ಮನುಷ್ಯರು ಎಲ್ಲವನ್ನೂ ತಿಳಿದುಕೊಂಡೆವೆಂದು ಬೀಗುತ್ತಾ ಪದೇ ಪದೆ ಪ್ರಕೃತಿಯ ಹೊಡೆತಗಳ ಮುಂದೆ ಮಂಡಿಯೂರ್ತಾರೆ. ಯಾಕಂದ್ರೆ ಪ್ರಕೃತಿಯ ನಿಗೂಢ ಜಾಡನ್ನು ಅರಿಯೋದು ಅಷ್ಟು ಸಲೀಸಿನ ಸಂಗತಿಯಲ್ಲ. ಈ ಕಾರಣದಿಂದಲೇ ಪ್ರಾಕೃತಿಕ ವಿಕೋಪಗಳು ಮನುಷ್ಯ ನಿರ್ಮಿತವಾದ ಎಲ್ಲವನ್ನೂ ನಾಮಾವಶೇಷ ಮಾಡಿ ಹಾಕುತ್ತೆ. ನಾವು ಭೂಕಂಪದಂಥಾ ಆಘಾತವನ್ನು ಗ್ರಹಿಸಲು ಮಾಪಕಗಳನ್ನ ಅಳವಡಿಸುತ್ತೇವೆ. ಆದರೆ ಅದಕ್ಕೂ ಮೊದಲೇ ಅದರ ಜಾಡು ಹಾವು ಪಕ್ಷಿಗಳಂಥಾ ಜೀವಿಗಳಿಗೆ ಸಿಕ್ಕು ಬಿಟ್ಟಿರುತ್ತೆ.
ಸಾಮಾನ್ಯವಾಗಿ ಪ್ರಕೃತಿಯಲ್ಲಿ ಏನೇ ಅಸಮತೋಲನವಾದ್ರೂ ಪಕ್ಷಿಗಳಿಗೆ ಬೇಗ ಗೊತ್ತಾಗುತ್ತೆ ಎಂಬ ನಂಬಿಕೆಯಿದೆ. ಆದ್ರೆ ಪ್ರಪಂಚದ ಬಹುತೇಕ ಭೂಭಾಗಗಳಲ್ಲಿ ವಾಸಿಸೋ ಹಾವುಗಳಿಗೆ ಅಂಥಾ ಶಕ್ತಿ ಹೆಚ್ಚಾಗಿರುತ್ತೆ. ಅದ್ರಲ್ಲಿಯೂ ಭೂಕಂಪನದಂಥಾ ಅವಘಡವನ್ನ ಹಾವಿನಷ್ಟು ಬೇಗನೆ ಮತ್ಯಾವ ಜೀವಿಯೂ ಪತ್ತೆಹಚ್ಚೋದಿಲ್ಲ ಅನ್ನೋದನ್ನ ವಿಜ್ಞಾನಿಗಳೇ ಆವಿಷ್ಕರಿಸಿದ್ದಾರೆ. ಈ ಬಗೆಗಿನ ವಿವರಗಳನ್ನ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.
ಹಾವುಗಳಿಗೆ ಎಪ್ಪತೈದು ಮೈಲಿ ದೂರದಲ್ಲಾಗೋ ಭೂಕಂಪನದ ಸುಳಿವೂ ಮೊದಲೇ ಸಿಗುತ್ತಂತೆ. ತಾವು ವಾಸಿಸೋ ಪ್ರದೇಶದ ಸರಹದ್ದಿನಲ್ಲಿ ಸಂಭವಿಸಬಹುದಾದ ಭೂಕಂಪವನ್ನು ಅವು ಐದು ದಿನ ಮೊದಲೇ ಗ್ರಹಿಸ್ತವಂತೆ. ಹೆಚ್ಚೂಕಮ್ಮಿ ಅದರ ತೀವ್ರತೆ ಏನಿರಬಹುದೆಂಬ ಅಂದಾಜೂ ಕೂಡಾ ಹಾವುಗಳಿಗೆ ಸಿಕ್ಕುಬಿಟ್ಟಿರುತ್ತೆ. ಭೂಮಿಯ ಸೂಕ್ಷ್ಮ ಕದಲಿಕೆಗಳನ್ನ ತಕ್ಷಣಕ್ಕೆ ಗ್ರಹಿಸೋ ಶಕ್ತಿ ಹಾವುಗಳಿಗಿರುತ್ತೆ. ಈ ಕಾರಣದಿಂದಲೇ ಭೂಕಂಪದ ಸುಳಿವು ಸಿಕ್ಕಾಗ ಅವು ಆವಾಸ ಸ್ಥಾನ ಬಿಟ್ಟು ಹೊರಗೆ ಅಡ್ಡಾಡುತ್ವೆ.
ಒಂದು ವೇಳೆ ತೀವ್ರವಾದ ಭೂಕಂಪ ಸಂಭವಿಸೋ ಸುಳಿವು ಸಿಕ್ಕಿದ್ರೆ ಹಾವುಗಳು ವಾಸದ ಪ್ರದೇಶ ಬಿಟ್ಟು ಮೈಲಿಗಟ್ಟಲೆ ದೂರ ಹೋಗುತ್ತವೆ. ಚೀನಾದಲ್ಲಿ ಆಧುನಿಕ ಸಲಕರಣೆಗಳನ್ನ ಬಳಸಿ ಹಾವುಗಳ ಮೇಲೆ ನಿಗಾ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ವಿಜ್ಞಾನಿಗಳು ಭೂಕಂಪದ ವಿಚಾರವಾಗಿ ಹಾವುಗಳ ಮೇಲೆ ಪ್ರಯೋಗ ನಡೆಸಿದ್ದರು. ಅದು ಹಾವುಗಳಿಗಿರೋ ಅಸಾಧ್ಯ ಶಕ್ತಿಯನ್ನ ಸಾಬೀತು ಪಡಿಸಿದೆ.