ಆತ ಅಂತರ್ಮುಖಿ. ಸಂಗೀತ ನಿರ್ದೇಶಕನಾಗಿ ಎಲ್ಲರಲ್ಲೊಂದು ಅಚ್ಚರಿ ಮೂಡಿಸಿದ್ದರೂ ಈ ಆಸಾಮಿ ಪಕ್ಕಾ ಮೂಡಿ. ಹೆಂಡತಿಯ ಜೊತೆಗೊಂದು ಫೋಟೋಗೆ ಪೋಸು ಕೊಡಲೂ ಕೊಸರಾಡುವ ಸಂಕೋಚ ಸ್ವಭಾವ… ಇಷ್ಟೆಲ್ಲ ಗುಣ ಲಕ್ಷಣಗಳನ್ನ ವಿವರಿಸುತ್ತಾ ಹೋದರೆ, ಖಂಡಿತವಾಗಿಯೂ ಕೇಳುಗರ ಮನಸಲ್ಲಿ ಒಂದು ಸ್ಪಷ್ಟವಾದ ಚಿತ್ರ ಮೂಡಿಕೊಳ್ಳುತ್ತೆ. ಅದು ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರದ್ದು!
ಯೋಗರಾಜ್ ಭಟ್ಟರ ಯಬುಡಾ ತಬುಡಾ ಶೈಲಿಗೆ ಸಂಗೀತದ ಒಗ್ಗರಣೆ ಹಾಕುತ್ತಲೇ ಫೇಮಸ್ ಆಗಿದ್ದವರು ಹರಿಕೃಷ್ಣ. ಯಾವುದೇ ಸಂಗೀತ ನಿರ್ದೇಶಕನ ಹಾಡಿಗಾಗಿ ಜನ ಕಾದು ಕೂರೋದಿದೆಯಲ್ಲಾ? ಅದು ಅತ್ಯಂತ ಅಪರೂಪದ ವಿದ್ಯಮಾನ. ಅಂಥಾದ್ದನ್ನು ಸಾಧ್ಯವಾಗಿಸಿದವರು ನಿಜಕ್ಕೂ ಗೆದ್ದಂತೆಯೇ. ಈ ನಿಟ್ಟಿನಲ್ಲಿ ಹೇಳೋದಾದರೆ, ಹರಿಕೃಷ್ಣ ಸಂಗೀತ ನಿರ್ದೇಶಕರಾಗಿ ದೊಡ್ಡ ಮಟ್ಟದಲ್ಲಿಯೇ ಗೆದ್ದಿದ್ದಾರೆ. ಅಂಥಾ ಹರಿ, ಖ್ಯಾತಿಯ ಉತ್ತುಂಗದಲ್ಲೇ, ಏಕಾಏಕಿ ಸಿನಿಮಾ ನಿರ್ದೇಶನದತ್ತ ಹೊರಳಿಕೊಳ್ಳುತ್ತಾರೆಂದರೆ ಅಚ್ಚರಿ ಮೂಡದಿರಲು ಸಾಧ್ಯವೇ?
ಅಂಥಾದ್ದೊಂದು ಅಚ್ಚರಿ ಯಜಮಾನ ಚಿತ್ರದ ಸಂದರ್ಭದಲ್ಲಿಯೇ ಎದುರಾಗಿತ್ತು. ಯಾಕೆಂದರೆ, ಆ ಸಂದರ್ಭದಲ್ಲಿ ನಿರ್ದೇಶಕರ ತಂಡದಲ್ಲಿ ಹರಿ ಕೂಡಾ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಅದು ದೊಡ್ಡ ಕನಸೊಂದಕ್ಕೆ ಹರಿ ನಡೆಸುತ್ತಿರೋ ತಾಲೀಮೆಂಬ ಅಂದಾಜು ಯಾರೆಂದರೆ ಯಾರಿಗೂ ಇರಲಿಲ್ಲ. ಹಾಗೆ ಯಜಮಾನ ಚಿತ್ರದ ಘಳಿಗೆಯಲ್ಲಿಯೇ ಹರಿ ನಿರ್ಮಾಪಕರಾದ ಬಿ ಸುರೇಶ್ ಮತ್ತು ಶೈಲಜಾ ನಾಗ್ ಅವರ ಮನಗೆದ್ದಿದ್ದರು. ಆ ಹೊತ್ತಿನಲ್ಲಿಯೇ ಹರಿ ಕ್ರಾಂತಿ ಚಿತ್ರಕ್ಕೆ ಸನ್ನದ್ಧರಾಗಿ ಬಿಟ್ಟಿದ್ದರು.
