ಈಗ ಎಲ್ಲೆಲ್ಲಿಯೂ ಮಾಲ್ ಸಂಸ್ಕೃತಿ ಹಬ್ಬಿಕೊಂಡಿದೆ. ಆಗತಾನೇ ಕೊಯ್ದ ಹಣ್ಣು ತರಕಾರಿ ಬೀದಿ ಬದಿಯಲ್ಲಿದ್ರೆ ಜನ ಅದ್ರತ್ತ ತಿರುಗಿಯೂ ನೋಡೋದಿಲ್ಲ. ದೊಡ್ಡ ದೊಡ್ಡ ಮಾಲ್ಗಳಲ್ಲಿ ಹಣ್ಣು ತರಕಾರಿ ಕೊಂಡರೇನೋ ಅಂಥವ್ರಿಗೆಲ್ಲ ಸಮಾಧಾನ. ಕಲಾತ್ಮಕವಾಗಿ ಜೋಡಿಸಿರುವ, ನಾನಾ ವ್ಯಾಪಾರೀ ಹಕೀಕತ್ತುಗಳಿಗೇ ಜನರ ಮನಸು ಸೋಲುತ್ತೆ. ಅಂಥಾ ಹೈಫೈ ಮಳಿಗೆಗಳಿಂದ ತಂದರೇನೇ ಹಣ್ಣು ಸೇರಿದಂತೆ ಎಲ್ಲವೂ ಫ್ರೆಶ್ ಆಗಿರುತ್ತೆಂಬ ನಂಬಿಕೆ ಹಲವರಲ್ಲಿದೆ.
ಆದ್ರೆ ಈಗ ಹೊರ ಬಿದ್ದಿರೋ ಒಂದು ಸುದ್ದಿ ಅಂಥಾ ನಂಬಿಕೆಗಳನ್ನೆಲ್ಲ ಶುದ್ಧ ಭ್ರಮೆಯನ್ನಾಗಿಸಿದೆ. ಆರೋಗ್ಯ ಕಾಳಜಿ ಹೊಂದಿರುವವ ಪಾಲಿನ ಮೆಚ್ಚಿನ ಹಣ್ಣು ಆಪಲ್. ದಿನಾ ಒಂದು ಸೇಬು ತಿಂದರೆ ಅನಾರೋಗ್ಯದಿಂದ ದೂರ ಇರಬಹುದೆಂಬ ನಾಣ್ನುಡಿಯೇ ಇದೆ. ಅದರಲ್ಲಿ ಸತ್ಯವಿರೋದೂ ಹೌದು. ಪ್ರತಿಯೊಂದನ್ನೂ ಲಾಭಕ್ಕೆ ಬಳಸಿಕೊಳ್ಳೋ ವ್ಯಾಪಾರಿ ಬುದ್ಧಿ ಸೇಬನ್ನು ಬಿಡೋದುಂಟೇ? ಆದ್ದರಿಂದಲೇ ಆಪಲ್ ವ್ಯಾಪಾರಿಗಳು ತಾಜಾತನದ ವಿಚಾರದಲ್ಲಿ ಗ್ರಾಹಕರನ್ನು ಸಲೀಸಾಗಿ ಯಾಮಾರಿಸುತ್ತಿದ್ದಾರಂತೆ.
ಸೇಬು ಸರ್ವ ಋತುಗಳಲ್ಲಿಯೂ ದುಬಾರಿ ಬೆಲೆ ಕಾಯ್ದಿಟ್ಟುಕೊಂಡಿರೋ ಹಣ್ಣು. ಅದೆಷ್ಟೇ ತಾಜಾ ಹಣ್ಣನ್ನ ತಂದ್ರೂ ದಿನ ಕಳೆಯೋದರೊಳಗದು ಮುರುಟಿಕೊಳ್ಳುತ್ತೆ. ಫ್ರಿಡ್ಜಲ್ಲಿಟ್ಟು ತಿನ್ನೋದೂ ಕೂಡಾ ಅಪಾಯಕಾರಿಯೇ ಅನ್ನೋ ನಂಬಿಕೆ ಹಲವರಲ್ಲಿದೆ. ಆದ್ರೆ ಮಾಲ್ಗಳಿಂದ ನೀವು ಕೊಂಡು ತರೋ ಸೇಬು ಒಂದು ವರ್ಷದಷ್ಟು ಹಳತಾಗಿರುತ್ತೆಂಬ ಸತ್ಯವನ್ನ ವರದಿಯೊಂದು ಬಯಲು ಮಾಡಿಬಿಟ್ಟಿದೆ.
ವರ್ಷದ ಕೊನೇಯ ಹೊತ್ತಿಗೆ ಕುಯಿಲು ಮಾಡಿದ ಆಪಲ್ಗಳನ್ನ ವ್ಯಾಪಾರಿಗಳು ಖರೀದಿಸ್ತಾರೆ. ನಂತರ ಅದನ್ನ ಹಲವಾರು ಪ್ರಕ್ರಿಯೆಗಳಿಗೊಳಪಡಿಸಿ ಕೋಲ್ಡ್ ಸ್ಟೋರೇಜಿನಲ್ಲಿಡ್ತಾರೆ. ಆ ನಂತರದಲ್ಲಿ ಹೆಚ್ಚು ಕಾಸು ಬರೋ ಕಾಲ ನೋಡಿಕೊಂಡು ಮಾರುಕಟ್ಟೆಗೆ ಬಿಡ್ತಾರೆ. ನೀವು ಒಂದಲ್ಲ ಒಂದು ಸೀಜನ್ನಿನಲ್ಲಿ ಸಾಕಷ್ಟು ಹಳೇ ಆಪಲ್ ಅನ್ನು ತಿನ್ನದಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಮಾಲ್ಗಳಲ್ಲಿ ಹೊಳೆಯುತ್ತಾ ಕಣ್ಸೆಳೆಯೋ ಆಪಲ್ಗಳಲ್ಲಿ ಬಹುತೇಕವುಗಳು ಇಂಥಾ ಕೋಲ್ಡ್ ಸ್ಟೋರೇಜಿನ ಕೂಸುಗಳೇ. ಅವುಗಳನ್ನು ಕಿತ್ತು ಕಡಿಮೆಯೆಂದರೂ ಒಂದು ವರ್ಷ ಕಳೆದಿರುತ್ತೆ!