ಗಂಗೂಬಾಯಿ ಕಾಠಿವಾಡಿಯ ಹಿಂದಿದೆ ಸೋನಿ ನೆರಳು!
ಈ ಚಿತ್ರ ಆಲಿಯಾ ಭಟ್ ವೃತ್ತಿ ಬದುಕಿನ ದಿಕ್ಕು ದೆಸೆಗಳನ್ನೇ ಬದಲಿಸುತ್ತೆ… ಹಾಗಂತ ಬಾಲಿವುಡ್ ಪಂಡಿತರೆಲ್ಲ ಆರಂಭ ಕಾಲದಲ್ಲಿಯೇ ಭವಿಷ್ಯ ನುಡಿದಿದ್ದರು. ಅಂಥಾದ್ದೊಂದು ಸಂಚಲನಕ್ಕೆ ಕಾರಣವಾಗಿದ್ದದ್ದು ಗಂಗೂಬಾಯಿ ಕಾಠಿವಾಡಿ ಎಂಬ ಚಿತ್ರ. ಆ ಚಿತ್ರ ತಿಂಗಳ ಹಿಂದೆಯೇ ಬಿಡುಗಡೆಯಾಗಿದೆ. ಅದರಲ್ಲಿ ರೆಡ್ಲೈಟ್ ಏರಿಯಾದ ವೇಶ್ಯೆಯ ಪಾತ್ರವನ್ನು ಮೈಚಳಿ ಬಿಟ್ಟು ಆವಾಹಿಸಿಕೊಂಡಿದ್ದಾಕೆ ಆಲಿಯಾ ಭಟ್. ಮುಖ್ಯ ನಾಯಕಿಯಾಗಿ ಮಿಂಚುತ್ತಿದ್ದ ಆಲಿಯಾ ಇಂಥಾದ್ದೊಂದು ಪಾತ್ರವನ್ನು ಒಪ್ಪಿಕೊಂಡಿದ್ದೇ ಅಚ್ಚರಿಗೆ ಕಾರಣವಾಗಿತ್ತು. ಆ ರೀತಿಯದ್ದೊಂದು ಪಾತ್ರದ ಮೂಲಕವೇ ಆಲಿಯಾ ಪ್ರೇಕ್ಷಕರ ಪ್ರೀತಿ ಗೆದ್ದಿದ್ದಾಳೆ. ಆಕೆಗೀಗ ಮೆಚ್ಚುಗೆಯ ಮಹಾಪೂರವೇ ಮುತ್ತಿಕೊಳ್ಳುತ್ತಿದೆ. ಇದೀಗ ಗಂಗೂಬಾಯಿ ಕಾಠಿವಾಡಿಯ ಭೂಮಿಕೆಯಲ್ಲಿ ಮತ್ತೊಂದು ಇಂಟರೆಸ್ಟಿಂಗ್ ಸಂಗತಿ ಸದ್ದು ಮಾಡುತ್ತಿದೆ!
ಆಲಿಯಾ ಭಟ್ ವೇಶ್ಯೆಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶ ಕಂಡಿದೆ. ಅದರ ಬೆನ್ನಲ್ಲಿಯೇ ಈ ಚಿತ್ರದಲ್ಲಿನ ಆಲಿಯಾ ಲುಕ್ ಬಗ್ಗೆ ಚರ್ಚೆಗಳು ಶುರುವಾಗಿವೆ. ಕೆಲ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಲಿಯಾ ಭಟ್ ಗಂಗೂಬಾಯಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಗೆಟಪ್ಪು ಥೇಟು ಆಕೆಯ ಅಮ್ಮ ಸೋನಿ ರಜ್ದಾನ್ರನ್ನು ಹೋಲುತ್ತದೆಯೆಂಬುದು ಆ ಚರ್ಚೆಯ ಸಾರಾಂಶ. ಸಾಕಷ್ಟು ಜನರಿಗೆ ಆಲಿಯಾಳ ಅಮ್ಮನ ಪರಿಚಯವಿಲ್ಲ. ಆದರೆ ಆಕೆಯೂ ಒಂದು ಕಾಲದಲ್ಲಿ ಪ್ರಸಿದ್ಧ ನಟಿಯಾಗಿದ್ದವರು.
