ಕಿರುತೆರೆಯಲ್ಲಿ ಒಂದಷ್ಟು ಮಿಂಚಿದ ಬಳಿಕ ನಟ ನಟಿಯರು ಹಿರಿತೆರೆಯತ್ತ ಸಾಗಿ ಬರುವುದೇನು ಅಚ್ಚರಿದಾಯಕ ವಿದ್ಯಮಾನವಲ್ಲ. ಈಗಾಗಲೇ ಹಾಗೆ ಬಂದ ಒಂದಷ್ಟು ಮಂದಿ ಹಿರಿತೆರೆಯಲ್ಲಿಯೂ ಮಿಂಚಿ, ನೆಲೆ ಕಂಡುಕೊಂಡಿದ್ದಾರೆ. ಮತ್ತೊಂದಷ್ಟು ಜನ ಮುಕ್ಕರಿದರೂ ಯಶಸ್ಸನ್ನು ದಕ್ಕಿಸಿಕೊಳ್ಳಲಾಗದೆ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಮತ್ತೂ ಒಂದಷ್ಟು ಮಂದಿ ಅಲ್ಲಿಯೂ ಸಲ್ಲದೆ, ಎಲ್ಲಿಯೂ ನೆಲೆ ನಿಲ್ಲದೆ ಅಂತರ್ ಪಿಶಾಚಿಗಳಂತೆ ಅಂಡಲೆಯುತ್ತಿದ್ದಾರೆ. ಇಂಥಾ ವಾಸ್ತವಗಳಾಚೆಗೆ, ಸಿನಿಮಾ ರಂಗಕ್ಕೆ ಕಿರುತೆರೆ ಲೋಕದಿಂದ ಆಗಮಿಸುವವರು ಸಂಖ್ಯೆಗೇನೂ ಕೊರತೆಯಾಗಿಲ್ಲ. ಇದೀಗ ಸುಂದರಿ ಅಂತೊಂದು ಧಾರಾವಾಹಿಯ ಮೂಲಕ ಹೆಸರು ಸಂಪಾದಿಸಿದ್ದ ಅಮೂಲ್ಯಾ ಗೌಡರ ಸರದಿ!
ಈಗಾಗಲೇ ಒನ್ ವೇ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದ ಕಿರಣ್ ರಾಜ್ ಇದೀಗ ಕುರುಡು ಕಾಂಚಾಣ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗೊಂದಷ್ಟು ದಿನಗಳಿಂದ ಸುದ್ದಿಯಲ್ಲಿರುವ ಈ ಚಿತ್ರಕ್ಕೆ ಅಮೂಲ್ಯ ಗೌಡ ಎಂಟ್ರಿ ಕೊಟ್ಟಿದ್ದಾರೆ. ಆಕೆ ನಾಯಕಿಯಾಗಿ ನಿಕ್ಕಿಯಾಗಿದ್ದಾರೆ. ಪ್ರದೀಪ್ ವರ್ಮಾ ನಿರ್ದೇಶನದ ಈ ಚಿತ್ರ ಓಟಿಟಿ ಪ್ಲಾಟ್ಫಾರ್ಮ್ ಅನ್ನೇ ದೃಷ್ಟಿಯಲ್ಲಿಟ್ಟುಕೊಂಡು ತಯಾರಾಗುತ್ತಿದೆ. ಅದು ಏಕಕಾಲದಲ್ಲಿಯೇ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಬಿಡುಗಡೆಗೊಳ್ಳಲಿದೆಯಂತೆ. ಇಲ್ಲಿ ಚೆಂದದ ಪಾತ್ರವೊಂದು ಸಿಕ್ಕಿದ ಖುಷಿ ಅಮೂಲ್ಯಾರಲ್ಲಿದೆ.
ಸುಂದರಿ ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತವಾಗಿದ್ದ ಅಮೂಲ್ಯ, ಆ ನಂತರ ಪ್ರಸಿದ್ದಿ ಪಡೆದುಕೊಂಡಿದ್ದ ಕನ್ನಡತಿ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದರು. ನೆಗೆಟೀವ್ ರೋಲ್ ಒಂದರ ಮೂಲಕ ಮತ್ತೆ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದರು. ಅದಾದ ಬಳಿಕ ಕಿರುತೆರೆಯಲ್ಲಿ ಬ್ಯುಸಿಯಾಗುವ ಸಾಧ್ಯತೆಗಳಿದ್ದರೂ ಈ ಹುಡುಗಿಯ ಪ್ರಧಾನ ಆದ್ಯತೆಯಾಗಿದ್ದದ್ದು ಚಿತ್ರರಂಗ. ನಾಯಕಿಯಾಗಬೇಕೆಂಬ ಅದಮ್ಯ ಕನಸಿಟ್ಟುಕೊಂಡಿದ್ದ ಅಮೂಲ್ಯ ಒಂದಷ್ಟು ಕಾಲದಿಂದ ಅದಕ್ಕಾಗಿ ಪ್ರಯತ್ನಿಸಿದ್ದರಂತೆ. ಕಡೆಗೂ ಕುರು ಕಾಂಚಾಣದ ಮೂಲಕ ಆಕೆಯ ಕನಸು ಕೈಗೂಡಿದೆ!