ಸಮುದ್ರದಲ್ಲಿ ವಾಸಿಸೋ ತಿಮಿಂಗಿಲ ಅತ್ಯಂತ ಅಪಾಯಕಾರಿ ಜಲಚರ. ಟನ್ನುಗಟ್ಟಲೆ ತೂಕದ, ಎಂಥಾ ದೊಡ್ಡ ಪ್ರಾಣಿಗಳನ್ನಾದರೂ ಸಲೀಸಾಗಿ ನುಂಗಿ ಜೀರ್ಣಿಸಿಕೊಳ್ಳಬಲ್ಲ ಸಾಮಥ್ರ್ಯ ಹೊಂದಿರೋ ತಿಮಿಂಗಿಲದ ಬಗೆಗಿನ ಸತ್ಯಗಳು ಅದರ ಗಾತ್ರದಷ್ಟೇ ಅಗಾಧವಾಗಿವೆ. ತಿಮಿಂಗಿಲ ಅತ್ಯಂತ ದೊಡ್ಡ ಗಾತ್ರದ ಜಲಚರ. ಹಾಗಿದ್ದ ಮೇಲೆ ಅವುಗಳ ಜೀವನ ಕ್ರಮ, ಅಂಗಾಗಗಳ ವಿಸ್ಮಯಗಳೂ ಕೂಡಾ ಅಷ್ಟೇ ದೊಡ್ಡ ಗಾತ್ರದ್ದಾಗಿರುತ್ತವೆ. ಒಂದು ಅಧ್ಯಯನ ತಿಮಿಂಗಿಲದ ಹೃದಯದ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳನ್ನು ಪತ್ತೆಹಚ್ಚಿದೆ.
ತಿಮಿಂಗಿಲಗಳು ಕಡಿಮೆ ಅಂದರೂ ನೂರಾ ಐವತ್ತು ಟನ್ಗಿಂತ ಅಧಿಕ ತೂಕ ಹೊಂದಿರುತ್ತವೆ. ಅವುಗಳು ಸುಮ್ಮನೊಮ್ಮೆ ಮಿಸುಕಾಡಲೂ ಕೂಡಾ ತೊಂಭತ್ತು ಅಡಿಗಳಷ್ಟು ವಿಶಾಲವಾದ ಪ್ರದೇಶ ಬೇಕಾಗುತ್ತೆ. ಇಂಥಾ ದೈತ್ಯ ಗಾತ್ರದ ಹೃದಯವೇ ಒಂದು ವಿಸ್ಮಯ. ತಿಮಿಂಗಿಲಗಳ ಗಾತ್ರಕ್ಕೆ ತಕ್ಕ ಹಾಗೆಯೇ ಅವುಗಳ ಹೃದಯವೂ ಇರುತ್ತದೆ. ಅದು ಎಷ್ಟು ದೊಡ್ಡದಾಗಿರುತ್ತೆ ಅಂದ್ರೆ, ಅದರ ಗಾತ್ರ ಕಾರುಗಳಷ್ಟಿರುತ್ತೆ. ಅದನ್ನು ತೂಕಕ್ಕಿಟ್ಟರೆ 1300 ಪೌಂಡುಗಳಷ್ಟು ತೂಗುತ್ತೆ.
ಕೇವಲ ಹೃದಯ ಮಾತ್ರವಲ್ಲದೆ ಅವುಗಳ ಪ್ರತೀ ಅಂಗಾಂಗಗಳೂ ಕೂಡಾ ಅಷ್ಟೇ ದೊಡ್ಡ ಗಾತ್ರದ್ದಾಗಿರುತ್ತವಂತೆ. ಅಷ್ಟು ದೊಡ್ಡದಾದ ದೇಹ ಪ್ರಕೃತಿಯನ್ನೆಲ್ಲ ಹೃದಯವೇ ತಡೆದುಕೊಳ್ಳಬೇಕಲ್ಲಾ? ಅದಕ್ಕೆಂದೇ ತಿಮಿಂಗಿಲಗಳ ಹೃದಯ ಹೆಚ್ಚು ಶಕ್ತಿಶಾಲಿಯಾಗಿರುತ್ತೆ. ಅದರ ಹೃದಯದ ಬಡಿತ ಸಮುದ್ರದೊಳಗೆ ಎರಡು ಕಿಲೋಮೀಟರುಗಳಷ್ಟು ದೂರ ಕೇಳಿಸುತ್ತೆ ಅಂದರೆ ಅದರ ತಾಖತ್ತು ಎಂಥಾದ್ದೆಂದು ಯಾರಿಗಾದ್ರೂ ಅರ್ಥವಾಗುತ್ತೆ. ಪ್ರತೀ ನಿಮಿಷಕ್ಕೆ ಎಂಟರಿಂದ ಹತ್ತು ಬಾರಿ ಮಾತ್ರವೇ ಬಡಿದುಕೊಳ್ಳೋದರಿಂದ ತಿಮಿಂಗಿಲಳ ಹೃದಯ ಬಡಿತ ಆ ಪಾಟಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆಯಂತೆ.