ಮರುಭೂಮಿ ಎಂಬ ಪದ ಕೇಳಿದಾಕ್ಷಣ ಕುಂತಲ್ಲೇ ಬೆವರಾಡಿ, ಭಣಗುಡುವ ಮರಳು ರಾಶಿಯ ಚಿತ್ರಣ ಕಣ್ಣಿಗೆ ಕಟ್ಟುತ್ತೆ. ಹನಿ ನೀರಿಗೂ ತತ್ವಾರವಿರೋ ಆ ಪ್ರದೇಶದಲ್ಲಿ ಜನ ವಾಸಿಸುತ್ತಾರೆಂದರೆ ನಂಬಲು ಯಾರಿಗೇ ಆದರೂ ಕಷ್ಟವಾಗುತ್ತೆ. ಆದರೆ ಭೂಮಿಯ ನೈಸರ್ಗಿಕ ಚಮತ್ಕಾರಗಳು ನಮ್ಮ ನಿಲುಕಿಗೆ ಸಿಗುವಂಥವುಗಳಲ್ಲ. ನಮ್ಮ ಆಲೋಚನೆಯನ್ನೂ ಮೀರಿಕೊಂಡು ಭೂಮಿಯ ರಚನೆಗಿದೆ. ಅದಕ್ಕೆ ಪೂರಕವಾದ ವಾತಾವರಣವಿದೆ. ಅದಿಲ್ಲದೇ ಹೋಗಿದ್ದರೆ ಖಂಡಿತವಾಗಿಯೂ ಥಾರ್ ಮರುಭೂಮಿಯಲ್ಲೊಂದು ಸ್ವರ್ಗದಂಥ ಊರು ಸೃಷ್ಟಿಯಾಗಲು ಸಾಧ್ಯವೇ ಇರುತ್ತಿರಲಿಲ್ಲ.
ಥಾರ್ ಮರುಭೂಮಿ ಪ್ರವಾಸ ಪ್ರಿಯರನ್ನು ಸದಾ ಕೈ ಬೀಸಿ ಕರೆಯೋ ಸ್ಥಳ. ಬರಿಗಣ್ಣಿಗೆ ಬರೀ ಮರಳ ರಾಶಿ ಅಂತನ್ನಿಸೋ ಥಾರ್ ತನ್ನೊಡಲಲ್ಲಿ ಸಾಕಷ್ಟು ಅಚ್ಚರಿ, ನಿಗೂಢಗಳನ್ನು ಬಚ್ಚಿಟ್ಟುಕೊಂಡಿದೆ. ಅಲ್ಲಿಯೇ ಹುಟ್ಟಿಕೊಂಡಿರೋ ವಿರಳ ಓಯಾಸೀಸ್ಗಳ ಬಾಜಿನಲ್ಲಿಯೇ ಸುಂದರವಾದ ಬದುಕುಗಳು ಅರಳಿಕೊಂಡಿವೆ. ಈಗ ಹೇಳ ಹೊರಟಿರೋದು ಅಂಥಾದ್ದೇ ಒಂದು ಹಳ್ಳಿಯ ಬಗ್ಗೆ. ಅದು ಖಿಮ್ಸರ್ ಡ್ಯೂನ್ಸ್ ಎಂಬ ಹಳ್ಳಿ. ಈ ಹಳ್ಳಿಯೇ ಒಟ್ಟಾರೆ ಥಾರ್ನ ಸೌಂದರ್ಯಕ್ಕೆ ಹೊಸಾ ಕಳೆ ತಂದುಕೊಟ್ಟಿದೆ.
ಒಂದು ಕೆರೆಯಂಥಾ ನೀರಿನ ಜಾಗ. ಅದರ ಸುತ್ತಲೂ ಅಲ್ಲಲ್ಲಿ ಬೇರಿಳಿಸಿ ಬೆಳೆದಿರೋ ವಿಶೇಷ ಜಾತಿಯ ಮರ. ಅಂಥಾ ಮರಗಳಿಗೆ ಆತುಕೊಂಡಂತೆ ನಿರ್ಮಿಸಲಾಗಿರೋ ಪುಟ್ಟ ಪುಟ್ಟ ಮನೆಗಳು. ಆ ಗ್ರಾಮದಲ್ಲಿ ನಿಂತ ಅನಿಯಮಿತವಾದ ಸೂಯೋದಯ ಮತ್ತು ಸೂಯಾಸ್ಥಗಳನ್ನು ನೋಡಲೆಂದೇ ಪ್ರವಾಸಿಗರು ಹರಿದು ಬರುತ್ತಾರೆ. ಈ ಗ್ರಾಮ ಅತ್ಯಾಧುನಿಕ ಸೌಕರ್ಯಗಳಿಂದ ನಳನಳಿಸುತ್ತಿದೆ. ಆದರೆ ಪ್ರವಾಸೋದ್ಯಮ ಅದೆಷ್ಟೇ ಉತ್ತುಂಗದಲ್ಲಿದ್ದರೂ ಈ ಗ್ರಾಮ ಸ್ವಚ್ಛವಾಗಿದೆ. ಈಗಲೂ ತನ್ನ ತಾಜಾ ಸೌಂದರ್ಯವನ್ನ ಉಳಿಸಿಕೊಂಡಿದೆ.