ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಬಾಲ ನಟಿಯರಾಗಿ ನಟಿಸಿದ್ದವರನೇಕರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮತ್ತೆ ಕೆಲವರು ಪತ್ತೆಯೇ ಇಲ್ಲದಂತೆ ಎಲ್ಲೆಲ್ಲೋ ಕಳೆದು ಹೋಗಿದ್ದಾರೆ. ಹಾಗೆ ಬಾಲ ನಟಿಯಾಗಿ ಎಂಟ್ರಿ ಕೊಟ್ಟು, ಚಾಲ್ತಿಯಲ್ಲಿರುವವರ ಪೈಕಿ ತಮಿಳಿನಲ್ಲಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಅನಿಕಾ ಸುರೇಂದ್ರನ್ ಕೂಡಾ ಸೇರಿಕೊಳ್ಳುತ್ತಾಳೆ. ಬಹುಶಃ ಅನಿಕಾ ಸುರೇಂದ್ರನ್ ಅಂದರೆ ಬೇರೆ ಭಾಷೆಯ ಮಂದಿಗೆ ಗುರುತು ಹತ್ತುವುದು ತುಸು ಕಷ್ಟವೇನೋ… ಆದರೆ, ಅಜಿತ್ ನಟನೆಯ ವಿಶ್ವಾಸಂ ಚಿತ್ರದಲ್ಲಿ ಅವರ ಮಗಳಾಗಿ ನಟಿಸಿದ್ದ ಪುಟ್ಟ ಹುಡುಗಿ ಅಂದರೆ ಎಲ್ಲರಿಗೂ ಗುರುತು ಹತ್ತೀತು!
ಈ ಹುಡುಗಿಯ ಬಗ್ಗೆ ಈಗ ಪ್ರಸ್ತಾಪಿಸುತ್ತಿರೋದಕ್ಕೂ ಕಾರಣವಿದೆ. ಅನಿಕಾ ಸುರೇಂದ್ರನ್ ಈಗ ದೊಡ್ಡವಳಾಗಿದ್ದಾಳೆ. ಸಿನಿಮಾ ನಾಯಕಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಓ ಮೈ ಡಾರ್ಲಿಂಗ್ ಎಂಬ ಪ್ರೇಮ ಕಥೆಯಾಧಾರಿತ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಈ ಮೊದಲ ಚಿತ್ರದಲ್ಲಿಯೇ ಮೈ ಚಳಿ ಬಿಟ್ಟು ಕಿಸ್ಸಿಂಗ್ ಸೀನ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿದ್ದಾಳೆ. ಈ ಕಿಸ್ಸಿಂಗ್ ಸೀನ್ ಬಗ್ಗೆ ಪಕ್ಕಾ ಬೋಲ್ಡ್ ಆಗಿ ಮಾತಾಡುವ ಮೂಲಕ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದಾಳೆ!
ಭಾಸ್ಕರ್ ದಿ ರಾಸ್ಕಲ್ ಚಿತ್ರದಲ್ಲಿ ನಯನತಾರಾ ಮಗಳಾಗಿಯೂ ನಟಿಸಿದ್ದ ಅನಿಕಾ ಪ್ರತಿಭಾವಂತ ಕಲಾವಿದೆ. ಈವರೆಗೂ ಬಾಲ ನಟಿಯಾಗಿ ನಿರ್ವಹಿಸಿರುವ ಪಾತ್ರಗಳ ಮೂಲಕವೇ ಅದು ಸಾಬೀತಾಗಿದೆ. ಇಂಥಾ ಹುಡುಗಿ ಒಂದು ಸಿನಿಮಾ ನಾಯಕಿಯಾಗುತ್ತಾಳೆಂದರೆ ಯಾರಿಗಾದರೂ ಆ ಬಗ್ಗೆ ಕುತೂಹಲ ಮೂಡಿಕೊಳ್ಳುತ್ತದೆ. ಈ ಸಿನಿಮಾ ವಿಚಾರದಲ್ಲಿ ಹೇಳೋದಾದರೆ, ಕಥೆಯಲ್ಲಿಯೇ ರೊಮ್ಯಾಂಟಿಕ್ ಟಚ್ ಇದೆಯಂತೆ. ಅದರಲ್ಲಿರುವ ಕಿಸ್ಸಿಂಗ್ ಸೀನ್ ಬಗ್ಗೆ ಮೊದಲು ನಿರ್ದೇಶಕರು ಹೇಳಿದಾಗಲೂ ಆಕೆಗೆ ಏನೂ ಅನ್ನಿಸಿರಲಿಲ್ಲವಂತೆ. ಚಿತ್ರೀಕರಣದಲ್ಲಿಯೂ ಬಿಡುಬೀಸಾಗಿ ನಟಿಸಿದ್ದ ಆಕೆಗೆ ಅದೊಂದು ಪಾತ್ರವಷ್ಟೇ. ಆದ್ದರಿಂದ ಅಂಥಾ ಸೀನುಗಳ ಬಗ್ಗೆ ವಿಶೇಷವಾಗಿ ಏನೂ ಅನ್ನಿಸಲು ಸಾಧ್ಯವಿಲ್ಲ ಅಂದಿದ್ದಾಳೆ ಅನಿಕಾ!