ ದಕ್ಕಿದ ಅಪೂರ್ವ ಅವಕಾಶ ಎಂದರೂ ತಪ್ಪೇನಿಲ್ಲ. ಯಾಕೆಂದರೆ, ಓರ್ವ ನಟನಾಗಿ ಹಲವು ಸ್ತರುಗಳನ್ನು ಹಾದುಕೊಂಡು ಬಂದಿರುವವರು ಸತೀಶ್. ಇತ್ತೀಚಿನ ವರ್ಷಗಳಲ್ಲಿ ಅವರು ಭಿನ್ನ ಪಾತ್ರಗಳನ್ನು ಧ್ಯಾನಿಸುತ್ತಿದ್ದಾರೆ. ಹೊಸಾ ಹೊಳಹುಗಳತ್ತ ಹೊರಳಿಕೊಳ್ಳುತ್ತಿದ್ದಾರೆ. ಅಂಥಾ ಧ್ಯಾನಕ್ಕೆ ಸಿಕ್ಕ ವರದಂಥಾ ಚಿತ್ರ ಅಶೋಕ ಬ್ಲೇಡ್!
ಇಂಥಾದ್ದೊಂದು ಕಥೆ ದೃಷ್ಯದ ಚೌಕಟ್ಟಿಗೆ ಒಗ್ಗಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿರುವವರು ಟಿ.ಕೆ ದಯಾನಂದ್. ಅವರೇ ಕಥೆಯ ಜೊತೆಗೆ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ದಯಾನಂದ್ ಮೂಲತಃ ಪತ್ರಕರ್ತರಾಗಿದ್ದವರು. ಆ ಮೂಲಕ ಭಿನ್ನ ಒಳನೋಟಗಳನ್ನು ದಕ್ಕಿಸಿಕೊಂಡು ಬೆಚ್ಚಿ ಬೀಳಿಸೋ ವಾಸ್ತವಗಳಿಗೆ ಅಕ್ಷರಗನ್ನಡಿ ಹಿಡಿದಿದ್ದರು. ಉದಾಸೀನಕ್ಕೊಳಗಾದ ಜೀವಗಳ ಬೆರಗಿನ ಲೋಕವನ್ನು ರಸ್ತೆ ನಕ್ಷತ್ರ ಎಂಬ ಪುಸ್ತಕದ ಮೂಲಕ ಹಿಡಿದಿಟ್ಟ ದಯಾನಂದ್, ಈಗಾಗಲೇ ತಾನೋರ್ವ ಭಿನ್ನ ಬಗೆಯ ಕಥೆಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಕೋಟಿ ಜೀವಗಳ ಸಂತೆಯಲ್ಲಿ ಕಳೆದು ಹೋಗಿ ಇತಿಹಾಸದ ಹುದುಲಲ್ಲಿ ನಗಣ್ಯವಾಗಿ ಬಿದ್ದಿರೋ ಉಸಿರಿನ ಸದ್ದುಗಳನ್ನು ಬೊಗಸೆಯಲ್ಲಿಟ್ಟುಕೊಂಡು ಬರಬಲ್ಲ ಛಾತಿ ದಯಾನಂದ್ ಅವರದ್ದು. ಬಹುಶಃ ಅದಿಲ್ಲದೇ ಹೋಗಿದ್ದರೆ ಚಿತ್ರರಂಗದಲ್ಲಿ ಈ ಪರಿಯಾಗಿ ಕಾಲೂರಿ ನಿಲ್ಲಲು, ಭರವಸೆ ಮೂಡಿಸಲು ಸಾಧ್ಯವಾಗುತ್ತಿರಲಿಲ್ಲವೇನೋ.
ಅಂತೂ ಅಶೋಕ ಬ್ಲೇಡ್ ಮೂಲಕ ಪ್ರತಿಭಾವಂತರದ್ದೊಂದು ಪಡೆ ಒಟ್ಟುಗೂಡಿದೆ. ನೀನಾಸಂ ಸತೀಶ್ ಈವರೆಗೂ ಮಾಡಿರದಂಥಾ ಪಾತ್ರಗಳಿಗೆ ಜೀವ ತುಂಬುವ ಉತ್ಸಾಹದಲ್ಲಿದ್ದಾರೆ. ಒಂದು ಕಾಲದಲ್ಲಿ ಪರಭಾಷಾ ಚಿತ್ರರಂಗದ ಮಂದಿ ಕನ್ನಡ ಚಿತ್ರರಂಗವನ್ನು ಗೇಲಿ ಮಾಡಿದಾಗ ಬಹುತೇಕರು ಒಳಗೊಳಗೇ ಕೆಂಡವಾಗುತ್ತಿದ್ದರು. ಅವರೆಲ್ಲರ ಮುಖಕ್ಕೆ ಹೊಡೆದಂಥಾ ಕಥೆಗಳು ನಮ್ಮಲ್ಲಿಯೇ ಹುಟ್ಟಬೇಕೆಂದು ಬಯಸುತ್ತಿದ್ದರು. ಆ ಬಯಕೆಯನ್ನು ಈಡೇರಿಸುವ ಭರವಸೆ ಹುಟ್ಟಿಸಿರುವ ಚಿತ್ರ ಅಶೋಕ ಬ್ಲೇಡ್. ಪಕ್ಕದ ತಮಿಳಿನಲ್ಲಿ, ನೆರೆಯ ಕೇರಳದಲ್ಲಿ ನೆಲಮೂಲದ ಕಥೆಗಳನ್ನು ಹೆಕ್ಕಿತೆಗೆದು ಚಿತ್ರವಾಗಿಸೋ ಪ್ರಯತ್ನಗಳಾಗುತ್ತಿವೆ. ಅಶೋಕಾ ಬ್ಲೇಡ್ ಮೂಲಕ ಕನ್ನಡದಲ್ಲಿಯೂ ಆ ಪರಿಪಾಠ ಶುರುವಾಗಿದೆ. ಕಾದು ಕೂರುವ ಸುಖ ಚಿತ್ರ ಪ್ರೇಮಿಗಳದ್ದು!