ಪ್ರೇಮ ಕಥಾನಕವೆಂಬುದು ಅದಾಗ ತಾನೇ ಅಚಾನಕ್ಕಾಗಿ ಎದೆಯ ಮಿದುವಿಗೆ ತಾಕಿದ ಪರಾಗವಿದ್ದಂತೆ. ಅದೆಷ್ಟು ಸಲ ಅದರಿಂದ ಸೋಕಿಸಿಕೊಂಡರೂ ಆ ಅನುಭೂತಿ ತಾಜಾ ತಾಜಾ. ಸಿನಿಮಾ ವಿಚಾರದಲ್ಲಂತೂ ಈ ಮಾತು ಸಾರ್ವಕಾಲಿಕ ಸತ್ಯ. ಪ್ರೀತಿ ಎಂಬುದು ಅಂಥಾದ್ದೊಂದು ಮಾಯೆ ಅಲ್ಲದೇ ಹೋಗಿದ್ದರೆ, ಬಹುಶಃ ಅದನ್ನು ಕೇಂದ್ರೀಕರಿಸುವಂಥಾ ಕಥಾನಕಗಳು ಅದ್ಯಾವತ್ತೋ ಬ್ರೇಕ್ ತೆಗೆದುಕೊಳ್ಳುತ್ತಿದ್ದವು. ಆ ಮಾಯೆಯ ಮುಂದುವರೆದ ಭಾಗವೆಂಬಂತೆ ಒಂದು ಸಿನಿಮಾ ತಯಾರಾಗಿ ನಿಂತಿದೆ. `ಅಮರ ಪ್ರೇಮಿ ಅರುಣ್’ ಎಂಬ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ಟರ ನೆರಳೂ ಬಿದ್ದಿದೆ. ಯಾಕೆಂದರೆ, ಅವರ ಗರಡಿಯಲ್ಲಿ ಪಳಗಿಕೊಂಡಿರುವ ಪ್ರವೀಣ್ ಕುಮಾರ್ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಶೀರ್ಷಿಕೆ ಕೇಳಿದರೇನೇ ಇದೊಂದು ಪ್ರೇಮ ಕಥೆಯನ್ನೊಳಗೊಂಡಿರೋ ಚಿತ್ರವೆಂಬುದು ಖಾತರಿಯಾಗುತ್ತೆ. ಒಂದಷ್ಟು ದಿಕ್ಕಿನಲ್ಲಿ ಆಲೋಚಿಸಿದರೆ, ಸಿದ್ಧಸೂತ್ರದ ಒಂದಷ್ಟು ಕಲ್ಪನೆಗಳೂ ಮೂಡಿಕೊಳ್ಳುತ್ತವೆ. ಹಾಗಂತ, ಈ ಸಿನಿಮಾವನ್ನು ಅಂಥಾ ಚೌಕಟ್ಟಿನಲ್ಲಿ ಕಟ್ಟಿ ಹಾಕುವಂತಿಲ್ಲ. ಯಾಕೆಂದರೆ, ಒಂದಿಡೀ ಕಥೆಯನ್ನು ಹೊಸತನದೊಂದಿಗೆ, ಹಳ್ಳಿಯ ಬ್ಯಾಕ್ಡ್ರಾಪಿನಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆಯಂತೆ. ಬಿಸಿಲಿನ ಜಳಕ ಮಾಡಿಕೊಂಡಂತಿರೋ ಬಳ್ಳಾರಿಯಲ್ಲಿ ನಡೆಯೋ ಪ್ರೇಮ ಕಥೆ ಎಂದಾಕ್ಷಣ, ಅದರ ಬಗ್ಗೆ ಮತ್ತೊಂದಷ್ಟು ಆಯಾಮಗಳಲ್ಲಿ ಆಸಕ್ತಿ ಹೊರಳಿಕೊಳ್ಳೋದು ಸಹಜ. ಅದೆಲ್ಲವನ್ನೂ ತಣಿಸುವಂತೆ, ಯಾರ ಕಲ್ಪನೆಗೂ ನಿಲುಕದಂತೆ ಈ ಸಿನಿಮಾವನ್ನು ಕಟ್ಟಿಕೊಟ್ಟಿರುವ ಗಾಢ ತೃಪ್ತಿಯೊಂದು ನಿರ್ದೇಶಕರ ಮಾತುಗಳಲ್ಲಿ ಹಣಕಿ ಹಾಕುತ್ತದೆ.
