ಕನ್ನಡದಲ್ಲಿ ಯಾವ ಪಾತ್ರಕ್ಕೂ ಸೈ ಅನ್ನುತ್ತಾ, ನಾಯಕಿಯಾಗಿ ಗಟ್ಟಿಯಾಗಿ ನೆಲೆಗಾಣಬಹುದಾದ ಪ್ರತಿಭಾನ್ವಿತ ನಟಿಯರಿದ್ದಾರೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವಾಕೆ ಅದಿತಿ ಪ್ರಭುದೇವ. ನಾಯಕಿಯಾಗಿ ಮಿಂಚಿದ್ದರೂ, ಹಳ್ಳಿ ಹುಡುಗಿಯ ಗುಣಲಕ್ಷಣಗಳನ್ನು ಇನ್ನೂ ಕಾಪಿಟ್ಟುಕೊಂಡಿರುವ ಅದಿತಿ ಒನ್ಸ್ ಅಪಾನ್ ಎ ಟೈಮ್ ಜಮಾಲಿಗುಡ್ಡ ಅಂತೊಂದು ಚಿತ್ರದ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗಷ್ಟೇ ಅದಿತಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾಳೆ. ಸಾಂಸಾರಿಕ ಜವಾಬ್ದಾರಿಗಳ ಜೊತೆ ಜೊತೆಗೇ ಸಿನಿಮಾ ಕೆರಿಯರ್ ಅನ್ನೂ ಸಂಭಾಳಿಸಿಕೊಳ್ಳುವ ತೀರ್ಮಾನಕ್ಕೆ ಅದಿತಿ ಬಂದಂತಿದೆ. ಅದರ ಭಾಗವಾಗಿಯೇ ಜಮಾಲಿಗುಡ್ಡ ಈಗ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇತ್ತೀಚೆಗಷ್ಟೇ ಆ ಚಿತ್ರದ ಟ್ರೈಲರ್ ಬಿಡುಗಡೆಗೊಂಡು, ಅದರೊಳಗಿನ ಸಾರ, ಅದಿತಿಯ ಭಿನ್ನ ಗೆಟಪ್ ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ.
ಅಂದಹಾಗೆ, ಇದು ಕುಶಾಲ್ ಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ. ಇದರಲ್ಲಿ ಡಾಲಿ ಧನಂಜಯ್ ಕೃಷ್ಣ ಎಂಬ ಪಾತ್ರದ ಮೂಲಕ ವಿಭಿನ್ನ ಗೆಟಪ್ಪಿನಲ್ಲಿ ಮಿಂಚಿದ್ದರೆ, ಅದಿತಿ ಅದಕ್ಕೆ ಸರಿಸಾಟಿಯಾದ ಅವತಾರದಲ್ಲಿ ರುಕ್ಮಿಣಿಯಾಗಿ ಸಾಥ್ ಕೊಟ್ಟಿದ್ದಾರೆÉ. ಸಿನಿಮಾಗಳ ಸಂಖ್ಯೆಗಿಂತಲೂ, ಪಾತ್ರದ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಕೊಡುವ ಅದಿತಿಗೆ ಈ ಚಿತ್ರದಲ್ಲಿ ನಿಜಕ್ಕೂ ಚೆಂದದ ಪಾತ್ರ ಸಿಕ್ಕಿದೆಯಂತೆ. ಅದರ ರೂಪುರೇಷೆಗಳು ಸದರಿ ಟ್ರೈಲರ್ನಲ್ಲಿ ಗೋಚರಿಸಿವೆ. ಈ ಸಿನಿಮಾ ಮೂಲಕವೇ ವಿವಾಹ ನಂತರದ ಅದಿತಿಯ ಸಿನಿಮಾ ಯಾನಕ್ಕೆ ಹೊಸಾ ಓಘ ಸಿಗುವ ಸಾಧ್ಯತೆಗಳಿದ್ದಾವೆ.