ನಮ್ಮ ದೇಶದಲ್ಲಿ ಆನ್ಲೈನ್ ಶಾಪಿಂಗ್ ಮಾಡಿದವರನ್ನು ವೆರೈಟಿ ವೆರೈಟಿಯಾಗಿ ವಂಚಿಸಲಾಗುತ್ತಿದೆ. ಮೊಬೈಲ್ ಕೊಂಡವರಿಗೆ ಕಲ್ಲು ಕಳಿಸಿ, ದುಬಾರಿ ಬೆಲೆಯ ಸೀರೆಯ ಜಾಗದಲ್ಲಿ ಲೋ ಕ್ವಾಲಿಟಿ ಸೀರೆ ಇಟ್ಟು ಏನೇನೋ ದೋಖಾ ಚಾಲ್ತಿಯಲ್ಲಿದೆ. ಆದರೆ ಇಲ್ಲಿನ ಜನ ಛೇ ಹೀಗಾಯ್ತಲ್ಲಾ ಅಂತ ಮರುಗಿ, ನಾಲಕ್ಕು ಮಂದಿಯ ಮುಂದೆ ಗೋಳು ತೋಡಿಕೊಂಡು ಮತ್ತೆ ಕುಯ್ಯಿಸಿಕೊಳ್ಳಲು ರೆಡಿಯಾಗ್ತಾರೆ. ಇನ್ನು ಆನ್ಲೈನ್ ಸೇರಿದಂತೆ ಯಾವ ಥರದ ಮಾರುಕಟ್ಟೆಯ ಮಂದಿಯೂ ತಮ್ಮ ವಿರುದ್ಧ ಗ್ರಾಹಕರು ಕೊಡೋ ದೂರಿಗೆ ಕ್ಯಾರೇ ಅನ್ನೋದಿಲ್ಲ.ಆದರೆ ಚೀನಾದ ಏರಿಯಾವೊಂದರಲ್ಲಿ ಪ್ರಖ್ಯಾತ ಆನ್ಲೈನ್ ಶಾಪಿಂಗ್ ಸಂಸ್ಥೆಯಾದ ಆಲಿಬಾಬಾದ ಬ್ರ್ಯಾಂಚ್ ಓನರ್ ಫುಲ್ ಡಿಫರೆಂಟು. ಆತ ತನ್ನ ಬ್ರ್ಯಾಂಚಿನ ವಿರುದ್ಧ ಮಹಿಳಾ ಗ್ರಾಹಕಿಯೊಬ್ಬಳು ಮಾಡಿದ ಆರೋಪದಿಂದ ಕೆರಳಿ ಮಾಡಿದ ಸಾಹಸ ಕೋಲಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ!
ನಡೆದದ್ದೇನೆಂದರೆ, ಕಳೆದ ವರ್ಷದ ಡಿಸೆಂಬರ್ ಇಪ್ಪತ್ತರಂದು ಕ್ಷಿಯೋ ಎಂಬಾಕೆ ಆಲಿಬಾಬಾದಲ್ಲಿ ೩೦೦ ಯುವಾನ್ ಬೆಲೆಯ ಒಂದಷ್ಟು ಬಟ್ಟೆಗಳನ್ನು ಆರ್ಡರ್ ಮಾಡಿದ್ದಳು. ಹಾಗೆ ಬುಕ್ ಮಾಡೋವಾಗ ಅದಾಗಿ ಮೂರು ದಿನದೊಳಗೆ ಆ ಬಟ್ಟೆಗಳು ತಲುಪುತ್ತವೆ ಅಂತ ಅಲಿಬಾಬಾ ಆನ್ಲೈನ್ ಶಾಂಪಿಂಗ್ ಕಡೆಯಿಂದ ನೋಟ್ ಬಂದಿತ್ತು. ಆದರೆ ಮೂರು ದಿನ ಕಳೆದು ನಾಲಕ್ಕಾದರೂ ಬಟ್ಟೆಗಳ ಸುಳಿವಿಲ್ಲದ್ದರಿಂದ ಕ್ಷಿಯೋ ರೊಚ್ಚಿಗೆದ್ದಿದ್ದಳು. ಈ ಬಗ್ಗೆ ಆಲಿಬಾಬಾ ಸಂಸ್ಥೆಯ ಮುಖ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಳು. ಇದರಿಂದಾಗಿ ಈಕೆಯ ಆರ್ಡರನ್ನು ತೆಗೆದುಕೊಂಡಿದ್ದ ಬ್ರ್ಯಾಂಚಿನ ಮಾಲೀಕ ಝಾಂಗ್ ಏಕಾಏಕಿ ೧೨ ಪಾಯಿಂಟುಗಳನ್ನು ಕಳೆದುಕೊಂಡಿದ್ದ.
ಇದನ್ನು ಝಾಂಗ್ ಯಾವ ಪರಿ ಪರ್ಸನಲ್ ಆಗಿ ತೆಗೆದುಕೊಂಡಿದ್ದನೆಂದರೆ, ತನ್ನ ಬ್ರ್ಯಾಂಚ್ ವಿರುದ್ಧ ದೂರು ನೀಡಿದ್ದ ಕ್ಷಿಯೋ ಮೊಬೈಲ್ ನಂಬರಿಗೆ ಸರಣಿಯೋಪಾದಿಯಾಗಿ ಬೆದರಿಕೆಗಳನ್ನು ರವಾನಿಸಿದ್ದ. ಅಷ್ಟಾದರೂ ಸಮಾಧಾನವಾಗದಿದ್ದಾಗ ಆಕೆಯನ್ನು ಹುಡುಕಿಕೊಂಡು ಹೋಗಿ ತದುಕುವ ಅನಾಹುತಕಾರಿ ನಿರ್ಧಾರ ತೆಗೆದುಕೊಂಡ ಝಾಂಗ್ ಹೊರಟೇ ಬಿಟ್ಟಿದ್ದ. ಕಡೆಗೂ ೮೦೦ ಕಿಲೋಮೀಟರುಗಳಷ್ಟು ದೂರ ಹೋಗಿ ಕ್ಷಿಯೋ ಮನೆಯನ್ನು ಪತ್ತೆಹಚ್ಚಿದ್ದ. ಆ ನಂತರ ನಡೆದದ್ದೆಲ್ಲವೂ ಅನಾಹುತ. ಝೆಂಗ್ಜಾಹು ಏರಿಯಾದಲ್ಲಿ ಕ್ಷಿಯೋ ಮನೆಗೆ ನುಗ್ಗಿದ ಝಾಂಗ್ ಆಕೆಯನ್ನು ಸಾಯ ಬಡಿದಿದ್ದ. ಮೊದಲನೇ ಮಹಡಿಯಿಂದ ಆಕೆಯನ್ನು ಎತ್ತಿ ಹೊರಗೆಸೆದ ಬಳಿಕ ಸಮಾಧಾನಗೊಂಡವನಂತೆ ಮತ್ತೆ ೮೦೦ ಕಿಲೋಮೀಟರ್ ಪ್ರಯಾಣ ಮಾಡಿ ತನ್ನ ಆಫೀಸು ಸೇರಿದ್ದ. ಆದರೆ ಅದರ ಮರುಕ್ಷಣವೇ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದ ಝಾಂಗ್ನನ್ನು ಪೊಲೀಸರು ಎತ್ತಾಕಿಕೊಂಡು ಹೋಗಿ ರುಬ್ಬಿದ್ದಾರೆ!