ಮೂಲತಃ ಬಳ್ಳಾರಿಯವರೇ ಆದ, ಇಂಜಿನಿಯರಿಂಗ್ ಪದವೀಧರ ಪ್ರವೀಣ್ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕೂರ್ಮಾವತಾರ ಚಿತ್ರದ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ, ಕನಸಿನ ಹಾದಿಗೆ ಮೊದಲ ಹೆಜ್ಜೆಯನ್ನಿಟ್ಟವರು. ಆ ನಂತರದಲ್ಲಿ ಒಂದಷ್ಟು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಪಳಗಿಕೊಂಡ ಪ್ರವೀಣ್, ಆ ಬಳಿಕ ಯೋಗರಾಜ್ ಭಟ್ ಗರಡಿ ಸೇರಿಕೊಂಡಿದ್ದರು. ಅಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ, ದನ ಕಾಯೋನು ಮತ್ತು ಮುಗುಳುನಗೆಯಂಥಾ ಸಿನಿಮಾಗಳ ಭಾಗವಾಗಿದ್ದ ಅವರು, ಸಂಭಾಷಣೆಕಾರರಾಗಿಯೂ ತಮ್ಮೊಳಗಿನ ಪ್ರತಿಭೆಯನ್ನು ಒರೆಗೆ ಹಚ್ಚಲಾರಂಭಿಸಿದ್ದರು. ಅಳಿದು ಉಳಿದವರು, ನಿನ್ನ ಸನಿಹಕೆ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದು ಸೈ ಅನ್ನಿಸಿಕೊಂಡಿದ್ದರು.
ಹೀಗೆ ತಮ್ಮ ಆಸಕ್ತಿ ವಿಭಾಗಗಳಲ್ಲಿ ಧ್ಯಾನಸ್ಥರಾಗಿ ತೊಡಗಿಸಿಕೊಳ್ಳುತ್ತಾ, ಸ್ವತಂತ್ರ ನಿರ್ದೇಶಕರಾಗುವ ಪ್ರಯತ್ನವನ್ನೂ ಚಾಲ್ತಿಯಲ್ಲಿಟ್ಟಿದ್ದವರು ಪ್ರವೀಣ್. ಅದರ ಫಲವಾಗಿಯೇ ಇದೀಗ ಅಮರ ಪ್ರೇಮಿ ಅರುಣ್ ಎಂಬ ಸಿನಿಮಾ ರೂಪುಗೊಳ್ಳುತ್ತಿದೆ. ಇದರಲ್ಲಿ ಸಂಗೀತಕ್ಕೂ ಹೆಚ್ಚು ಒತ್ತು ಕೊಡಲಾಗಿದೆ. ಯೋಗರಾಜ್ ಭಟ್ ಎರಡು ಹಾಗೂ ಜಯಂತ್ ಕಾಯ್ಕಿಣಿ ಒಂದು ಹಾಡು ಬರೆದಿದ್ದಾರೆ. ಮತ್ತೊಂದು ಹಾಡಿಗೆ ನಿರ್ದೇಶಕರೇ ಸಾಹಿತ್ಯ ಒದಗಿಸಿದ್ದಾರೆ. ಹರಿ ಶರ್ವ ಮತ್ತು ದೀಪಕಾ ಆರಾಧ್ಯ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ವಿಶೇಷವೆಂದರೆ ಮಂಜಮ್ಮ ಜೋಗತಿ ಮಹತ್ವದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಹುಲುಗಪ್ಪ ಕಟ್ಟೀಮನಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧರ್ಮಣ್ಣ ಕಡೂರು ಮತ್ತು ಭೂಮಿಕಾ ಭಟ್ ಜೋಡಿಯಾಗಿ ನಟಿಸಿದ್ದಾರೆ. ಒಲವು ಸಿನಿಮಾ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿಅನೇಕ ಅಚ್ಚರಿದಾಯಕ ಪಾತ್ರಗಳಿವೆ. ಪ್ರೇಮದೊಂದಿಗೆ ಕೌಟುಂಬಿಕ ಮೌಲ್ಯವೂ ಸೇರಿಕೊಂಡಿವೆಯಂತೆ.