ಅನಂತ್ ನಾಗ್ ಒಂದು ಸಿನಿಮಾದಲ್ಲಿ ನಟಿಸುತ್ತಾರೆಂದರೆ, ತಮ್ಮ ಪಾತ್ರದ ಬಗ್ಗೆ ಖುದ್ದು ಅವರೇ ಒಳ್ಳೆ ಮಾತುಗಳನ್ನಾಡುತ್ತಾರೆಂದರೆ ಆ ಚಿತ್ರದ ಬಗೆಗೊಂದು ಕುತೂಹಲ ಮೂಡದಿರಲು ಸಾಧ್ಯವೇ? ಈ ಕಾರಣದಿಂದಲೇ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರ ತಿಮ್ಮಯ್ಯ ಆಂಡ್ ತಿಮ್ಮಯ್ಯ. ಇದು ಸಂಜಯ್ ಶರ್ಮಾ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಇದು ಅವರ ಪಾಲಿಗೆ ಮೊದಲ ಸಿನಿಮಾವಾದ್ದರಿಂದ ಸಹಜವಾಗಿಯೇ ಪ್ರೇಕ್ಷಕರು ಮಹತ್ತರವಾದದ್ದೇನನ್ನೋ ಬಯಸಿದ್ದರು. ಹಾಗೆ ಹುಟ್ಟಿಕೊಂಡಿದ್ದ ಹತ್ತಾರು ಭಾವಗಳ ಒಡ್ಡೋಲಗದಲ್ಲಿ ತಿಮ್ಮಯ್ಯ ಆಂಡ್ ತಿಮ್ಮಯ್ಯ ಚಿತ್ರ ತೆರೆಗಂಡಿದೆ. ಏನೋ ಅಂದುಕೊಂಡು ಸಿನಿಮಾ ಮಂದಿರಗಳಿಗೆ ನುಗ್ಗಿದ ಮಂದಿ ಮುಖದಲ್ಲೀಗ ಅಯೋಮಯ ಛಾಯೆಯೊಂದು ಅಳಿಸಲಾಗದಂತೆ ಉಳಿದುಬಿಟ್ಟಿದೆ!
ಅನಂತ್ ನಾಗ್ ಲೆಜೆಂಡರಿ ನಟ. ಎಂಥಾ ಪಾತ್ರಕ್ಕಾದರೂ ಬೆರಗಾಗುವಂತೆ ಜೀವ ತುಂಬಬಲ್ಲ ಕಲಾವಿದ. ಇಂಥಾ ನಟರನ್ನು ಪ್ರಧಾನವಾಗಿಟ್ಟುಕೊಂಡು ಸಿನಿಮಾ ಮಾಡುವಾಗ ನಿರ್ದೇಶಕನಾದವನು ಎಲ್ಲ ಕೋನಗಳಿಂದಲೂ ಎಚ್ಚರವಹಿಸಬೇಕಾಗುತ್ತೆ. ಯಾಕೆಂದರೆ, ಕೊಂಚ ಯಾಮಾರಿದರೂ ಕೂಡಾ ಅದು ಆ ನಟನಿಗೆ ಅಪಮಾನಿಸಿದಂತಾಗುತ್ತೆ. ಆದರೆ, ಆ ನವನಿರ್ದೇಶಕ ಸಂಜಯ್ ಶರ್ಮಾ ಆ ಹಾದಿಯಲ್ಲಿ ಖಂಡಿತಾ ಎಡವಿದ್ದಾರೆ. ಒಂದಷ್ಟು ಚೆಂದಗಿದ್ದ ಕಥೆಯ ಸೂತ್ರವನ್ನು ಸಮರ್ಥವಾಗಿ ನಿಭಾಯಿಸೋದರಲ್ಲಿ ಸೋತಂತೆ ಕಾಣುತ್ತಾರೆ. ಅದರ ಫಲವಾಗಿ ಒಂದಿಡೀ ಸಿನಿಮಾವೇ ಸೊರಗಿದ ಸ್ಥಿತಿಯಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ.
