ನಮಗೆಗೆಲ್ಲ ಆಂಬ್ಯುಲೆನ್ಸ್ ಸೇವೆ ತುಂಬಾನೇ ಚಿರಪರಿಚಿತ. ಕೆಲವಾರು ಆರೋಗ್ಯ ಸಮಸ್ಯೆಗಳು ಚಿಕಿತ್ಸೆ ತಡವಾಗಿಯೇ ಸಾವಿನಂಚಿಗೆ ತಳ್ಳುತ್ತವೆ. ಹಾಗೆ ಉಸಿರು ಚೆಲ್ಲುವ ಅಪಾಯದಿಂದ ದಿನನಿತ್ಯವೂ ಅದೆಷ್ಟೋ ಜೀವಗಳನ್ನ ಆಂಬ್ಯುಲೆನ್ಸ್ ಸೇವೆ ಪಾರುಗಾಣಿಸುತ್ತಿದೆ. ಆದರೆ ನಮ್ಮಿಂದಲೇ ಪ್ರತೀ ನಿತ್ಯವೂ ಘಾಸಿಗೊಳ್ಳುವ, ನಮ್ಮನ್ನು ಬದುಕಿಸಿಯೂ ತಾವು ಸಾವು ಕಾಣುತ್ತಿರುವ ಮರಗಳ ರಕ್ಷಣೆಯತ್ತ ಮಾತ್ರ ಅಷ್ಟಾಗಿ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಂದು ವೇಳೆ ಯಾರಾದರೂ ಪರಿಸರ ಸಂರಕ್ಷಣೆಯ ಬಗ್ಗೆ ಮಾತಾಡಿದರೂ ಅದು ಒಂದೆರಡು ದಿನ, ಕೆಲವೇ ಕೆಲ ಸಂದರ್ಭಗಳಿಗೆ ಮಾತ್ರವೇ ಸೀಮಿತ ಎಂಬಂತಾಗಿದೆ. ಆದರೆ ದೆಹಲಿ ಮಂದಿಗೆ ಮಾತ್ರ ಪೂರ್ತಿ ಕೆಟ್ಟ ಮೇಲೆ ಒಂಚೂರು ಬುದ್ಧಿ ಬಂದಂತಾಗಿದೆ!
ದೇಹಲಿ ಎಂಬುದು ಎಷ್ಟು ಪುರಾತನ ಸಿಟಿ ಎಂಬ ಹೆಗ್ಗಳಿಕೆ ಹೊಂದಿದೆಯೋ, ಅಷ್ಟೇ ಮಾಲಿನ್ಯದ ನಗರಿ ಎಂಬ ಕಪ್ಪು ಚುಕ್ಕೆಯನ್ನೂ ತನ್ನದಾಗಿಸಿಕೊಂಡಿದೆ. ಅದಕ್ಕೆ ಕಾರಣವಾಗಿರೋದು ಮರಗಳ ನಿರಂತರ ಹನನ ಎಂಬ ಜ್ಞಾನೋದಯವಾದದ್ದು ಮಾತ್ರ ತುಂಬಾನೇ ತಡವಾಗಿ. ವಾತಾವರಣವೆಲ್ಲ ಕಲುಶಿತಗೊಂಡು ಜನ ಉಸಿರಾಡೋದೇ ಕಷ್ಟ ಎಂಬಂಥ ಪರಿಸ್ಥಿತಿ ಬಂದಾಗ ಅಲ್ಲಿನ ಸರ್ಕಾರ ಎಚ್ಚೆತ್ತುಕೊಂಡಿತ್ತು. ಅಳಿದುಳಿದ ಗಿಡ ಮರಗಳನ್ನಾದರೂ ಉಳಿಸೋ ನಿರ್ಧಾರಕ್ಕೆ ಬಂದಿದ್ದ ಸರ್ಕಾರ 2009ರಲ್ಲಿ ಮರಗಳ ರಕ್ಷಣೆಗೆಂದೇ ಪ್ರತ್ಯೇಕ ಆಂಬ್ಯುಲೆನ್ಸ್ ಸೇವೆಯನ್ನ ಶುರು ಮಾಡಿಕೊಂಡಿತ್ತು.
ದೆಹಲಿಯಲ್ಲಿ ಎಲ್ಲಿಯೇ ಮರಗಳಿಗೆ ತೊಂದರೆಯಾಗುತ್ತಿರೋದು, ಅವು ಅನಾರೋಗ್ಯಕ್ಕೀಡಾಗುತ್ತಿರೋದು ಗೊತ್ತಾದರೆ ತಕ್ಷಣವೇ ಈ ಆಂಬ್ಯುಲೆನ್ಸ್ ಅತ್ತ ಧಾವಿಸುತ್ತೆ. ಅದು ದೆಹಲಿಯ ಮಂದಿ ತಾವೇ ತಾವಾಗಿ ತಂದುಕೊಂಡಿರೋ ಸ್ಥಿತಿ. ಇನ್ನೂ ಮೈ ಮರೆತರೆ, ಮೆರೆದಾಡಿದರೆ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಬೆಂಗಳೂರಿನಲ್ಲಿಯೂ ಇಂಥಾದ್ದೊಂದು ಆಂಬ್ಯುಲೆನ್ಸ್ ಸೇವೆ ಆರಂಭಿಸುವ ಸ್ಥಿತಿ ಬಂದೊದಗುತ್ತೆ. ಯಾಕೆಂದರೆ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿ ನಿತ್ಯವೂ ಅಲ್ಲಿ ನೂರಾರು ಮರಗಳನ್ನು ಧರೆಗುರುಳಿಸಲಾಗುತ್ತಿದೆ. ಅದು ಹೀಗೆಯೇ ಮುಂದುವರೆದರೆ ಬೆಂಗಳೂರೂ ಕೂಡಾ ನರಕ ಸೃಷ್ಟಿಸಿಕೊಳ್ಳುವ ದುಃಸ್ಥಿತಿಗಿಳಿಯುತ್ತೆ.