ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಕ್ರೌರ್ಯದ ಅಧ್ಯಾಯಗಳನ್ನು ಉಳಿಸಿ ಹೋದವನು ಅಡಾಲ್ಫ್ ಹಿಟ್ಲರ್. ಕ್ರೂರತನದ ಉತ್ತುಂಗದಂತಿದ್ದ ಹಿಟ್ಲರ್ ವಿಶ್ವ ಕಂಡ ಅಪಾಯಕಾರಿ ಸರ್ವಾಧಿಕಾರಿಗಳಲ್ಲೊಬ್ಬ. ವಿರೋಧಿಗಳನ್ನು ಇರುವೆಗಳಿಗಿಂತ ಕಡೆಯಾಗಿ ಹೊಸಕಿದ ಹಿಟ್ಲರನದ್ದು ರಕ್ತಸಿಕ್ತ ವ್ಯಕ್ತಿತ್ವ. ಕರುಣೆಯ ಪರಿಚಯವೇ ಇಲ್ಲದಂತಿದ್ದ ಈತ ಕೊಲ್ಲಲು ಬಳಸುತ್ತಿದ್ದ ವಿಧಾನಗಳೇ ನಡುಕ ಹುಟ್ಟಿಸುವಂತಿವೆ. ಆತ ವಿಷಾನಿಲ ಬಿಟ್ಟು ಜನರನ್ನು ಕೊಂದ ಕಥೆ ಜನಜನಿತ. ಆದ್ರೆ ಆತ ಚಪ್ಪರಿಸಿ ತಿನ್ನೋ ಚಾಕೋಲೇಟ್ ಅನ್ನೂ ಕೂಡಾ ಕೊಲ್ಲಲು ಬಳಸಿದ್ದ ಮಹಾ ಕಿರಾತಕ.
ಇಡೀ ಜಗತ್ತನ್ನೇ ತನ್ನ ಕೈ ವಶ ಮಾಡಿಕೊಳ್ಳಬೇಕೆಂಬ ರಣ ಹಸಿವಿಂದ ತೊನೆದಾಡಿದ್ದವನು ಹಿಟ್ಲರ್. ಆರಂಭದಲ್ಲಿ ಭಾವನೆ ಕೆರಳಿಸಿ ಜನರನ್ನ ಮರುಳು ಮಾಡಿದ್ದ ಆತ ಅದನ್ನೇ ಅಸ್ತ್ರವಾಗಿಸಿಕೊಂಡಿದ್ದ. ಆದರೂ ಅವನ ಹಿಕಮತ್ತಿನ ವಿರುದ್ಧ ಅನೇಕರು ಬಂಡೆದ್ದಿದ್ದರು. ಅಂಥವರನ್ನೆಲ್ಲ ಕ್ರೂರ ಹಾದಿಯಲ್ಲಿ ಕೊಂದ ಹಿಟ್ಲರ್ಗೆ ಎಥಿಕ್ಸ್ ಅನ್ನೋದರ ಪರಿಚಯವೇ ಇರಲಿಲ್ಲ. ಅದಿದ್ದಿದ್ದರೆ ಚಾಕೋಲೇಟ್ ಬಾಂಬು ತಯಾರಿಸಿ ಮೋಸದಿಂದ ಕೊಲ್ಲೋ ಮಾರ್ಗವನ್ನಾತ ಅನುಸರಿಸುತ್ತಿರ್ಲಿಲ್ಲ.
ಹಿಟ್ಲರ್ ಮಾರ್ಗದರ್ಶನದಲ್ಲಿಯೇ ಚಾಕೋಲೇಟ್ ಕೋಟೆಡ್ ಬಾಂಬು ತಯಾರಾಗಿತ್ತು. ಸ್ಫೋಟಕ ಸಾಧನಗಳನ್ನ ಡಾರ್ಕ್ ಚಾಕೋಲೇಟಿನಿಂದ ಮುಚ್ಚಿ ಅದಕ್ಕೆ ಆಕರ್ಷಕವಾದ ಗೋಲ್ಡನ್ ರ್ಯಾಪರ್ ಸುತ್ತಲಾಗುತ್ತಿತ್ತು. ಅದನ್ನು ವಿರೋಧಿಗಳು ತಿಂದರೆ ಬಾಯಿ ಸ್ಫೋಟವಾಗಿ ಸತ್ತೇ ಹೋಗ್ತಿದ್ರು. ಹಾಗೆಯೇ ಹಿಟ್ಲರ್ ತನ್ನ ವಿರೋಧಿ ವಿನ್ಸಂಟ್ ಚರ್ಚಿಲ್ನನ್ನು ಕೊಲ್ಲಲೆತ್ನಿಸಿದ್ದ.
ವಿನ್ಸೆಂಟ್ ಚರ್ಚಿಲ್ ಮಹಾನ್ ಆಹಾರಪ್ರಿಯ. ಆಗಾಗ ಅಂತಃಪುರಕ್ಕೆ ಬಂದು ಗಡದ್ದಾಗಿ ತಿಂದು ಸುಖಿಸುವ ರೂಢಿ ಆತನದ್ದಾಗಿತ್ತು. ಅಂಥಾ ಚರ್ಚಿಲ್ನನ್ನು ಚಾಕೋಲೇಟ್ ಬಾಂಬಿಟ್ಟು ಉಡಾಯಿಸಲು ಹಿಟ್ಲರ್ ಯೋಜಿಸಿದ್ದ. ಚರ್ಚಿಲ್ನ ಟೇಬಲ್ಲಿನಲ್ಲಿಯೇ ಚಾಕೋಲೇಟ್ ಬಾಂಬಿಡಲೂ ವ್ಯವಸ್ಥೆ ಮಾಡಿದ್ದ. ಆದರೆ ಅದನ್ನು ಚರ್ಚಿಲ್ಲನ ಬೇಹುಗಾರಿಕಾ ಪಡೆ ಹೇಗೋ ಪತ್ತೆ ಹಚ್ಚಿತ್ತು. ಆ ಕಾರಣದಿಂದಾನೇ ಹಿಟ್ಲರನ ಪ್ಲ್ಯಾನು ಠುಸ್ ಆಗಿತ್ತು. ಕೊಂಚ ಯಾಮಾರಿದ್ದರೂ ಚರ್ಚಿಲ್ ಚಾಕೋಲೆಟ್ ಬಾಂಬ್ ತಿಂದು ಸತ್ತೇ ಹೋಗಿರ್ತಿದ್ದ.