ಸಾಮಾನ್ಯವಾಗಿ, ಬಿ ಸುರೇಶ್ ಮತ್ತು ಶೈಲಜಾ ನಾಗ್ ಪ್ರತಿಯೊಂದರಲ್ಲಿಯೂ ಭಲೇ ಕಟ್ಟುನಿಟ್ಟು. ಒಂದಂಶ ಇಷ್ಟವಾಗದಿದ್ದರೆ ಅದನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳುವ ಜಾಯಮಾನ ಈ ದಂಪತಿಗಳದ್ದಲ್ಲ. ಹಾಗಿರುವಾಗ ಅವರೇ ಹರಿಯ ನಿರ್ದೇಶನದ ಕಸುವನ್ನು ನಂಬಿದ್ದಾರೆಂದರೆ, ಅದು ಸಾಮಾನ್ಯದ ಸಂಗತಿಯೇನಲ್ಲ. ಈ ವಿಚಾರವೇ ಹರಿ ಅದೆಂಥಾ ತಯಾರಿಯೊಂದಿಗೆ ಕ್ರಾಂತಿಯನ್ನು ರೂಪಿಸಿದ್ದಾರೆಂಬುದಕ್ಕೆ ಸಾಕ್ಷಿಯಂತಿದೆ.
ಹರಿಕೃಷ್ಣ ತಮ್ಮ ಕೆಲಸದ ಬಗ್ಗೆ ಪೋಸು ಕೊಡುವವರಲ್ಲ. ಈ ಹಿಂದೆ ಸಂಗೀತ ನಿರ್ದೇಶಕರಾಗಿದ್ದ ಕಾಲದಲ್ಲಿಯೂ ಅವರು ಹಾಗೆಯೇ ಇದ್ದರು. ನಿರ್ದೇಶಕರಾಗಿರೋ ಈ ಹೊತ್ತಿನಲ್ಲಿಯೂ ಮೌನ ಧರಿಸಿಯೇ ಓಡಾಡಿಕೊಂಡಿದ್ದಾರೆ. ಅಷ್ಟಕ್ಕೂ ಖುದ್ದು ದರ್ಶನ್ ಅವರೇ ಹರಿಯ ನಿರ್ದೇಶನವನ್ನ ಮೆಚ್ಚಿಕೊಂಡಿದ್ದಾರೆ. ಅವರ ಸಾರಥ್ಯದ ಕ್ರಾಂತಿ ತಮ್ಮ ವೃತ್ತಿ ಬದುಕಿನ ಮೈಲಿಗಲ್ಲಾಗುತ್ತದೆ ಎಂಬಂಥಾ ನಂಬಿಕೆ ಇಟ್ಟುಕೊಂಡಿದ್ದಾರೆ. ಒಟ್ಟಾರೆಯಾಗಿ, ಕ್ರಾಂತಿಯ ಮೂಲಕ ಹರಿಕೃಷ್ಣರ ಪ್ರತಿಭೆಯ ಮತ್ತೊಂದು ಮಜಲು ಅನಾವರಣಗೊಳ್ಳಲಿದೆ. ಅದು ಎಲ್ಲರನ್ನೂ ಚಕಿತಗೊಳಿಸೋದರಲ್ಲಿ ಯಾವ ಸಂದೇಹವೂ ಇಲ್ಲ.