ವೈಜ್ಞಾನಿಕ ಭೂಮಿಕೆಯಲ್ಲಿ ಆಲೋಚಿಸುವವರ ಪಾಲಿಗೆ ಈ ದೆವ್ವ ಭೂತಗಳೆಲ್ಲವೂ ಒಂದು ಭ್ರಮೆ. ಅದರ ಆಚೀಚೆಗೆ ಇರೋದು ಬರೀ ಮಿಥ್ಯ ಮಾತ್ರ. ಆದ್ದರಿಂದ ಅದರ ಬಗ್ಗೆ ಹುಡುಕಾಡೋದಕ್ಕೆ ಏನೆಂದರೆ ಏನೂ ಉಳಿದುಕೊಂಡಿಲ್ಲ. ಒಂದೊಂದು ಪ್ರದೇಶಗಳ ರಚನೆ ಮತ್ತು ಅದು ಹುಟ್ಟಿಸೋ ಭೀತ ಭಾವನೆಗಳೇ ದೆವ್ವ-ಭೂತಗಳೆಂಬೋ ಕಲ್ಪನೆಯ ಮೂಲ ಅನ್ನೋದು ವಿಚಾರವಂತರ ಅಭಿಮತ. ಆದರೆ, ಇಂಥಾ ಸಥ್ಯದಾಚೆಗೂ ಈ ಸಮಾಜದಲ್ಲಿ ಒಂದಷ್ಟು ನಂಬಿಕೆಗಳು ಹಾಸು ಹೊಕ್ಕಾಗಿವೆ. ಕೆಲ ಪ್ರದೇಶಗಳು ಈವತ್ತಿಗೂ ಭೂತ ಪ್ರೇತಗಳ ಆವಾಸ ಸ್ಥಾನಗಳಾಗಿ ಬಿಂಬಿಸಲ್ಪಟ್ಟಿವೆ. ಈ ಕ್ಷಣಕ್ಕೂ ಐತಿಹಾಸಿಕ ಕೋಟೆಯೊಂದು ದೆವ್ವಗಳ ಆವಾಸ ಸ್ಥಾನದಂತಾಗಿ ಜನರಲ್ಲೊಂದು ಖಾಯಂ ಭಯವನ್ನ ಬಿತ್ತಿ ಬಿಟ್ಟಿದೆ.
ರಾಜಸ್ಥಾನದ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ ಮೈಚಾಚಿಕೊಂಡಿರೋ ಒಂದು ಕೋಟೆಗೂ ಕೂಡಾ ಅಂಥಾದ್ದೇ ಭೀಕರ ಚರ್ಯೆಯೊಂದು ಅಂಟಿಕೊಂಡಿದೆ. ಈ ಕೋಟೆಯಿರೋದು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಅರಾವಳಿ ಪರ್ವತ ಶ್ರೇಣಿಗಳಲ್ಲಿ. ಭಾನಗಡ್ ಕೋಟೆ ಎಂದೇ ಪ್ರಸಿದ್ಧಿ ಪಡೆದಿರೋ ಈ ಕೋಟೆ ಸುತ್ತಲ ಪ್ರದೇಶಗಳಲ್ಲೊಂದು ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಯಾಕಂದ್ರೆ ಅಲ್ಲಿ ಅದೆಷ್ಟೋ ದೆವ್ವ ಭೂತಗಳು ನೆಲೆಸಿದ್ದಾವೆಂಬ ನಂಬಿಕೆ ಎಲ್ಲರಲ್ಲಿದೆ. ಅದು ಅದೆಷ್ಟು ಬಲವಾಗಿದೆ ಅಂದ್ರೆ ಆ ಕೋಟೆಯತ್ತ ಸುತ್ತಮುತ್ತಲಿನ ಜನರ್ಯಾರೂ ಸುಳಿಯುವುದೂ ಇಲ್ಲ.
ಆ ಕೋಟೆ ಅದೆಷ್ಟು ಕುಖ್ಯಾತಿ ಗಳಿಸಿದೆ ಎಂದರೆ, ಕತ್ತಲಾವರಿಸುತ್ತಲೇ ಆ ಕೋಟೆಯ ಬಳಿ ಹೋಗೋದಿರಲಿ, ಆ ದಿಕ್ಕಿನತ್ತ ನೋಡಲೂ ಜನ ಭಯ ಪಡುತ್ತಾರಂತೆ. ಕೆಲ ಗಟ್ಟಿ ಗುಂಡಿಗೆಯ ಮಂದಿ ಹಗಲು ಹೊತ್ತಿನಲ್ಲಿ ಭೇಟಿ ನೀಡಿದ್ದಿದೆ. ಆದ್ರೆ ಹಾಗೆ ಹೋದವರು ರಕ್ತ ಕಾರಿ ಸಾಯುತ್ತಾರೆಂಬುದರಿಂದ ಮೊದಲ್ಗೊಂಡು ನಾನಾ ಭೀಕರ ಅಂತೆ ಕಂತೆಗಳಿವೆ. ಜನ ವೈಜ್ಞಾನಿಕ ತಳಹದಿಯ ಯಾವ ವಿಶ್ಲೇಷಣೆಗಳತ್ತಲೂ ಕಿವಿಗೊಡದೆ ಭಾನಗಡ್ ಕೋಟೆಯನ್ನು ಪರ್ಮನೆಂಟಾಗಿ ಭೂತದ ಮನೆಯಾಗಿಸಿ ಬಿಟ್ಟಿದ್ದಾರೆ!