ಒಂದಷ್ಟು ಫ್ರೆಶ್ ಆಗಿಯೇ ಸಿನಿಮಾ ತೆರೆದುಕೊಳ್ಳುತ್ತದೆ. ಒಂದಷ್ಟು ಭರವಸೆ ಮೂಡಿಸುವಂತೆ ದಿಗಂತನ ಎಂಟ್ರಿಯೂ ಆಗುತ್ತೆ. ಫಾರಿನ್ನಿಗೆ ಹೋಗಿ ಬ್ಯುಸಿನೆಸ್ ಮಾಡಬೇಕಂದುಕೊಳ್ಳೋ ನಾಯಕನಿಗೆ, ಆದಾಯ ಮೂಲವಾಗಿ ಕಾಣಿಸೋದು ಕೊಡಗಿನಲ್ಲಿರೋ ತಾತನ ಒಡೆತನದೊಂದು ಕೆಫೆ. ಅದನ್ನು ಮಾರಿ ಫಾರಿನ್ನಿಗೆ ತೆರಳೋ ನಿರ್ಧಾರ ಮಾಡೋ ನಾಯಕ ಕೊಡಗಿಗೆ ಬಂದಿಳಿಯುತ್ತಾನೆ. ಆ ನಂತರದಲ್ಲಿ ಕೊಡಗಿನ ವಾತಾವರಣದಲ್ಲಿ ಕಥೆ ಗರಿಬಿಚ್ಚಿಕೊಳ್ಳುತ್ತೆ. ಅಲ್ಲಿಯೇ ರಂಗುರಂಗಾದ ಅನಂತ್ ನಾಗ್ ಪಾತ್ರ ಅನಾವರಣವಾಗುತ್ತೆ. ಹಾಗೆ ಮುಚ್ಚಿ ಹೋಗಿದ್ದ ಕೆಫೆಯನ್ನು ಮಾರಲು ಬಂದ ನಾಯಕನ ಸುತ್ತಾ ಹಲವು ಪದರುಗಳಲ್ಲಿ ಕಥೆ ತೆರೆದುಕೊಳ್ಳುತ್ತೆ. ಇದೇ ಹೊತ್ತಿನಲ್ಲಿ ತಾನು ಪ್ರೀತಿಸಿದ್ದ ಹುಡುಗಿಯೊಂದಿಗಿನ ಎಂಗೇಜ್ಮೆಂಟು, ಹಾಗೆ ಕಮಿಟ್ ಆದ ಮೇಲೂ ಹಲವಾರು ವರ್ಷಗಳ ನಂತರ ಕಂಡ ಪಕ್ಕದ್ಮನೆ ಹುಡುಗಿಯೊಂದಿಗಿನ ಲವ್ವು… ಆ ನಂತರ ಏನಾಗುತ್ತೆ? ನಾಯಕ ಕೆಫೆ ಮಾರುತ್ತಾನಾ? ಅವನ ಲವ್ ಲೈಫ್ ಏನಾಗುತ್ತೆ ಅನ್ನೋದು ನಿಜವಾದ ಕುತೂಹಲ. ಆದರೆ, ಅದನ್ನು ನಿರೂಪಣೆ ಮಾಡಿರುವ ರೀತಿ, ದೃಷ್ಯ ಕಟ್ಟಿರುವ ಪರಿ ಮಾತ್ರ ಜಾಳು ಜಾಳು!
ನಿರ್ದೇಶಕ ಸಂಜಯ್ ಶರ್ಮಾ ಜಾಹೀರಾತು ಕ್ಷೇತ್ರದಲ್ಲಿರುವವರಂತೆ. ಹೆಚ್ಚೇನೂ ಬೇಡ, ಜಾಹೀರಾತಿನ ಚುರುಕುತನ, ಹೇಳಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳುವ ಗುಣಗಳನ್ನಾದರೂ ಅಳವಡಿಸಿಕೊಂಡಿದ್ದರೆ ಈ ಚಿತ್ರ ಬೇರೆಯದ್ದೇ ಲೆವೆಲ್ಲಿನಲ್ಲಿರುತ್ತಿತ್ತು. ಆದರೆ, ಅವರು ಇದನ್ನೊಂದು ಕೆಫೆಯ ಇಂಟೀರಿಯರ್ ಡಿಸೈನಿನ ಜಾಹೀರಾತೆಂಬಂತೆ ರೂಪಿಸಿದ್ದಾರೆ. ಯಾಕಂದ್ರೆ, ಬಹುಪಾಲು ಚಿತ್ರ ಕೆಫೆಯ ಸುತ್ತಲೇ ಗಿರಕಿ ಹೊಡೆಯುತ್ತೆ. ಕೆಫೆಯ ಮೇಲಾಟದ ನಡುವೆ ಬಡಪಾಯಿ ಪ್ರೇಕ್ಷಕರು ಎದೆಯಲ್ಲಿ ಕಫ ಕಟ್ಟಿಕೊಂಡಂತಾಗಿ ನರಳುತ್ತಾರೆ. ಪ್ರತೀ ಸೀನುಗಳೂ ಕೂಡಾ ಪ್ರೇಕ್ಷಕರಲ್ಲೊಂದು ಕೊರತೆ ಉಳಿಸುತ್ತಾ, ಅದುವರೆಗೆ ನೋಡಿದ ದೃಷ್ಯಗಳನ್ನೆಲ್ಲ ಮನಸಿಂದ ಅಳಿಸುತ್ತಾ ಸಾಗುತ್ತವೆ. ಇದುವೇ ಈ ಸಿನಿಮಾದ ಪ್ರಧಾನ ಹಿನ್ನಡೆ.
ದಿಗಂತ್, ಐಂದ್ರಿತಾ ರೇ ಸೇರಿದಂತೆ ಯಾವ ಪಾತ್ರಗಳೂ ಮನಸಿಗೆ ತಾಕುವುದಿಲ್ಲ. ಯಾವ ದೃಷ್ಯಗಳೂ ಕೂಡಾ ಪರದೆ ದಾಟಿ ಬಂದು ಪ್ರೇಕ್ಷಕರನ್ನು ಮುಟ್ಟುವಂತಿಲ್ಲ. ನಿರ್ದೇಶಕರು ಏನೋ ಮಾಡಲು ಹೋಗಿ, ಕಥೆಯ ಸೂತ್ರ ಕೈತಪ್ಪಿ ಹತಾಶರಾಗಿ ದೃಷ್ಯ ಕಟ್ಟಿದಂತೆ ಭಾಸವಾಗುತ್ತೆ. ಇನ್ನುಳಿದಂತೆ, ಅದೇನು ದಿಗಂತ್ ಇಂಥಾ ಪಾತ್ರಗಳನ್ನು ಬಯಸುತ್ತಾನೋ, ಅಥವಾ ವಿಧಿಯೇ ಆತನಿಗಾಗಿ ಇಂಥಾ ಪಾತ್ರಗಳನ್ನು ಸೃಷ್ಟಿಸುತ್ತದೋ ಭಗವಂತನೇ ಬಲ್ಲ. ಆತ ಪಾತ್ರದಲ್ಲಾಗಲಿ, ನಟನೆಯಲ್ಲಾಗಲಿ ಯಾವ ಹೊಸತನವೂ ಇಲ್ಲ. ಅದು ದಿಗಂತನ ದೌರ್ಭಾಗ್ಯವೋ, ಪ್ರೇಕ್ಷಕರದ್ದೋ ಅಂತೊಂದು ಗೊಂದರ ಸಿನಿಮಾದ ಸಿಕ್ಕುಗಳಂತೆಯೇ ಕಾಡುತ್ತೆ. ನಿರ್ದೇಶಕರಿಗೆ ಪುರಸೊತ್ತಿರಲಿಲ್ಲವೋ ಅಥವಾ ಮೂಡಿರಲಿಲ್ಲವೋ… ಈ ಚಿತ್ರದಲ್ಲಿ ಸಂಭಾಷಣೆಗಳೇ ಸಪ್ಪೆ ಸಪ್ಪೆ. ಇಲ್ಲಿನ ಡೈಲಾಗುಗಳು `ನೀವ್ ನೀವೇ ಮಾತಾಡ್ಕಳಿ’ ಅಂತ ಕಲಾವಿದರಿಗೆ ಕೇಳಿಕೊಂಡು ಸೃಷ್ಟಿಯಾದಂತಿವೆ.
ಇದೆಲ್ಲದರಾಚೆಗೆ ಇಡೀ ಸಿನಿಮಾವನ್ನು ಒಂದಷ್ಟು ಸಹತ್ವಾಗಿಸೋದು ಅನಂತ್ ನಾಗ್ ಅವರ ಪಾತ್ರ. ಎಲ್ಲ ಮಿತಿಗಳಾಚೆಗೂ ಅನಂತ್ ಆ ಪಾತ್ರಕ್ಕೆ ತಮ್ಮದೇ ಶೈಲಿಯಲ್ಲಿ ಜೀವ ತುಂಬಿದ್ದಾರೆ. ಆ ಮೂಲಕ ಒಂದಿಡೀ ಚಿತ್ರಕ್ಕೆ ಜೀವಕಳೆ ತುಂಬೋ ಪ್ರಯತ್ನ ಮಾಡಿದ್ದಾರೆ. ಪ್ಲಸ್ ಪಾಯಿಂಟಿಗಾಗಿ ತಡಕಾಡಿದರೆ, ಹಾಡುಗಳೂ ಕೂಡಾ ಪ್ರಧಾನವಾಗಿ ಕಣ್ಮುಂದೆ ಬರುತ್ತವೆ. ಬಹುತೇಕ ಹಾಡುಗಳು ಚೆನ್ನಾಗಿವೆ. ನಿಖರವಾಗಿ ಹೇಳಬೇಕೆಂದರೆ, ಈ ಚಿತ್ರ ನಿರ್ದೇಶಕನ ಸೂತ್ರ ಮೀರಿ ಹರಡಿಕೊಂಡಂತಿದೆ. ಪ್ರೇಕ್ಷಕರಂತೂ ಪ್ರತೀ ಘಟ್ಟದಲ್ಲಿಯೂ ತಿಮ್ಮಯ್ಯಾ ಆಡ್ ತಿಮ್ಮಯ್ಯ ಜೀವ ತಿನ್ಬೇಡಿ ದಮ್ಮಯ್ಯ ಎಂಬಂತೆ ನರಳುವಂತಾಗುತ್ತೆ. ಕಾಂತಾರ ನಂತರ ಜನ ಮತ್ತೆ ಸಿನಿಮಾ ಮಂದಿರಗಳತ್ತ ನುಗ್ಗುತ್ತಿದ್ದಾರೆ. ಚಿತ್ರರಂಗದ ಪಾಲಿಗಿದು ಒಳ್ಳೆ ಬೆಳವಣಿಗೆ. ಆದರೆ ತಿಮ್ಮಯ್ಯ ಆಂಡ್ ತಿಮ್ಮಯ್ಯ ಉತ್ಸಾಹದಲ್ಲಿರೋ ಪ್ರೇಕ್ಷಕರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ!