ಅಪ್ಪು ಚಿತ್ರಗಳ ನಿರ್ದೇಶಕರಾಗಿ ಸರಣಿ ಗೆಲುವು ದಾಖಲಿಸಿದ್ದವರು ನಿರ್ದೇಶಕ ಸಂತೋಷ್ ಆನಂದ್ ರಾಮ್. ರಾಜಕುಮಾರ ಚಿತ್ರದ ಅಮೋಘ ಯಶದ ಬಳಿಕ, ಯುವರತ್ನ ಮೂಲಕವೂ ಆ ಕಾಂಬಿನೇಷನ್ ಪ್ರೇಕ್ಷಕರ ಮನಗೆದ್ದಿತ್ತು. ಪುನೀತ್ ಜೊತೆ ಮತ್ತೊಂದಷ್ಟು ಸಿನಿಮಾ ಮಾಡೋ ತುಡಿತ ಹೊಂದಿದ್ದ ಸಂತೋಷ್ ಆನಂದ್ರಾಮ್ ಎದೆಯಲ್ಲಿ ಈಗ ಉಳಿದುಕೊಂಡಿರೋದು ಅಪ್ಪು ಅಕಾಲಿಕ ನಿರ್ಗಮನದ ನೋವು ಮಾತ್ರ!
ಈಗ ಅಂಥಾದ್ದೊಂದು ನೋವಿಟ್ಟುಕೊಂಡೇ ರಾಜ್ಕುಮಾರ್ ಕುಟುಂಬದ ಕುಡಿಗೆ ಸಂತೋಷ್ ಸಾಥ್ ಕೊಟ್ಟಿದ್ದಾರೆ. ಅಪ್ಪು ಎದ್ದು ನಡೆದ ಬಳಿಕ ಒಂದು ನಿರ್ವಾತ ವಾತಾವರಣ ಸೃಷ್ಟಿಯಾಗಿದೆ. ಆ ಜಾಗವನ್ನು ಬೇರ್ಯಾರೂ ತುಂಬಲು ಸಾಧ್ಯವೇ ಇಲ್ಲ. ಆದರೆ, ಪ್ರತಿಭೆ, ಪರಿಶ್ರಮಗಳಲ್ಲಿ ರಾಜ್ ಕುಟುಂಬದ ಕುಡಿಯಾದ ಯುವರಾಜ್ ಕುಮಾರ್ ಅಪ್ಪು ಉತ್ತರಾಧಿಕಾರಿ ಎಂದೇ ಬಿಂಬಿಸಿಕೊಂಡಿದ್ದಾರೆ.
ಇದೀಗ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ, ಯುವ ನಾಯಕನಾಗಿ ನಟಿಸಿರೋ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಅದರ ಚಿತ್ರೀಕರಣ ಚಾಲೂ ಮಾಡಲು ತಂಡ ಅಣಿಗೊಂಡಿದೆ. ಯುವ ಕೂಡಾ ಸಾಕಷ್ಟು ತಯಾರಿಗಳೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಲಿದೆ. ಉಳಿಕೆ ಮಾಹಿತಿಗಳು ಹಂತ ಹಂತವಾಗಿ ಜಾಹೀರಾಗಲಿವೆ.