ಸೋನಿ ರಜ್ದಾನ್ ಮಹೇಶ್ ಭಟ್ ಅವರನ್ನು ಮದುವೆಯಾದದ್ದು ೧೯೮೬ರಲ್ಲಿ. ಮೊದಲ ಪತ್ನಿಗೆ ವಿಚ್ಛೇದನ ನೀಡದೆಯೇ ಮುಸ್ಲಿಂ ಪದ್ಧತಿಯಲ್ಲಿ ಮಹೇಶ್ ಸೋನಿಯನ್ನು ವರಿಸಿದ್ದರು. ಆದರೆ ಎಂಭತ್ತರ ದಶಕದ ಆರಂಭದಿಂದಲೇ ಸೋನಿ ನಟಿಯಾಗಿ, ನಿರ್ದೇಶಕಿಯಾಗಿ ಹೆಸರು ಮಾಡಿದ್ದರು. ಈಗ ಮಗಳು ಆಲಿಯಾ ಥೇಟು ಅಮ್ಮನಂತೆಯೇ ಕಾಣಿಸುತ್ತಾರೆಂಬ ಮಾತು ಹೊಮ್ಮಲು ಕಾರಣವಾಗಿರೋದು ೧೯೮೩ರಲ್ಲಿ ಸೋನಿ ನಾಯಕಿಯಾಗಿ ನಟಿಸಿದ್ದ ಮಂಡಿ ಎಂಬ ಚಿತ್ರ. ವೇಶ್ಯಾವಾಟಿಕೆಯ ಸುತ್ತ ಹಬ್ಬಿಕೊಂಡಿದ್ದ ಕಥಾನಕವನ್ನೊಳಗೊಂಡಿದ್ದ ಆ ಚಿತ್ರದಲ್ಲಿ ಸೋನಿ ವೇಶ್ಯೆಯಾಗಿ ನಟಿಸಿದ್ದರು.
ಆ ಚಿತ್ರದಲ್ಲಿ ಸೋನಿ ಅಂದು ಕಾಣಿಸಿಕೊಂಡಿದ್ದ ಪಾತ್ರಕ್ಕೂ, ಇದೀಗ ಆಲಿಯಾ ಗಂಗೂಬಾಯಿ ಕಾಠಿವಾಡಿ ಚಿತ್ರದಲ್ಲಿ ನಿರ್ವಹಿಸಿರುವ ಪಾತ್ರಕ್ಕೂ ಸಾಮ್ಯತೆಯಿದೆ. ಆ ಎರಡು ಫೋಟೋಗಳನ್ನು ಒಟ್ಟಿಗಿಟ್ಟು ನೋಡಿದರೆ ನಿಜಕ್ಕೂ ಇಬ್ಬರ ಲುಕ್ಕೂ ಒಂದೇ ಥರ ಕಾಣಿಸುತ್ತದೆ. ಇದೀಗ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿರೋದೂ ಕೂಡಾ ಅದೆ ಅಂಶ. ಎಂಭತ್ತರ ದಶಕದಲ್ಲಿ ಅಂಥಾದ್ದೊಂದು ಕ್ರಾಂತಿಕಾರಕ ಪಾತ್ರ ಮಾಡಿದ್ದ ಸೋನಿ ಮೆಚ್ಚುಗೆ ಗಳಿಸಿಕೊಂಡಿದ್ದರು. ಇದೀಗ ಮಗಳು ಆಲಿಯಾ ಕೂಡಾ ವೇಶ್ಯೆಯ ಪಾತ್ರದಲ್ಲಿ ಮನದುಂಬಿ ನಟಿಸಿ ಸೈ ಅನ್ನಿಸಿಕೊಂಡಿದ್ದಾಳೆ.