ಹುಟ್ಟಿನಿಂದಲೇ ಮೂಗರಾದವರು, ಕಿವಿ ಕೇಳಿಸದ ಸಮಸ್ಯೆಯಿರುವವರು ಕೈ ಸನ್ನೆಯಲ್ಲಿಯೇ ಮಾತಾಡೋದು ಗೊತ್ತೇ ಇದೆ. ಅದು ಮೂಗರ ಕಥೆಯಾಯ್ತು. ಇನ್ನುಳಿದಂತೆ ಮಾತು ಬರುವವರಿಗೆ ಸಂವಹನ ನಡೆಸೋದಕ್ಕಾಗಿ ಇಡೀ ವಿಶ್ವದಲ್ಲಿ ನಾನಾ ಭಾಷೆಗಳಿದ್ದಾವೆ. ಈ ಭಾಷೆಗಳೇ ಯಾವ ಸಂಶೋಧನೆಗಳಿಗೂ ನಿಲುಕದಷ್ಟು ಸಂಖ್ಯೆಯಲ್ಲಿವೆ. ನಮ್ಮ ದೇಶವನ್ನೇ ತೆಗೆದುಕೊಂಡರೆ ಗ್ರಾಮೀಣ ಭಾಗಗಳಲ್ಲಿಯೂ ಹರಡಿಕೊಂಡಿರೋ ಭಾಷೆಗಳು ಮತ್ತವುಗಳ ಶೈಲಿಗಳು ಅಚ್ಚರಿಯ ಗುಡಾಣದಂತಿವೆ. ಆದರೆ ಮಾತು ಬಂದರೂ ಕೂಡಾ ಕೈ ಸನ್ನೆಯಲ್ಲಿಯೇ ಮಾತಾಡೋ ಜನರೂ ಈ ಭೂಮಿಯ ಮೇಲಿದ್ದಾರೆ. ಅವರ ಪಾಲಿಗೆ ಅಂಥಾ ಸನ್ನೆಗಳೇ ಭಾಷೆ!
ಈ ವಿಚಾರವನ್ನ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ. ಇದು ನಿಜಾನಾ ಎಂಬಂಥಾ ಸಂದೇಹವೂ ಕಾಡದಿರೋದಿಲ್ಲ. ಮಾತಾಡೋ ಶಕ್ತಿ ಇದ್ದರೂ ಜನ ಸನ್ನೆಗಳ ಮೂಲಕವೇ ಮಾತಾಡ್ತಾರೆ ಅಂದ್ರೆ ಸಹಜವಾಗಿಯೇ ಗುಮಾನಿ ಮೂಡಿಕೊಳ್ಳುತ್ತೆ. ಆದರಿದನ್ನ ನಂಬದೇ ವಿಧಿಯಿಲ್ಲ. ಯಾಕಂದ್ರೆ ಅಂಥಾ ವಿಚಿತ್ರ ಜನ ಪ್ರಸಿದ್ಧ ಪ್ರವಾಸಿಗರ ಸ್ವರ್ಗ ಎಂದೆನಿಸಿರೋ ಬಾಲಿಯಲ್ಲಿದೆ. ಇಲ್ಲಿನ ಬಿಂಕಲಾ ಎಂಬ ಒಂದಿಡೀ ಹಳ್ಳಿಯ ಜನ ಸನ್ನೆಗಳಲ್ಲಿಯೇ ಪರಸ್ಪರ ಮಾತಾಡಿಕೊಳ್ತಾರೆ.
ಬಾಲಿ ಅಂದರೆ ಭೂಲೋಕದ ನಿತ್ಯ ಸ್ವರ್ಗ. ಅಲ್ಲಿನ ಸುಂದರಾತಿ ಸುಂದರ ಪ್ರದೇಶಗಳಿಗೆ ವರ್ಷವೊಂದಕ್ಕೆ ಲಕ್ಷಾಂತರ ಪ್ರವಾಸಿಗರು ಎಡ ತಾಕ್ತಾರೆ. ಅದೇ ಬಾಲಿಯ ಪುಟ್ಟ ಹಳ್ಳಿಯೊಂದರಲ್ಲಿ ಇಂಥಾ ಸೈನ್ ಲ್ವಾಂಗ್ವೇಜ್ ಭಾಷೆಯಾಗಿ ಬಳಕೆಯಲ್ಲಿದೆ. ಆ ಪ್ರದೇಶದಲ್ಲಿ ಮಾತಾಡಲು ಭಾಷೆಯೇ ಇಲ್ಲ. ಅಲ್ಲಿ ಪ್ರತಿಯೊಬ್ಬರೂ ಕೂಡಾ ಕೈ ಸನ್ನೆಯಲ್ಲಿಯೇ ಮಾತಾಡುತ್ತಾರೆ. ಮಾತಾಡುವ ಶಕ್ತಿಯಿದ್ದರೂ ಕೂಡಾ ಸನ್ನೆಗಳನ್ನೇ ಭಾಷೆಯಾಗಿಸಿಕೊಂಡ ಜಗತ್ತಿನ ಅತ್ಯಂತ ವಿರಳ ಜನ ಇಲ್ಲಿ ವಾಸಿಸುತ್ತಿದ್ದಾರೆ.