ದಶಕಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ, ಸಹ ಕಲಾವಿದನಾಗಿ ಮಿಂಚಿದ್ದವರು ಅಭಿಜಿತ್. ವಿಷ್ಣುವರ್ಧನ್ ಸಿನಿಮಾಗಳಲ್ಲಿ ನಟಿಸುತ್ತಾ, ಆ ಪಾತ್ರಗಳ ಮೂಲಕವೂ ಗುರುತಾಗಿದ್ದ ಅಭಿಜಿತ್ ಈಗೊಂದಷ್ಟು ವರ್ಷಗಳಿಂದ ನೇಪಥ್ಯಕ್ಕೆ ಸರಿದುಬಿಟ್ಟಿದ್ದರು. ಇತ್ತೀಚೆಗೆ ಕಿರುತೆರೆ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದ ಅವರೀಕ ಮತ್ತೆ ಸಿನಿಮಾ ನಾಯಕನಾಗಿ ಬಣ್ಣ ಹಚ್ಚಿದ್ದಾರೆ!
ಅಟ್ಲಿ ಎಂಬೊಂದು ಭಿನ್ನ ಕಥಾನಕದ ಚಿತ್ರದ ನಾಯಕನ ಪಾತ್ರಕ್ಕೆ ಅಭಿಜಿತ್ ಬಣ್ಣ ಹಚ್ಚಲಿದ್ದಾರೆ. ಹೆಸರೇ ಹೇಳುವಂತೆ ಇದೊಂದು ವಿಶಿಷ್ಟ ಮಾದರಿಯ ಚಿತ್ರ. ವಿಶೇಷವೆಂದರೆ, ಇದೇ ಮೊದಲ ಬಾರಿ ಮುಸ್ಲಿಂ ವ್ಯಕ್ತಿಯಾಗಿ ಅಭಿಜಿತ್ ಕಾಣಿಸಿಕೊಳ್ಳಲಿದ್ದಾರೆ. ನಿಜ ಜೀವನದಲ್ಲಿ ಅವರು ಶುದ್ಧ ಸಸ್ಯಾಹಾರಿ. ಮಾಂಸವಿರಲಿ; ಮೊಟ್ಟೆಯ ರುಚಿಯನ್ನೂ ಆತ ನೋಡಿಲ್ಲ. ಅಂಥಾ ಅಭಿಜಿತ್ ಈ ಸಿನಿಮಾದಲ್ಲಿ ಮಟನ್ ಅಂಗಡಿ ಮಾಲೀಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಭಿಜಿತ್ಗೆ ಜೋಡಿಯಾಗಿ ಅಳುಮುಂಜಿ ಶ್ರುತಿ ನಟಿಸಲಿದ್ದಾರೆ. ಈಗ್ಗೆ ಮೂವತ್ತು ವರ್ಷಗಳ ಹಿಂದೆ ಅಭಿಜಿತ್ ಮತ್ತು ಶ್ರುತಿ ಜೋಡಿ ಮೋಡಿ ಮಾಡಿತ್ತು. ಅದು ಪ್ರೇಕ್ಷಕರ ಇಷ್ಟದ ಪೇರ್ ಅನ್ನಿಸಿಕೊಂಡಿತ್ತು. ಇದೀಗ ಮೂರು ದಶಕಗಳ ನಂತರ ಅವರು ಮತ್ತೆ ಜೋಡಿಯಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳಲ್ಲಿಯೇ ಬ್ಯುಸಿಯಾಗಿದ್ದ ಶ್ರುತಿಗೂ ಕೂಡಾ ಈ ಮೂಲಕ ಒಂದೊಳ್ಳೆ ಪಾತ್ರ ಸಿಕ್ಕಿದೆಯಂತೆ.